ಲಖನೌ, ಜೂ. 15: ಉತ್ತರ ಪ್ರದೇಶದ (Uttar Pradesh) ಮೀರತ್‌ನ ಮಸೀದಿಯೊಂದರಲ್ಲಿ ವಿವಾದವೊಂದು ಹೊರಹೊಮ್ಮಿದೆ. ಅಧಿಕಾರಿಗಳು ಮಸೀದಿಯನ್ನು ಪೊಲೀಸ್ ಠಾಣೆಯ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಮಸೀದಿ ಆಡಳಿತ ಮಂಡಳಿಯು ಇದನ್ನು ವಕ್ಫ್ ಆಸ್ತಿಯಲ್ಲಿ (Waqf Board) ನಿರ್ಮಿಸಲಾಗಿದೆ ಎಂದು ಹೇಳುತ್ತಿದೆ. ಅತಿಕ್ರಮಣವನ್ನು ತೆರವುಗೊಳಿಸಲು ಮತ್ತು ಮಾಲೀಕತ್ವದ ದಾಖಲೆಗಳನ್ನು ನೀಡುವಂತೆ ಕೋರಿ ಮಸೀದಿಯ ಇಮಾಮ್‌ಗೆ ಏಳು ದಿನಗಳ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಕಂದಾಯ ಇಲಾಖೆಯ ಸಮೀಕ್ಷೆಯಲ್ಲಿ ಖಾರ್ಖೋಡಾ ಪೊಲೀಸ್ ಠಾಣೆ ಆವರಣದಲ್ಲಿರುವ ಹಾಗೂ ಸ್ಥಳೀಯವಾಗಿ ಠಾಣೆ ವಾಲಿ ಮಸೀದಿ ಎಂದು ಕರೆಯಲ್ಪಡುವ ಜಾಮಾ ಮಸೀದಿ, ಪೊಲೀಸ್ ಠಾಣೆಗೆ ಸೇರಿದ ಭೂಮಿಯ ಮೇಲೆ ನಿರ್ಮಿಸಲಾಗಿದೆ ಎಂದು ಆರೋಪಿಸಲಾಗಿದೆ. ಸಮೀಕ್ಷೆಯ ನಂತರ, ಪೊಲೀಸರು ಮಸೀದಿಯ ಇಮಾಮ್ ಅಬ್ದುಲ್ ಗಫರ್ ಅವರಿಂದ ಮಾಲೀಕತ್ವಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೋರಲಾಗಿದೆ. ಆದರೆ ಭಾನುವಾರ (ಜೂ. 14) ಸಂಜೆಯವರೆಗೆ ಯಾವುದೇ ಮಾನ್ಯ ದಾಖಲೆಗಳನ್ನು ಹಾಜರುಪಡಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆದರೆ ಮಸೀದಿ ಆಡಳಿತ ಮಂಡಳಿಯು ಈ ಆರೋಪಗಳನ್ನು ತಿರಸ್ಕರಿಸಿದೆ. ಭೂಮಿಯನ್ನು ವಕ್ಫ್ ಮಂಡಳಿಯ ಹೆಸರಿನಲ್ಲಿ ದಾಖಲಿಸಲಾಗಿದೆ. ಈ ಹಕ್ಕಿಗೆ ಸಂಬಂಧಿಸಿದ ದಾಖಲೆಗಳನ್ನು ಈಗಾಗಲೇ ಪೊಲೀಸರಿಗೆ ಸಲ್ಲಿಸಲಾಗಿದೆ ಎಂದು ಹೇಳಿದೆ.
ಖಮೇನಿ ಹತ್ಯೆಗೆ ತಿರುಗೇಟು ನೀಡಲು ಇರಾನ್ ಸಜ್ಜು; ಮಸೀದಿ ಮೇಲೆ ಹಾರಾಡಿತು ಕೆಂಪು ಧ್ವಜ
ಮೀರತ್-ಬುಲಂದ್‌ಶಹರ್ ರಸ್ತೆಯಲ್ಲಿರುವ ಖಾರ್ಖೋಡಾ ಪೊಲೀಸ್ ಠಾಣೆ ಸ್ವಾತಂತ್ರ್ಯ ಪೂರ್ವದ್ದಾಗಿದ್ದು, ಕಂದಾಯ ದಾಖಲೆಗಳು ಖಾಸ್ರಾ ಸಂಖ್ಯೆ 1217ರ ಅಡಿಯಲ್ಲಿ 6,450 ಚದರ ಮೀಟರ್ ಭೂಮಿಯನ್ನು ಪೊಲೀಸ್ ಠಾಣೆಯ ಹೆಸರಿನಲ್ಲಿ ಹಲವು ದಶಕಗಳಿಂದ ನೋಂದಾಯಿಸಲಾಗಿದೆ ಎಂದು ತೋರಿಸುತ್ತವೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಈ ಭೂಮಿಯ ಒಂದು ಭಾಗವನ್ನು ಅತಿಕ್ರಮಿಸಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಕಂದಾಯ ಇಲಾಖೆಯ ವರದಿಯು ಭೂಮಿಯನ್ನು ಪೊಲೀಸ್ ಠಾಣೆ ಆವರಣದ ಭಾಗವೆಂದು ಗುರುತಿಸಿದೆ ಎಂದು ಕಿಥೋರ್ ವೃತ್ತ ಅಧಿಕಾರಿ ಪ್ರಮೋದ್ ಕುಮಾರ್ ಸಿಂಗ್ ಹೇಳಿದ್ದಾರೆ.
ನೋಟಿಸ್ ಜಾರಿ
ಕಾನೂನು ಪ್ರಕ್ರಿಯೆಯ ಭಾಗವಾಗಿ ಅನಧಿಕೃತ ನಿರ್ಮಾಣವನ್ನು ತೆರವುಗೊಳಿಸುವಂತೆ ಹಾಗೂ ಸಂಬಂಧಿತ ದಾಖಲೆಗಳನ್ನು ಏಳು ದಿನಗಳೊಳಗೆ ಸಲ್ಲಿಸುವಂತೆ ಇಮಾಮ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಸಿಂಗ್ ತಿಳಿಸಿದ್ದಾರೆ. ಶನಿವಾರ (ಜೂ. 13) ನೋಟಿಸ್ ಜಾರಿ ಮಾಡಲಾಗಿದ್ದು, ಅದಕ್ಕೆ ಪ್ರತಿಕ್ರಿಯೆ ನೀಡಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ ಎಂದು ಖಾರ್ಖೋಡಾ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ (SHO) ರಾಜಪಾಲ್ ಸಿಂಗ್ ತಿಳಿಸಿದ್ದಾರೆ. ನೋಟಿಸ್‌ಗೆ ಇದುವರೆಗೆ ಯಾವುದೇ ಉತ್ತರ ಬಂದಿಲ್ಲ ಎಂದು ಅವರು ಹೇಳಿದ್ದಾರೆ.
ಮಸೀದಿ ಹಲವು ವರ್ಷಗಳಷ್ಟು ಹಳೆಯದಾಗಿದ್ದು, ಇತ್ತೀಚೆಗೆ ಪೊಲೀಸ್ ಠಾಣೆಯ ಭೂಮಿಯನ್ನು ಗುರುತಿಸಿದ ನಂತರವೇ ಈ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ನೋಟಿಸ್ ಜಾರಿ ಮಾಡಲಾಗಿದ್ದು, ಅದಕ್ಕೆ ಅನುಗುಣವಾಗಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಅಭಿಜಿತ್ ಕುಮಾರ್ ವಿವರಿಸಿದ್ದಾರೆ.
ಪೊಲೀಸರ ಆರೋಪಗಳನ್ನು ತಳ್ಳಿಹಾಕಿದ ಇಮಾಮ್ ಅಬ್ದುಲ್ ಘಫ್ಫಾರ್, ಈ ಭೂಮಿಯನ್ನು 1985ರಲ್ಲೇ ವಕ್ಫ್ ಬೋರ್ಡ್ ಹೆಸರಲ್ಲಿ ದಾಖಲಿಸಲಾಗಿದೆ ಎಂದು ವಿವರಿಸಿದ್ದಾರೆ. ಈ ಹಕ್ಕನ್ನು ಬೆಂಬಲಿಸುವ ದಾಖಲೆಗಳು ಲಭ್ಯವಿದೆ ಎಂದೂ ಅವರು ತಿಳಿಸಿದ್ದಾರೆ. ಸಂಬಂಧಿತ ದಾಖಲೆಗಳನ್ನು ಈಗಾಗಲೇ ಪೊಲೀಸರಿಗೆ ಸಲ್ಲಿಸಲಾಗಿದೆ. ಮಸೀದಿಯು ವಕ್ಫ್ ಆಸ್ತಿ ಎಂದು ಅವರು ಹೇಳಿದ್ದಾರೆ.