ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಾಕಿಸ್ತಾನ ಮೂಲದ ಉಗ್ರ ಶಹಜಾದ್ ಭಟ್ಟಿ ನೇತೃತ್ವದ ಜಾಲದೊಂದಿಗೆ ಸಂಪರ್ಕ ಹೊಂದಿದ 200ಕ್ಕೂ ಹೆಚ್ಚು ಶಂಕಿತ ಭಯೋತ್ಪಾದಕರ ಬಂಧನ: ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ತಪ್ಪಿತು ಬಹುದೊಡ್ಡ ಆಪತ್ತು

Shahzad Bhatti: ಪಾಕಿಸ್ತಾನ ಮೂಲದ ಉಗ್ರ ಶಹಜಾದ್ ಭಟ್ಟಿ ನೇತೃತ್ವದ ಜಾಲದೊಂದಿಗೆ ಸಂಬಂಧ ಹೊಂದಿರುವ 200ಕ್ಕೂ ಹೆಚ್ಚು ಶಂಕಿತ ಭಯೋತ್ಪಾದಕರನ್ನು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಹಿರಂಗಪಡಿಸಿದ ನಂತರ, ಭಟ್ಟಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ.

ಉಗ್ರ ಶಹಜಾದ್ ಭಟ್ಟಿ (ಸಂಗ್ರಹ ಚಿತ್ರ)

ನವದೆಹಲಿ, ಆ. 17: ಪಾಕಿಸ್ತಾನ ಮೂಲದ ಉಗ್ರ ಶಹಜಾದ್ ಭಟ್ಟಿ (Shahzad Bhatti) ನೇತೃತ್ವದ ಜಾಲದೊಂದಿಗೆ ಸಂಬಂಧ ಹೊಂದಿರುವ 200ಕ್ಕೂ ಹೆಚ್ಚು ಶಂಕಿತ ಭಯೋತ್ಪಾದಕರನ್ನು ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಬಂಧಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Shah) ಬಹಿರಂಗಪಡಿಸಿದ ನಂತರ, ಭಟ್ಟಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. “ಸ್ವಾತಂತ್ರ್ಯ ದಿನಾಚರಣೆಗೆ ಮುನ್ನ ಮೋದಿ ಸರ್ಕಾರವು ಐಎಸ್‌ಐ ಬೆಂಬಲಿತ ಉಗ್ರ ಸಂಘಟನೆಯಾದ ಶಹಜಾದ್ ಭಟ್ಟಿಯ ಜಾಲವನ್ನು ನಾಶಪಡಿಸಿದ್ದು, 200ಕ್ಕೂ ಹೆಚ್ಚು ಉಗ್ರರನ್ನು ಬಂಧಿಸುವ ಮೂಲಕ ವಿಧ್ವಂಸಕ ದಾಳಿಗಳನ್ನು ನಡೆಸುವ ಯೋಜನೆಗಳನ್ನು ವಿಫಲಗೊಳಿಸಿದೆ” ಎಂದು ಶಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ, ಭಾರತೀಯ ನ್ಯಾಯ ಸಂಹಿತ, ಶಸ್ತ್ರಾಸ್ತ್ರ ಕಾಯ್ದೆ, ಎನ್‌ಡಿಪಿಎಸ್ ಕಾಯ್ದೆ ಮತ್ತು ಸ್ಫೋಟಕ ವಸ್ತುಗಳ ಕಾಯ್ದೆಯಡಿ ಶಹಜಾದ್ ಭಟ್ಟಿ ಜಾಲದ ವಿರುದ್ಧ 80ಕ್ಕೂ ಹೆಚ್ಚು ಎಫ್‌ಐಆರ್‌ಗಳು ಮತ್ತು 200ಕ್ಕೂ ಹೆಚ್ಚು ಬಂಧನಗಳು ದಾಖಲಾಗಿವೆ ಎಂದು ಗೃಹ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಪಾಕಿಸ್ತಾನದ ಆರ್ಡ್‌ನನ್ಸ್ ಫ್ಯಾಕ್ಟರಿ ಮುದ್ರೆಗಳನ್ನು ಹೊಂದಿರುವ ಐಇಡಿಗಳು, ಗ್ರೆನೇಡ್‌ಗಳು, ಪಿಸ್ತೂಲ್‌ಗಳು, ಜೀವಂತ ಗುಂಡುಗಳು ಮತ್ತು ಬೇಹುಗಾರಿಕೆಗೆ ಬಳಸುವ ಸಿಸಿಟಿವಿಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವೆಲ್ಲವೂ ಈ ಜಾಲಕ್ಕೆ ನೇರ ಗಡಿಯಾಚೆಗಿನ ಸಂಪರ್ಕ ಇರುವುದನ್ನು ಖಚಿತಪಡಿಸುತ್ತವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ; ಬೆಂಗಳೂರಿನಲ್ಲಿ ಶಂಕಿತ ಉಗ್ರನ ಬಂಧನ!

ಶಹಜಾದ್ ಭಟ್ಟಿ ಯಾರು?

ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಭಾರತೀಯ ಭದ್ರತಾ ಸಂಸ್ಥೆಗಳ ನಿಗಾದಲ್ಲಿರುವ ಪ್ರಮುಖ ಗಡಿಯಾಚೆಗಿನ ಅಪರಾಧಿಗಳಲ್ಲಿ ಭಟ್ಟಿ ಕೂಡ ಒಬ್ಬ. ಪಾಕಿಸ್ತಾನ ಮತ್ತು ಗಲ್ಫ್‌ ಪ್ರದೇಶದಿಂದ ಕಾರ್ಯಾಚರಣೆ ನಡೆಸುತ್ತಿದ್ದಾನೆ ಎನ್ನಲಾದ, ಗ್ಯಾಂಗ್‌ಸ್ಟರ್‌ನಿಂದ ಭಯೋತ್ಪಾದಕ ಹ್ಯಾಂಡ್ಲರ್ ಆಗಿ ಬದಲಾಗಿರುವ ಭಟ್ಟಿ, ಭಾರತದಲ್ಲಿ ಉಗ್ರರನ್ನು ನೇಮಿಸಿಕೊಳ್ಳಲು ಮತ್ತು ಅಪರಾಧ ಕೃತ್ಯಗಳನ್ನು ಸಂಯೋಜಿಸಲು ಸಾಮಾಜಿಕ ಮಾಧ್ಯಮ ಹಾಗೂ ಎನ್‌ಕ್ರಿಪ್ಟ್ ಮಾಡಿದ ಸಂವಹನ ವೇದಿಕೆಗಳನ್ನು ಬಳಸಿಕೊಳ್ಳುತ್ತಿದ್ದಾನೆ.

ಎನ್ಐಎ ಮತ್ತು ರಾಜ್ಯ ಪೊಲೀಸ್ ತನಿಖೆಗಳ ಪ್ರಕಾರ, ಭಟ್ಟಿ ಉತ್ತರ ಭಾರತದಲ್ಲಿ ಹಲವು ದಾಳಿಗಳ ಮಾಸ್ಟರ್ ಮೈಂಡ್ ಎನಿಸಿಕೊಂಡಿದ್ದಾನೆ. 2025ರಲ್ಲಿ ಜಲಂಧರ್ ಮೂಲದ ಯುಟ್ಯೂಬರ್ ರೋಜರ್ ಸಂಧು ಅವರ ನಿವಾಸದ ಮೇಲೆ ನಡೆದ ಗ್ರೆನೇಡ್ ದಾಳಿಯಲ್ಲಿ ಆತನ ಹೆಸರನ್ನು ಉಲ್ಲೇಖಿಸಲಾಗಿದೆ.

ಅಂಬಾಲದ ಬಲದೇವ್ ನಗರ ಪೊಲೀಸ್ ಠಾಣೆಯಲ್ಲಿ ನಡೆದ ಐಇಡಿ ಕಾರ್ ಬಾಂಬ್ ಸ್ಫೋಟಕ್ಕೂ ಸಂಬಂಧಿಸಿದಂತೆ ಆತನ ಮೇಲೆ ಆರೋಪಪಟ್ಟಿ ಸಲ್ಲಿಸಲಾಗಿದೆ. ಹಿಮಾಚಲ ಪ್ರದೇಶದ ನಲಗಢದ ಪೊಲೀಸ್ ಠಾಣೆಯಲ್ಲಿ ನಡೆದ ಗ್ರೆನೇಡ್ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಎಂದು ಗುರುತಿಸಲಾಗಿದ್ದು, ಇದನ್ನು ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್‌ (ಬಿಕೆಐ) ಸಹಯೋಗದೊಂದಿಗೆ ನಡೆಸಲಾಗಿದೆ ಎಂದು ಹೇಳಲಾಗಿದೆ.