ಮುಂಬೈ, ಅ. 26: ಸೋಮವಾರ (ಅ. 26) ಮಹಾರಾಷ್ಟ್ರದ ಮುಂಬೈಯಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು ಲೋಕಲ್ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದರಿಂದ (Mumbai Local Train Disruptions) ಹಳಿಯಲ್ಲಿ ನಡೆಯುತ್ತಿದ್ದ ಪ್ರಯಾಣಿಕರ ಪೈಕಿ ಮೂವರು ಮೃತಪಟ್ಟಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ಮತ್ತು ಕಲ್ಯಾಣ್ ನಡುವಿನ ಸೆಂಟ್ರಲ್ ರೈಲ್ವೆಯ (CR) ಮುಖ್ಯ ಮಾರ್ಗದಲ್ಲಿ ಓವರ್ಹೆಡ್ ಉಪಕರಣಗಳು ಮತ್ತು ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಕಂಡುಬಂದ ದೋಷದಿಂದ ಮುಂಬೈ ಲೋಕಲ್ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಇದರಿಂದಾಗಿ ರೈಲು ಸಂಚಾರ ಒಂದು ಗಂಟೆಯಿಂದ ಒಂದೂವರೆ ಗಂಟೆಯಷ್ಟು ವಿಳಂಬವಾಯಿತು. ರೈಲು ಸೇವೆಗಳು ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ನಡುವೆ ರೈಲು ಹಳಿಗಳ ಮೇಲೆ ಮೂವರು ವ್ಯಕ್ತಿಗಳು ಮೃತದೇಹ ಪತ್ತೆಯಾಗಿದೆ. ಘಾಟ್ಕೋಪರ್-ವಿಕ್ರೋಲಿ ಮಾರ್ಗದಲ್ಲಿ ಇಬ್ಬರು ಹಾಗೂ ಭಾಂಡುಪ್ನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಇವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮುಂಬೈ ಲೋಕಲ್ ರೈಲು ಹಳಿಯಲ್ಲಿ ನಡೆದ ಪ್ರಯಾಣಿಕರು:
ಸಮಸ್ಯೆ ಆಗಿದ್ದು ಹೇಗೆ?
ಸೋಮವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಕಂಜುರ್ಮಾರ್ಗ್ ನಿಲ್ದಾಣದ ಬಳಿ ಸಂಭವಿಸಿದ ಅಗ್ನಿ ಅವಘಡದಿಂದಾಗಿ ಮುಂಬೈ ನಗರದ ನಾಡಿಮಿಡಿತ ಲೋಕಲ್ ರೈಲು ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಯಿತು. ಕಂಜುರ್ಮಾರ್ಗ್ ನಿಲ್ದಾಣದಲ್ಲಿ ಸಂಭವಿಸಿದ ಬೆಂಕಿ ಅವಘಡದಿಂದಾಗಿ ಥಾಣೆ ಮತ್ತು ವಿಕ್ರೋಲಿ ನಡುವಿನ ಸಿಗ್ನಲಿಂಗ್ ವ್ಯವಸ್ಥೆ ಕುಸಿದುಬಿತ್ತು. ಅದಕ್ಕೂ ಮುನ್ನ, ಮುಲುಂಡ್ ಮತ್ತು ಥಾಣೆ ನಡುವೆ ಓವರ್ಹೆಡ್ ವೈರ್ನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿತು.
ನೀರಿಲ್ಲ, ಆಹಾರವಿಲ್ಲ, ಶೌಚಾಲಯವಿಲ್ಲ... ಮುಂಬೈ-ಪುಣೆ ಎಕ್ಸ್ಪ್ರೆಸ್ವೇಯಲ್ಲಿ ಸಿಲುಕಿಕೊಂಡವರ ಹಾಹಾಕಾರ ಕೇಳುವವರಿಲ್ಲ
ರೈಲುಗಳು ಚಲಿಸದೆ ಗಂಟೆಗಟ್ಟಲೆ ಕಾಯಬೇಕಾದ ಸ್ಥಿತಿ ಉಂಟಾದಾಗ ಅನೇಕ ಪ್ರಯಾಣಿಕರು ತಮ್ಮ ಜೀವವನ್ನೇ ಪಣಕ್ಕಿಟ್ಟು ರೈಲು ಹಳಿಗಳ ಮೇಲೆ ಇಳಿದು ನಡೆದುಕೊಂಡು ಹೋಗತೊಡಗಿದರು ಎಂದು ಮೂಲಗಳು ತಿಳಿಸಿವೆ. ಕೂಡಲೇ ರೈಲ್ವೆ ಆಡಳಿತವು ದುರಸ್ತಿ ಕಾರ್ಯವನ್ನು ಕೈಗೊಂಡಿತು. ಕೇಬಲ್ಗಳನ್ನು ಬದಲಾಯಿಸಲು ಸುಮಾರು ನಾಲ್ಕು ಗಂಟೆ ತಗುಲಿತು. ಸೋಮವಾರ ಸಂಜೆ ನಾಲ್ಕು ರೈಲು ಮಾರ್ಗಗಳ ಪೈಕಿ ಮೂರು ಮಾರ್ಗಗಳನ್ನು ಪುನಃಸ್ಥಾಪಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಈ ವ್ಯತ್ಯಯವು ಮುಂಬೈಯ ಉಪನಗರ ರೈಲು ಜಾಲವನ್ನು ಅವಲಂಬಿಸಿರುವ ವಿದ್ಯಾರ್ಥಿಗಳು, ಪ್ರಯಾಣಿಕರ ಮೇಲೆ ಪರಿಣಾಮ ಬೀರಿತು. ರೈಲುಗಳು ಎಂದಿನಂತೆ ಸಂಚರಿಸಲು ಸಾಧ್ಯವಾಗದಿದ್ದರಿಂದ ರೈಲು ಸೇವೆಗಳು ಪುನರಾರಂಭವಾಗುವವರೆಗೆ ಕಾಯುತ್ತಿದ್ದ ಪ್ರಯಾಣಿಕರಿಂದ ನಿಲ್ದಾಣಗಳಲ್ಲಿ ಜನದಟ್ಟಣೆ ಕಂಡುಬಂತು ಎಂದು ಸ್ಥಳೀಯರು ತಿಳಿಸಿದ್ದಾರೆ.
ನಿರ್ವಹಣಾ ಕಾರ್ಯಕ್ಕಾಗಿ ಸೆಂಟ್ರಲ್ ರೈಲ್ವೆಯು 'ಮೆಗಾ ಬ್ಲಾಕ್' (ರೈಲು ಸಂಚಾರ ಸ್ಥಗಿತ) ನಡೆಸಿದ ಮರುದಿನವೇ ಇದು ಸಂಭವಿಸಿದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯ್ತು. ಈ ಹೊಸ ತಾಂತ್ರಿಕ ಸಮಸ್ಯೆಗಳು ನಿರ್ವಹಣಾ ಕಾರ್ಯ ನಡೆದ ಕೂಡಲೇ ಇಂತಹ ದೊಡ್ಡ ಮಟ್ಟದ ವ್ಯತ್ಯಯ ಏಕೆ ಉಂಟಾಯಿತು ಎಂದು ಪ್ರಯಾಣಿಕರು ಪ್ರಶ್ನಿಸಿದರು.
ಮಾನವೀಯತೆ ಸಾಕ್ಷಿಯಾದ ಮುಂಬೈ ಲೋಕಲ್ ರೈಲು: ಬಾಯಾರಿದ ಬೀದಿ ನಾಯಿಗೆ ನೀರು ಕುಡಿಸಿದ ಪ್ರಯಾಣಿಕ
ಮುಂಬೈಯ ಉಪನಗರ ರೈಲು ಜಾಲವು ನಗರದ ಸಾರಿಗೆ ವ್ಯವಸ್ಥೆಯ ಪ್ರಮುಖ ಭಾಗವಾಗಿದ್ದು, ಪ್ರತಿದಿನ ಲಕ್ಷಾಂತರ ಪ್ರಯಾಣಿಕರನ್ನು ಸಾಗಿಸುತ್ತದೆ. ತಾಂತ್ರಿಕ ವೈಫಲ್ಯ ನಗರದ ದೈನಂದಿನ ಚಟುವಟಿಕೆಯ ಮೇಲೆ ಹೇಗೆ ಪರಿಣಾಮ ಬೀರಬಲ್ಲದು ಎನ್ನುವುದನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.