ಪಟನಾ, ಏ. 22: ಬಿಹಾರದ ಪಕ್ಷೇತರ ಸಂಸದ ಪಪ್ಪು ಯಾದವ್ (Pappu Yadav) ತಮ್ಮ ಸಾರ್ವಜನಿಕ ಹೇಳಿಕೆಗಳಿಂದ ಪದೇ ಪದೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ಈ ಹೇಳಿಕೆಗಳು ರಾಷ್ಟ್ರವ್ಯಾಪಿ ಆಕ್ರೋಶವನ್ನು ಹುಟ್ಟುಹಾಕಿವೆ. ಹಲವು ಸಂದರ್ಭಗಳಲ್ಲಿ ಅವರಿಗೆ ಕಾನೂನು ತೊಂದರೆಯೂ ಎದುರಾಗಿದೆ. ಇದೀಗ ಮತ್ತೆ ಅವರು ವಿವಾದ ಸೃಷ್ಟಿಸಿದ್ದಾರೆ. ಶೇಕಡಾ 70ರಿಂದ 80ರಷ್ಟು ರಾಜಕಾರಣಿಗಳು ಅಶ್ಲೀಲ ಚಿತ್ರ ವೀಕ್ಷಿಸುತ್ತಾರೆ ಎಂದು ಹೇಳಿದ್ದಾರೆ. ಮಹಿಳಾ ಮೀಸಲಾತಿ ಮಸೂದೆಗೆ (Women Reservation) ಸಂಬಂಧಿಸಿದಂತೆ ಯಾದವ್ ನೀಡಿದ ಹೇಳಿಕೆಗೆ ಬಿಹಾರ ರಾಜ್ಯ ಮಹಿಳಾ ಆಯೋಗದಿಂದ (Bihar State Women’s Commission) ನೊಟೀಸ್ ಪಡೆದ ನಂತರ ಟೀಕೆಗೆ ಗುರಿಯಾಗಿದ್ದಾರೆ. ಈ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, ಶೇ. 70ರಿಂದ 80ರಷ್ಟು ರಾಜಕಾರಣಿಗಳು ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಾರೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಎಡವಿದ್ದಾರೆ.
ಮಹಿಳೆಯರ ಬಗ್ಗೆ ಮಾಡಿದ ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ಬಿಹಾರ ರಾಜ್ಯ ಮಹಿಳಾ ಆಯೋಗವು ನೀಡಿದ ನೊಟೀಸ್‌ಗೆ ಪ್ರತಿಕ್ರಿಯಿಸಿದ ಅವರು, ʼʼಭಾರತದಲ್ಲಿ ಬಹುತೇಕ ಮಹಿಳೆಯರು ಪುರುಷ ನಾಯಕನ ಕೋಣೆಗೆ ಹೋಗದೆ ರಾಜಕೀಯಕ್ಕೆ ಪ್ರವೇಶಿಸಲಾರರು. ಶೇಕಡಾ 70–80ರಷ್ಟು ರಾಜಕಾರಣಿಗಳು ಅಶ್ಲೀಲ ಚಿತ್ರಗಳನ್ನು ನೋಡುತ್ತಾರೆʼʼ ಎಂದು ಹೇಳಿದ್ದಾರೆ.
ಇಲ್ಲಿದೆ ಪೋಸ್ಟ್:
“ನಾನು ಸದನದಲ್ಲಿಯೂ ಹೇಳಿದ್ದೇನೆಂದರೆ, ಶೇ. 70-80ರಷ್ಟು ರಾಜಕಾರಣಿಗಳು ಅಶ್ಲೀಲ ಚಿತ್ರ ನೋಡುತ್ತಾರೆ. ಆದ್ದರಿಂದ ಎಲ್ಲರನ್ನೂ ಪರೀಕ್ಷಿಸಿ. ನನ್ನ ಫೋನ್‌ನಲ್ಲಿ ಅಶ್ಲೀಲ ಚಿತ್ರವಿದ್ದರೆ, ನನ್ನನ್ನೂ ಪರಿಶೀಲಿಸಿ. ನನಗೆ ನೊಟೀಸ್ ನೀಡಿರುವ ಇವರು ಯಾರು? ಅವರು ಯಾರ ಜತೆ ಇದ್ದಾರೆ? ಮಾಜಿ ಸಚಿವರೊಂದಿಗೆ ಹಲವು ಫೋಟೊಗಳಿವೆ. ಗಾಜಿನ ಮನೆಗಳಲ್ಲಿ ವಾಸಿಸುವ ಜನರು ಕಲ್ಲೆಸೆಯಬಾರದು” ಎಂದು ಅವರು ಹೇಳಿದರು.
ಈಗಲೇ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದೇಕೆ? ಕೇಂದ್ರ ಸರ್ಕಾರ ಈ ವಿಚಾರದಲ್ಲಿ ಎಡವಿತಾ?
ಮಹಿಳೆಯರು ರಾಜಕೀಯಕ್ಕೆ ಬರಲು ಅವಕಾಶ ನೀಡದವರು ಪುರುಷ ರಾಜಕಾರಣಿಗಳು ಎಂದು ಅವರು ತಮ್ಮ ಹೇಳಿಕೆಗಳನ್ನು ವಿವರಿಸಿದರು. ಮಹಿಳೆಯರನ್ನು ಶೋಷಿಸದೆ ರಾಜಕೀಯಕ್ಕೆ ಬರಲು ಬಿಡುವುದಿಲ್ಲ ಎಂದರು. “ನಾನು ಮಹಿಳೆಯರ ಹೋರಾಟದಲ್ಲಿ ಭಾಗಿಯಾಗುತ್ತಿದ್ದೇನೆ. ಪುರುಷರು ಮಹಿಳೆಯರನ್ನು ಶೋಷಿಸುತ್ತಾರೆ. 755 ಪುರುಷ ರಾಜಕಾರಣಿಗಳ ವಿರುದ್ಧ ಲೈಂಗಿಕ ಶೋಷಣೆ ಆರೋಪಗಳಿವೆ ಮತ್ತು 155 ಪುರುಷ ರಾಜಕಾರಣಿಗಳ ವಿರುದ್ಧ ಆರೋಪಪಟ್ಟಿಗಳಿವೆ. ಇಡೀ ಭಾರತವೇ ಕಳಂಕಿತವಾಗಿದೆ. ನಾನು ಪುರುಷ ರಾಜಕಾರಣಿಗಳ ಬಗ್ಗೆ ಮಾತನಾಡಿದರೆ, ಅವರು (ಮಹಿಳಾ ಆಯೋಗ) ಏಕೆ ತೊಂದರೆಗೊಳಗಾಗುತ್ತಾರೆ? ಈ ರಾಜಕಾರಣಿಗಳು ಮಹಿಳೆಯರನ್ನು ಶೋಷಿಸುತ್ತಾರೆ. ನಂತರ ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಮಾತನಾಡುತ್ತಾರೆ” ಎಂದವರು ತಿಳಿಸಿದರು.
ಮಹಿಳಾ ಮೀಸಲಾತಿ ಮಸೂದೆಯ ಕುರಿತು ಮಾತನಾಡಿದ ಯಾದವ್, ʼʼರಾಜಕಾರಣಿಗಳು ಮಹಿಳೆಯರಿಗೆ ಆಮಿಷ ಒಡ್ಡುವುದರಿಂದ ಅವರನ್ನು ಎಂದಿಗೂ ಗೌರವಿಸುವುದಿಲ್ಲ. ಪುರುಷ ನಾಯಕರ ಕೋಣೆಗೆ ಹೋಗದೆ ಮಹಿಳೆಯರು ರಾಜಕೀಯ ಆರಂಭಿಸಲು ಸಾಧ್ಯವಿಲ್ಲ. ಭಾರತದಲ್ಲಿ ಮಹಿಳೆಯರನ್ನು ದೇವತೆಗಳೆಂದು ಕರೆಯುತ್ತಾರೆ. ಆದರೆ ಇಲ್ಲಿ ಅವರನ್ನು ಎಂದಿಗೂ ಗೌರವಿಸಲಾಗುವುದಿಲ್ಲ. ವ್ಯವಸ್ಥೆ ಮತ್ತು ಸಮಾಜ ಇದಕ್ಕೆ ಕಾರಣʼʼ ಎಂದು ಅವರು ದೂಷಿಸಿದರು.