ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Actress Soundarya: ನಟಿ ಸೌಂದರ್ಯ ಸಾವಿಗೆ ನಟ ಮೋಹನ್‌ ಬಾಬು ಕಾರಣ; ಹೊಸ ಬಾಂಬ್‌ ಸಿಡಿಸಿದ ವ್ಯಕ್ತಿ

Actress Soundarya: ಬಹುಭಾಷಾ ನಟಿ, ಕನ್ನಡ ಮೂಲದ ಸೌಂದರ್ಯ ಅವರ ಸಾವಿನ ವಿಚಾರ ಇದೀಗ ಮುನ್ನಲೆಗೆ ಬಂದಿದೆ. ಆಂಧ್ರ ಪ್ರದೇಶದ ಖಮ್ಮಂ ಜಿಲ್ಲೆಯ ಏದುರುಗಟ್ಲ ಚಿಟ್ಟಿಬಾಬು ಎನ್ನುವವರು ದೂರು ನೀಡಿ, ನಟ ಮೋಹನ್‌ ಬಾಬು ಅವರು ಸೌಂದರ್ಯ ಅವರನ್ನು ಕೊಲೆ ಮಾಡಿಸಿದ್ದಾರೆ ಎಂದಿದ್ದಾರೆ.

ನಟಿ ಸೌಂದರ್ಯ ಸಾವಿಗೆ ನಟ ಮೋಹನ್‌ ಬಾಬು ಕಾರಣ; ದೂರು ದಾಖಲು

ಸೌಂದರ್ಯ ಮತ್ತು ಮೋಹನ್‌ ಬಾಬು.

Profile Ramesh B Mar 11, 2025 6:45 PM

ಹೈದರಾಬಾದ್‌: ಸ್ನಿಗ್ಧ ಚೆಲುವು, ಸಹಜಾಭಿನಯದ ಮೂಲಕವೇ ಬಹುಭಾಷೆಗಳಲ್ಲಿ ಮಿಂಚುತ್ತಿದ್ದ ಅಪ್ಪಟ ಕನ್ನಡದ ಪ್ರತಿಭೆ ನಟಿ ಸೌಂದರ್ಯ (Actress Soundarya) ನಮ್ಮನ್ನಗಲಿ ಸುಮಾರು 21 ವರ್ಷ ಕಳೆದಿದೆ. ವಿವಿಧ ಚಿತ್ರರಂಗಗಳಲ್ಲಿ ಬಹು ಬೇಡಿಕೆ ಹೊಂದಿದ್ದ ಸಮಯದಲ್ಲೇ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದನ್ನು ಇಂದಿಗೂ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. 2004ರ ಏ. 17ರಂದು ನಿಧನರಾದಾಗ ಅವರಿಗೆ ಕೇವಲ 31 ವರ್ಷ ವಯಸ್ಸಾಗಿತ್ತು. ಇದೀಗ ಅವರ ಸಾವಿನ ವಿಚಾರ ದಿಢೀರ್‌ ಮುನ್ನಲೆಗೆ ಬಂದಿದೆ. ಸೌಂದರ್ಯ ಅವರದ್ದು ಸಹಜ ಸಾವಲ್ಲ, ಅವರನ್ನು ಕೊಲೆ ಮಾಡಲಾಗಿತ್ತು ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಟಾಲಿವುಡ್‌ನ ಹಿರಿಯ ನಟ ಮೋಹನ್‌ ಬಾಬು(Mohan Babu) ಈ ಕೊಲೆ ಮಾಡಿಸಿದ್ದಾರೆ ಎಂದು ಆ ವ್ಯಕ್ತಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಆಂಧ್ರ ಪ್ರದೇಶದ ಖಮ್ಮಂ ಜಿಲ್ಲೆಯ ಏದುರುಗಟ್ಲ ಚಿಟ್ಟಿಬಾಬು ಎನ್ನುವವರು ಈ ಬಗ್ಗೆ ದೂರು ದಾಖಲಿಸಿದ್ದು, ಹಿರಿಯ ನಟ ಮೋಹನ್‌ ಬಾಬು ವಿರುದ್ದ ಗಂಭೀರ ಆರೋಪ ಹೊರಿಸಿದ್ದಾರೆ. ಸೌಂದರ್ಯ ಸಾವಿಗೆ ಮೋಹನ್ ಬಾಬು ಕಾರಣ ಎಂದಿರುವ ಅವರು ಇದೀಗ ತಮ್ಮ ಜೀವಕ್ಕೆ ಸಹ ಬೆದರಿಕೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕಾರಣವೇನು?

ಜಮೀನು ವಿಚಾರಕ್ಕೆ ಮೋಹನ್‌ ಬಾಬು ಈ ಕೊಲೆ ಮಾಡಿಸಿದ್ದಾರೆ ಎಂದೂ ಚಿಟ್ಟಿಬಾಬು ಕಾರಣ ನೀಡಿದ್ದಾರೆ. ʼʼಸೌಂದರ್ಯ ಅವರು ಈಗಿನ ತೆಲಂಗಾಣದ ಶಂಷಾಬಾದ್​ನ ಜಲ್ಪಲ್ಲಿ ಗ್ರಾಮದ ಬಳಿ 6 ಎಕ್ರೆ ಜಮೀನು ಖರೀದಿಸಿದ್ದರು. ಆ ಜಾಗದ ಮೇಲೆ ಮೋಹನ್ ಬಾಬು ಕಣ್ಣು ಬಿದ್ದಿತ್ತು. ಅದನ್ನು ತಮಗೆ ಮಾರಾಟ ಮಾಡುವಂತೆ ಸೌಂದರ್ಯ ಬಳಿ ಕೇಳಿಕೊಂಡಿದ್ದರು. ಆದರೆ ಅದಕ್ಕೆ ಸೌಂದರ್ಯ ಮತ್ತು ಅವರ ಸಹೋದರ ಅಮರನಾಥ್‌ ಒಪ್ಪಲಿಲ್ಲ. ಇದರಿಂದ ಕುಪಿತರಾರ ಮೋಹನ್‌ ಬಾಬು ವಿಮಾನ ಅಪಘಾತದಲ್ಲಿ ಸೌಂದರ್ಯ ಮರಣ ಹೊಂದುವಂತೆ ಮಾಡಿದ್ದಾರೆ. ಅದಾದ ಬಳಿಕ ಆ 6 ಎಕ್ರೆ ಜಮೀನನ್ನು ಮೋಹನ್ ಬಾಬು ಅಕ್ರಮವಾಗಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆʼʼ ಎಂದು ಚಿಟ್ಟಿಬಾಬು ಆರೋಪಿಸಿದ್ದಾರೆ. ಸದ್ಯ ಅವರ ಈ ಆರೋಪ ಸಂಚಲ ಸೃಷ್ಟಿಸಿದೆ. ಮೋಹನ್‌ ಬಾಬು ಈ ಆರೋಪದ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

Telangana

ಅಂದು ಏನಾಗಿತ್ತು?

90ರ ದಶಕದಲ್ಲಿ ಸೌಂದರ್ಯ ದಕ್ಷಿಣ ಭಾರತೀಯ ಚಿತ್ರರಂಗ ಮಾತ್ರವಲ್ಲ ಬಾಲಿವುಡ್‌ನಲ್ಲೂ ಛಾಪು ಮೂಡಿಸಿದ್ದರು. ಅಮಿತಾಭ್‌ ಬಚ್ಚನ್‌, ವಿಷ್ಣುವರ್ಧನ್‌, ರವಿಚಂದ್ರನ್‌, ರಜನಿಕಾಂತ್‌, ಚಿರಂಜೀವಿ, ವಿಕ್ಟರಿ ವೆಂಕಟೇಶ್‌, ನಾಗಾರ್ಜುನ್‌, ಮೋಹನ್‌ ಬಾಬು ಮುಂತಾದ ಸ್ಟಾರ್‌ ನಟರ ಜತೆಗೆ ಅಭಿನಯಿಸಿದ್ದರು. ಹೀಗೆ ಯಶಸ್ಸಿನ ಉತ್ತುಂಗದಲ್ಲಿದ್ದ ಅವರು 2004ರಲ್ಲಿ ಬೆಂಗಳೂರಿನಲ್ಲಿ ನಡೆದ ಖಾಸಗಿ ವಿಮಾನ ಅಪಘಾತದಲ್ಲಿ ಇಹಲೋಕ ತ್ಯಜಿಸಿದ್ದರು. ಪಕ್ಷವೊಂದರ ಪ್ರಚಾರಕ್ಕಾಗಿ ಬೆಂಗಳೂರಿನಿಂದ ತೆಲಂಗಾಣದ ಕರೀಂನಗರಕ್ಕೆ ತೆರಳುತ್ತಿದ್ದಾಗ ವಿಮಾನ ನೆಲಕ್ಕಪ್ಪಳಿಸಿತ್ತು. ಮೋಹನ್‌ ಬಾಬು ಮತ್ತು ಸೌಂದರ್ಯ ʼಪೆದ್ದರಾಯಡುʼ, ʼಶ್ರೀ ರಾಮುಲಯ್ಯʼ ಮತ್ತಿತರ ತೆಲುಗು ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದಾರೆ.