ಕೋಲ್ಕತಾ, ನ. 10: ʼʼಎದೆಯ ಭಾರ ಇಳಿಯಿತುʼʼ-ಎನ್ಕೌಂಟರ್ನಲ್ಲಿ 12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದ ಆರೋಪಿಯನ್ನು ಪೊಲೀಸರು ಹೊಡೆದುರುಳಿಸಿದ ವಿಚಾರ ತಿಳಿಯುತ್ತಲೇ ಆತನ ತಾಯಿ ಪ್ರತಿಕ್ರಿಯಿಸಿದ ರೀತಿ ಇದು. ಅನೇಕ ವರ್ಷಗಳ ನಿರ್ಲಕ್ಷ್ಯ ಮತ್ತು ದೌರ್ಜನ್ಯಕ್ಕೆ ಮುಕ್ತಿ ಸಿಕ್ಕಿದ್ದಾಗಿ ತಿಳಿಸಿದ ಅವರು ಮೃತದೇಹ ಸ್ವೀಕರಿಸುವುದು ಬಿಡಿ ಕೊನೆಯ ಬಾರಿ ಮುಖ ನೋಡಲೂ ನಿರಾಕರಿಸಿದ್ದಾರೆ. ನವೆಂಬರ್ 9ರಂದು ಪಶ್ಚಿಮ ಬಂಗಾಳದ ರಾಯ್ಗಂಜ್ನಲ್ಲಿ ಪೊಲೀಸರು ಎನ್ಕೌಂಟರ್ ನಡೆಸಿ (West Bengal Encounter) ಆರೋಪಿ ದೀಲೀಪ್ ರಾಯ್ನನ್ನು ಹೊಡೆದುರುಳಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ಬಾಲಕಿ ಹತ್ಯೆಯ ಬಳಿಕ 4 ದಿನಗಳ ಕಾಲ ತಲೆಮರೆಸಿಕೊಂಡಿದ್ದ ದಿಲೀಪ್ ರಾಯ್ ಬಿಹಾರಕ್ಕೆ ಪರಾರಿಯಾಗಲು ಯತ್ನಿಸಿದ ವೇಳೆ ಪೊಲೀಸರ ಕಣ್ಣಿಗೆ ಬಿದ್ದು ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾಗ ಸಂಭವಿಸಿದ ಶೂಟೌಟ್ಗೆ ಬಲಿಯಾಗಿದ್ದಾನೆ.
ಮಗನ ಸಾವಿನ ಸುದ್ದಿ ತಿಳಿದು ಆತನ ಮೃತದೇಹ ಇರಿಸಲಾಗಿದ್ದ ಆಸ್ಪತ್ರೆಗೆ ಆಗಮಿಸಿದ ತಾಯಿ, ಇದರಿಂದ ತನಗೆ ಯಾವುದೇ ದುಃಖವಿಲ್ಲ ಎಂದು ತಿಳಿಸಿದರು. ಜತೆಗೆ ಪೊಲೀಸರ ಕೃತ್ಯವನ್ನು ಸಮರ್ಥಿಸಿಕೊಂಡರು. ʼʼನಾನು ಏನು ಹೇಳಲಿ? ಪೊಲೀಸರು ಸರಿಯಾದ ಕೆಲಸ ಮಾಡಿದ್ದಾರೆ. ಆತನಿಗೆ ಅರ್ಹವಾದ ಶಿಕ್ಷೆಯನ್ನೇ ನೀಡಿದ್ದಾರೆ. ನನ್ನ ಎದೆಯ ಭಾರ ಇಳಿದಷ್ಟು ಖುಷಿಯಾಗ್ತಿದೆʼʼ ಎಂದು ಹೇಳಿದರು.
12 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದವನನ್ನು ಎನ್ಕೌಂಟರ್ ಮೂಲಕ ಹೊಡೆದುರುಳಿಸಿದ ಪೊಲೀಸರು
ʼʼಆತ ಎಂದಿಗೂ ಉತ್ತಮ ಮಗನಾಗಿರಲಿಲ್ಲ. ಒಂದು ದಿನವೂ ನನಗೆ ಹೊಟ್ಟೆ ತುಂಬ ಊಟ ಹಾಕಲಿಲ್ಲ. ಹೋಗಲಿ ಇದುವರೆಗೆ ಒಂದು ರೂಪಾಯಿಯನ್ನೂ ಕೊಡಲಿಲ್ಲ. ನನಗಿದ್ದ ಒಬ್ಬನೇ ಒಬ್ಬ ಮಗ ಆತʼʼ ಎಂದು ಭಾವುಕರಾದರು. ಮೃತದೇಹವನ್ನು ಸ್ವೀಕರಿಸಲು ಅವರು ನಿರಾಕರಿಸಿದ್ದರಿಂದ ಸಂಬಂಧಿಕರು ಅಂತ್ಯಕ್ರಿಯೆಗೆ ವ್ಯವಸ್ಥೆ ಮಾಡಿದರು.
ʼʼಆತನ ಮುಖ ನೋಡಲೂ ನನಗೆ ಇಷ್ಟ ಇಲ್ಲ. ಆತನ ಮೃತದೇಹವನ್ನು ಮನೆಗೆ ಕೊಂಡೊಯ್ಯುವುದಿಲ್ಲ. ನಿಮಗೆ ಏನು ಬೇಕೋ ಅದನ್ನು ಮಾಡಿʼʼ ಎಂದು ಅವರು ಹೇಳಿದರು. ಮಗ ಅಪರಾಧದಲ್ಲಿ ಭಾಗಿಯಾಗಿದ್ದನೆಂಬ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ತನ್ನನ್ನು ಮತ್ತು ಇತರ ಸಂಬಂಧಿಕರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಲಾಠಿಗಳಿಂದ ಥಳಿಸಿದ್ದಾರೆ ಎಂದು ಆರೋಪಿಸಿದರು.
ತಮ್ಮನ್ನು ನೋಡಿಕೊಳ್ಳಲು ಯಾರೂ ಇಲ್ಲ ಎಂದಿರುವ ಅವರು ಪತಿ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೆ ತಾನು ಅಧಿಕ ರಕ್ತದೊತ್ತಡದಿಂದ, ಕೈಗೆ ಸಂಬಂಧಿಸಿದ ಕಾಯಿಲೆಯಿಂದ ಒದ್ದಾಡುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರತಿದಿನದ ಆಹಾರಕ್ಕೂ ಪರದಾಡುವಂತಾಗಿದ್ದು ಮಗನಿಂದಾಗಿ ಪ್ರತಿದಿನ ಪೊಲೀಸ್ ಠಾಣೆ ಹತ್ತಿಳಿಯುವುದೇ ದೊಡ್ಡ ಕೆಲಸ ಎಂದ ಅವರು ಇದರಿಂದ ಮಾನಸಿಕ ನೆಮ್ಮದಿಯತೂ ಹಾಳಾಗಿದೆ ಎಂದಿದ್ದಾರೆ. ಸೊಸೆಯೊಂದಿಗೆ ಮಾತನಾಡಲೂ ಅವರು ನಿರಾಕರಿಸಿದ್ದಾರೆ.
ಗುವಾಹಟಿ ಹತ್ಯಾಕಾಂಡ ಆರೋಪಿ ಪೊಲೀಸ್ ಎನ್ಕೌಂಟರ್ಗೆ ಬಲಿ
ಸೋಮವಾರ ಮುಂಜಾನೆ 3.30ರ ವೇಳೆಗೆ ಈ ಎನ್ಕೌಂಟರ್ ನಡೆದಿದೆ. ಬಿಹಾರಕ್ಕೆ ಪರಾರಿಯಾಗಲು ಯತ್ನಿಸಿದ ದಿಲೀಪ್ ರಾಯ್ ಪೊಲೀಸರ ಮೇಲೆಯೇ ದಾಳಿ ನಡೆಸಿದ್ದ. ಆತನ ದಾಳಿಯಿಂದ ಪಾರಾಗಲು ಪೊಲೀಸರು ಗುಂಡು ಹಾರಿಸಿದಾಗ ನಡೆದ ಪ್ರತಿದಾಳಿಯಲ್ಲಿ ಆತ ಮೃತಪಟ್ಟ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ಆತ ಕೃತ್ಯ ನಡೆದ ದಿನ 12 ವರ್ಷದ ಬಾಲಕಿಯನ್ನು ಸೈಕಲ್ನಲ್ಲಿ ಕರೆದೊಯ್ಯುತ್ತಿರುವ ಸಿಸಿಟಿವಿ ದೃಶ್ಯ ವೈರಲ್ ಆಗಿದೆ.