ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ನ್ಯಾಯಕ್ಕಾಗಿ ರಾಜಕೀಯ ಆರಿಸಿಕೊಂಡೆ": ಮೊದಲ ಬಾರಿ ಶಾಸಕಿಯಾದ ಬಗ್ಗೆ ಆರ್‌ಜಿ ಕರ್ ಸಂತ್ರಸ್ತೆಯ ತಾಯಿ ಪ್ರತಿಕ್ರಿಯೆ

ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನಲ್ಲಿ ನಡೆದ ದಾರುಣ ಘಟನೆಯಲ್ಲಿ ಮಗಳನ್ನು ಕಳೆದುಕೊಂಡ ತಾಯಿ ರತ್ನ ದೇವನಾಥ್, ನ್ಯಾಯಕ್ಕಾಗಿ ರಾಜಕೀಯಕ್ಕೆ ಪ್ರವೇಶಿಸಿ ಪಶ್ಚಿಮ ಬಂಗಾಳದ ಪಾಣಿಹಾಟಿ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ದಶಕಗಳಿಂದ ತೃಣಮೂಲದ ಬಲವಾಗಿದ್ದ ಈ ಕ್ಷೇತ್ರದಲ್ಲಿ ಅವರ ಗೆಲುವು ಮಹಿಳೆಯರ ಧ್ವನಿಗೂ, ನ್ಯಾಯದ ಹೋರಾಟಕ್ಕೂ ದೊಡ್ಡ ಸಂದೇಶ ಎನಿಸಿಕೊಂಡಿದೆ. ತಮ್ಮ ಮಗಳ ಸಾವಿಗೆ ಸರ್ಕಾರದ ವೈಫಲ್ಯವೇ ಕಾರಣ ಎಂದು ಆರೋಪಿಸಿರುವ ಅವರು, ಈ ಜಯವನ್ನು ರಾಜ್ಯದ ಮಹಿಳೆಯರಿಗೆ ಅರ್ಪಿಸಿದ್ದಾರೆ.

ರತ್ನಾ ದೇವನಾಥ್ (ಎಐ ರಚಿತ ಚಿತ್ರ)

ಕೋಲ್ಕತ್ತಾ, ಮೇ 5: 2024ರ ಆಗಸ್ಟ್ 9ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜಿನ (RG Kar Medical College and Hospital) ಸೆಮಿನಾರ್ ಹಾಲ್‌ನಲ್ಲಿ ತಮ್ಮ ಮಗಳ ಮೃತದೇಹ ಪತ್ತೆಯಾದಾಗ ರತ್ನಾ ದೆಬ್‌ನಾಥ್ (Ratna Debnath) ಅವರ ಇಡೀ ಜಗತ್ತೇ ಕುಸಿದುಬಿದ್ದಿತ್ತು. 'ಅಭಯಾ (Abhaya)' ಎಂಬ 31 ವರ್ಷದ ಕಿರಿಯ ವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. 2026ರ ಮೇ 4ರಂದು ಪಶ್ಚಿಮ ಬಂಗಾಳದ ಪಾಣಿಹಾಟಿಯ ಜನರು ರತ್ನ ದೇವನಾಥ್ ಅವರನ್ನು ತಮ್ಮ ನಾಯಕಿಯಾಗಿ ಆಯ್ಕೆ ಮಾಡುವ ಮೂಲಕ ಅವರ ಹೋರಾಟಕ್ಕೆ ಹೊಸ ಶಕ್ತಿ ತುಂಬಿದ್ದಾರೆ. ರತ್ನಾ ದೇವನಾಥ್ ಮೊದಲ ಬಾರಿ ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ರತ್ನ ದೇವನಾಥ್ ತೃಣಮೂಲ ಕಾಂಗ್ರೆಸ್‌ನ ತೀರ್ಥಂಕರ್ ಘೋಷ್ ವಿರುದ್ಧ 28,836 ಮತಗಳ ಭರ್ಜರಿ ಅಂತರದಿಂದ ಜಯ ಗಳಿಸಿದ್ದಾರೆ. ದಶಕಗಳಿಂದ ತೃಣಮೂಲ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಪಾಣಿಹಾಟಿಯಲ್ಲಿ ಈ ಬದಲಾವಣೆ ಸಂಭವಿಸಿದೆ. "ಬಂಗಾಳದ ಮಹಿಳೆಯರು ತಮ್ಮ ಉತ್ತರವನ್ನೀಗ ನೀಡಿದ್ದಾರೆ" ಎಂದು ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ದೇವನಾಥ್ ಹರ್ಷ ವ್ಯಕ್ತಪಡಿಸಿದ್ದು, ಈ ಗೆಲುವನ್ನು ರಾಜ್ಯದ ಮಹಿಳೆಯರಿಗೆ ಅರ್ಪಿಸಿದ್ದಾರೆ.

ಮೋದಿ ಜತೆ ರತ್ನಾ ದೇವನಾಥ್:



ಆ ಕರಾಳ ದಿನವನ್ನು ಸ್ಮರಿಸಿದ ಅವರು, "ನನ್ನ ಮಗಳು ಅಂದು ಮುಗುಳ್ನಗುತ್ತಾ ಟಿಫನ್ ಬಾಕ್ಸ್ ಹಿಡಿದು ಮನೆಯಿಂದ ಹೊರಟಿದ್ದಳು. ಆದರೆ ವಾಪಸ್ ಬಂದಿದ್ದು ಅವಳ ಸಾವಿನ ಸುದ್ದಿ. ಅವಳು ಸ್ವಾಮಿ ವಿವೇಕಾನಂದರ ತತ್ವಗಳನ್ನು ಪಾಲಿಸುತ್ತಿದ್ದ ಹೂವಿನಂತಹ ಹುಡುಗಿ. ಅವಳ ಜೀವವನ್ನು ಆಸ್ಪತ್ರೆಯ ಆಡಳಿತ ಮಂಡಳಿ ಮತ್ತು ಆರೋಗ್ಯ ಸಚಿವರು ಕಿತ್ತುಕೊಂಡರು" ಎಂದು ಗಂಭೀರವಾಗಿ ಆರೋಪಿಸಿದರು. ಆಸ್ಪತ್ರೆಯ ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದ ತನ್ನ ಮಗಳ ಹೋರಾಟ ತನ್ನ ಹೋರಾಟಕ್ಕಿಂತ ದೊಡ್ಡದು ಎಂದು ಅವರು ಭಾವೋದ್ವೇಗದಿಂದ ನುಡಿದರು.

2026ರ ವಿಧಾನಸಭಾ ಚುನಾವಣೆಯಲ್ಲಿ ಸೋತ ರಾಜಕೀಯ ಧುರೀಣರು

ಮಮತಾ ಬ್ಯಾನರ್ಜಿ ಅವರ ಸರ್ಕಾರವು ತನ್ನ ಮಗಳನ್ನು ಉಳಿಸುವಲ್ಲಿ ವಿಫಲವಾಗಿದೆ ಎಂದು ದೇವನಾಥ್ ನಿರಂತರವಾಗಿ ದೂರುತ್ತಾ ಬಂದಿದ್ದಾರೆ. "2024ರ ಆಗಸ್ಟ್ 9 ನನ್ನ ಜೀವನವನ್ನೇ ಬದಲಿಸಿತು. ನ್ಯಾಯಕ್ಕಾಗಿ ಮತ್ತು ಎಲ್ಲ ಹೆಣ್ಣುಮಕ್ಕಳ ರಕ್ಷಣೆಗಾಗಿ ನಾನು ರಾಜಕೀಯದ ಹಾದಿಯನ್ನು ಆರಿಸಿಕೊಂಡಿದ್ದೇನೆ" ಎಂದು ಅವರು ತಿಳಿಸಿದರು. ಈ ಘಟನೆ ನಡೆದ ದಿನದಿಂದಲೂ ಅವರು ಪ್ರತಿಭಟನೆಯ ರೂಪದಲ್ಲಿ ತಮ್ಮ ಕೂದಲನ್ನು ಬಾಚಿಲ್ಲ ಎಂಬುದು ಅವರ ನೋವಿನ ತೀವ್ರತೆಯನ್ನು ಎತ್ತಿ ತೋರಿಸಿದೆ ಎಂದು ಮೂಲಗಳು ತಿಳಿಸಿವೆ.

ಮಮತಾ ಬ್ಯಾನರ್ಜಿ ಅವರ 'ಲಕ್ಷ್ಮಿ ಭಂಡಾರ್' ಯೋಜನೆಯ ಮೂಲಕ ನೀಡುವ 1,500 ರುಪಾಯಿಗೆ ಬಂಗಾಳದ ಮಹಿಳೆಯರನ್ನು ಕಟ್ಟಿಹಾಕಲು ಸಾಧ್ಯವಿಲ್ಲ ಎಂದು ದೇವನಾಥ್ ಪ್ರತಿಪಾದಿಸಿದರು. ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ ಗೆಲುವಿನ ಶ್ರೇಯ ನೀಡಿದ ಅವರು, "ಇದು ಕೇವಲ ನನ್ನ ನಷ್ಟವಲ್ಲ, ಸಮಾಜವು ಒಬ್ಬ ಉತ್ತಮ ವೈದ್ಯೆಯನ್ನು ಕಳೆದುಕೊಂಡಿದೆ. ಈಗ ಬಂಗಾಳದ ಜನರು ನ್ಯಾಯವನ್ನು ಮರಳಿ ತರಲು ನಿರ್ಧರಿಸಿದ್ದಾರೆ" ಎಂದು ಮಾತು ಮುಗಿಸಿದರು. ಈ ಗೆಲುವು ಕೇವಲ ರಾಜಕೀಯ ವಿಜಯವಲ್ಲ, ಬದಲಿಗೆ ಒಬ್ಬ ತಾಯಿಯ ನ್ಯಾಯದ ಹೋರಾಟಕ್ಕೆ ಸಂದ ಜಯ ಎಂದು ಸ್ಥಳೀಯರು ಬಣ್ಣಿಸಿದ್ದಾರೆ.