ಮುಂಬೈ (Mumbai) ನ ಒಂದೇ ಕುಟುಂಬದ ನಾಲ್ವರು ಸದಸ್ಯರ ಸಾವಿನ ಪ್ರಕರಣಕ್ಕೆ ಈಗ ಭೀಕರ ಮತ್ತು ನಿಗೂಢ ತಿರುವು ಸಿಕ್ಕಿದೆ. ವಿಧಿವಿಜ್ಞಾನ ಪರೀಕ್ಷೆಯ ವರದಿಯ (Forensic examination report) ಪ್ರಕಾರ, ಈ ಸಾವುಗಳು ಕೇವಲ ಕಲ್ಲಂಗಡಿ (Watermelon) ಹಣ್ಣಿನಿಂದ ಉಂಟಾದ ಸಾಮಾನ್ಯ ಆಹಾರ ವಿಷಬಾಧೆಯಲ್ಲ (Food Poisoning) ಬದಲಿಗೆ ಇಲಿಗಳನ್ನು ಕೊಲ್ಲಲು ಬಳಸುವ ಅತ್ಯಂತ ಪ್ರಬಲ ಹಾಗೂ ವಿಷಕಾರಿ ರಾಸಾಯನಿಕದಿಂದ ಈ ಸಾವುಗಳು ಸಂಭವಿಸಿವೆ ಎಂಬುದು ಈಗ ಅಧಿಕೃತವಾಗಿ ದೃಢಪಟ್ಟಿದೆ.
ಏನಿದು ಪ್ರಕರಣ
ಅಬ್ದುಲ್ಲಾ ಡೋಕಾಡಿಯಾ (45), ಅವರ ಪತ್ನಿ ನಸ್ರೀನ್ (35) ಮತ್ತು ಮಕ್ಕಳಾದ ಝೈನಾಬ್ (13) ಹಾಗೂ ಆಯೇಷಾ (16) ತಮ್ಮ ಮನೆಯಲ್ಲಿ ಸಂಬಂಧಿಕರಿಗಾಗಿ ಭೋಜನಕೂಟವನ್ನು ಏರ್ಪಡಿಸಿದ್ದರು. ಅಂದು ರಾತ್ರಿ ಎಲ್ಲರೂ ಮಟನ್ ಪಲಾವ್ ಸೇವಿಸಿದ್ದರು. ಸಂಬಂಧಿಕರು ಹೋದ ನಂತರ, ಅಂದರೆ ಸುಮಾರು ರಾತ್ರಿ 1 ಗಂಟೆಯ ಸುಮಾರಿಗೆ ಕುಟುಂಬದ ನಾಲ್ವರು ಸದಸ್ಯರು ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು. ಆದರೆ ಮುಂಜಾನೆ 5 ಗಂಟೆಯ ವೇಳೆಗೆ ಎಲ್ಲರಿಗೂ ತೀವ್ರ ವಾಂತಿ ಮತ್ತು ಭೇದಿ ಆರಂಭವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಕೆಲವೇ ಗಂಟೆಗಳಲ್ಲಿ ನಾಲ್ವರೂ ಸಾವನ್ನಪ್ಪಿದ್ದರು. ವಿಶೇಷವೆಂದರೆ, ಅಂದು ಭೋಜನಕೂಟಕ್ಕೆ ಬಂದಿದ್ದ ಸಂಬಂಧಿಕರು ಪಲಾವ್ ಸೇವಿಸಿದ್ದರೂ ಅವರಿಗೆ ಯಾವುದೇ ಆರೋಗ್ಯ ತೊಂದರೆ ಉಂಟಾಗಿರಲಿಲ್ಲ.
ಸುವೇಂದು ಅಧಿಕಾರಿ ಆಪ್ತರ ನಿಗೂಢ ಸಾವುಗಳ ಸರಣಿ: ಹಳೆಯ ಘಟನೆಗಳ ಮೆಲುಕು
ವಿಧಿವಿಜ್ಞಾನ ವರದಿಯ ಪ್ರಮುಖ ಅಂಶಗಳು ಏನು?
ಮೃತರ ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ಅವರ ಮೆದುಳು, ಹೃದಯ ಮತ್ತು ಕರುಳು ಸೇರಿದಂತೆ ಪ್ರಮುಖ ಆಂತರಿಕ ಅಂಗಗಳು ಹಸಿರು ಬಣ್ಣಕ್ಕೆ ತಿರುಗಿರುವುದು ಪತ್ತೆಯಾಗಿತ್ತು. ವೈದ್ಯಕೀಯ ಲೋಕದಲ್ಲಿ ಇದು ತೀವ್ರತರದ ವಿಷಪ್ರಾಶನವನ್ನು ಸೂಚಿಸುವ ಲಕ್ಷಣವಾಗಿದೆ. ವಿಧಿವಿಜ್ಞಾನ ವರದಿಯು ಮೃತರ ದೇಹದ ಅಂಗಾಂಶಗಳಲ್ಲಿ ಮತ್ತು ಅವರು ಸೇವಿಸಿದ ಕಲ್ಲಂಗಡಿ ಹಣ್ಣಿನ ಮಾದರಿಗಳಲ್ಲಿ ಇಲಿ ವಿಷದಲ್ಲಿ ಬಳಸಲಾಗುವ 'ಜಿಂಕ್ ಫಾಸ್ಫೈಟ್' ಎಂಬ ಅಂಶವಿರುವುದನ್ನು ಪತ್ತೆಹಚ್ಚಿದೆ.
ಇದರ ಜೊತೆಗೆ ಅಬ್ದುಲ್ಲಾ ಅವರ ದೇಹದಲ್ಲಿ 'ಮಾರ್ಫಿನ್' ಎಂಬ ಪ್ರಬಲ ನೋವು ನಿವಾರಕದ ಅಂಶವೂ ಪತ್ತೆಯಾಗಿದ್ದು, ಇದು ತನಿಖಾಧಿಕಾರಿಗಳಲ್ಲಿ ಹೆಚ್ಚಿನ ಅನುಮಾನ ಮೂಡಿಸಿದೆ. ಈ ವಿಷಕಾರಿ ರಾಸಾಯನಿಕವು ಆಕಸ್ಮಿಕವಾಗಿ ಹಣ್ಣಿಗೆ ಸೇರಿದೆಯೇ ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಹಣ್ಣಿಗೆ ವಿಷವನ್ನು ಇಂಜೆಕ್ಟ್ ಮಾಡಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಈಗ ತೀವ್ರ ತನಿಖೆ ನಡೆಸುತ್ತಿದ್ದಾರೆ. ಕಲ್ಲಂಗಡಿ ಹಣ್ಣಿನ ಮೂಲಕ ದೇಹ ಸೇರಿದ ವಿಷವೇ ಈ ದುರಂತಕ್ಕೆ ನೇರ ಕಾರಣ ಎಂಬುದು ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ. ಈ ಘಟನೆಯು ಮುಂಬೈ ನಗರದಲ್ಲಿ ಭೀತಿಯನ್ನು ಮೂಡಿಸಿದ್ದು, ಪೊಲೀಸರು ಶೀಘ್ರವೇ ಸತ್ಯಾಸತ್ಯತೆಯನ್ನು ಹೊರಹಾಕುವ ವಿಶ್ವಾಸದಲ್ಲಿದ್ದಾರೆ.