ಮುಂಬೈ, ನ. 2: ಹಿಂದೂ ವಿರೋಧಿ, ಬಾಲಿವುಡ್ ನಟಿ ದಿಯಾ ಮಿರ್ಜಾ (Dia Mirza) ಅವರಿಂದ ದೀಪಾವಳಿ ಆಚರಣೆ ಕಲಿಯಬೇಕಿಲ್ಲ ಎಂದು ಬಿಜೆಪಿ ಖಡಕ್ ಆಗಿ ಹೇಳಿದೆ. ಮಾಲಿನ್ಯಮುಕ್ತ ದೀಪಾವಳಿ ಆಚರಿಸುವ ಕುರಿತು ನಟಿ ದಿಯಾ ಮಿರ್ಜಾ ಅವರ ವಿಡಿಯೊವನ್ನು ತನ್ನ ಸಾಮಾಜಿಕ ಜಾಲತಾಣಗಳಿಂದ ತೆಗೆದುಹಾಕಿದ ಬೃಹನ್ಮುಂಬೈ ಮಹಾನಗರ ಪಾಲಿಕೆಯ (BMC) ನಿರ್ಧಾರವನ್ನು ಮುಂಬೈ ಮೇಯರ್ ರಿತು ತಾವ್ಡೆ ಸೋಮವಾರ (ನವೆಂಬರ್ 2) ಸಮರ್ಥಿಸಿಕೊಂಡಿದ್ದಾರೆ. ಭವಿಷ್ಯದಲ್ಲಿ ನಾಗರಿಕ ಜಾಗೃತಿ ಅಭಿಯಾನಗಳಿಗೆ ಸೆಲೆಬ್ರಿಟಿಗಳನ್ನು ಬಳಸಿಕೊಳ್ಳುವ ಮುನ್ನ ತಮ್ಮೊಂದಿಗೆ ಸಮಾಲೋಚನೆ ನಡೆಸಬೇಕು ಎಂದು ಅವರು ಸೂಚಿಸಿದ್ದಾರೆ.
ದೀಪಾವಳಿಯನ್ನು ಹೇಗೆ ಆಚರಿಸಬೇಕೆಂಬುದು ಹಿಂದೂಗಳಿಗೆ ಚೆನ್ನಾಗಿ ತಿಳಿದಿದೆ ಮತ್ತು ಅದನ್ನು ಕಲಿಸಲು ದಿಯಾ ಮಿರ್ಜಾ ಅವರ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ. "ಹಿಂದೂಗಳು ದೀಪಾವಳಿಯನ್ನು ಹೇಗೆ ಆಚರಿಸಬೇಕು ಎಂಬುದರ ಕುರಿತು ನಮಗೆ ಕಲಿಸಲು ದಿಯಾ ಮಿರ್ಜಾ ಅವರ ಅಗತ್ಯ ಖಂಡಿತವಾಗಿಯೂ ಇಲ್ಲ. ನಮ್ಮ ದೀಪಾವಳಿಯನ್ನು ಹೇಗೆ ಆಚರಿಸಬೇಕೆಂದು ನಮಗೆ ತಿಳಿದಿದೆ. ನೀವು ನಿಮ್ಮ ಆಯ್ದ ಅಜೆಂಡಾ ಕಡೆಗೆ ಗಮನ ಹರಿಸುವುದು ಉತ್ತಮ" ಎಂದು ತಾವ್ಡೆ ತಿರುಗೇಟು ನೀಡಿದ್ದಾರೆ.
ನಟಿ ದಿಯಾ ಮಿರ್ಜಾ ಬಗ್ಗೆ ಮುಂಬೈ ಮೇಯರ್ ರಿತು ತಾವ್ಡೆ ಅವರ ಹೇಳಿಕೆ:
"ಅವರು ಪ್ರಧಾನಿ ನರೇಂದ್ರ ಮೋದಿ ನೀಡಿದ ಹೇಳಿಕೆಗಳನ್ನು ಕೂಡ ವಿರೋಧಿಸಿದ್ದಾರೆ. ಅವರ ನಡೆ ಮೊದಲಿನಿಂದಲೂ ಹಿಂದುತ್ವದ ವಿರುದ್ಧವಾಗಿಯೇ ಇದೆ. ನಾವು ಅವರನ್ನು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ದಿಯಾ ಟ್ರೋಲ್ ಮಾಡುವುದರಿಂದ, ನಾವು ಆಯೋಜಿಸುವ ಬೇರೆ ಯಾವುದೇ ಕಾರ್ಯಕ್ರಮಕ್ಕೂ ಆಹ್ವಾನಿಸುವುದೂ ಇಲ್ಲʼʼ ಎಂದು ತಾವ್ಡೆ ಹೇಳಿದ್ದಾರೆ.
ಮುಂಬೈ ನೂತನ ಮೇಯರ್ ಆಗಿ ಬಿಜೆಪಿಯ ರಿತು ತಾವ್ಡೆ ಆಯ್ಕೆ: 25 ವರ್ಷಗಳ ಬಳಿಕ ಶಿವಸೇನೆಗೆ ಮುಖಭಂಗ
ದಿಯಾ ಭಾಗವಹಿಸುವಿಕೆ ಗೊತ್ತೇ ಇರಲಿಲ್ಲ
ಮಿರ್ಜಾ ಈ ಅಭಿಯಾನದೊಂದಿಗೆ ಗುರುತಿಸಿಕೊಂಡಿದ್ದ ವಿಷಯ ತಮಗೆ ತಿಳಿದಿರಲಿಲ್ಲ ಎಂದು ಸ್ಪಷ್ಟಪಡಿಸಿದ ರಿತು ತಾವ್ಡೆ, ಈ ಬಗ್ಗೆ ಪಾಲಿಕೆ ಆಡಳಿತದೊಂದಿಗೆ ಚರ್ಚಿಸುವುದಾಗಿ ತಿಳಿಸಿದ್ದಾರೆ. "ಹಿಂದುತ್ವವನ್ನು ವಿರೋಧಿಸುವವರನ್ನು ನಾವು ದೂರವೇ ಇಡುತ್ತೇವೆ. ಇನ್ನು ಮುಂದೆ, ನನ್ನ ಅನುಮತಿಯಿಲ್ಲದೆ ಬಿಎಂಸಿ ಯಾವುದೇ ಸಾರ್ವಜನಿಕ ಹೇಳಿಕೆಯನ್ನು ನೀಡಬಾರದು" ಎಂದು ಅವರು ಸೂಚಿಸಿದ್ದಾರೆ.
"ನೀಟ್ (NEET) ಪರೀಕ್ಷೆಯ ವಿಷಯದಲ್ಲಿ ದಿಯಾ ಮಿರ್ಜಾ ಪ್ರಧಾನಿ ಮೋದಿ ಅವರನ್ನು ಟ್ರೋಲ್ ಮಾಡಿದ್ದರು. ಅವರು ಯಾವಾಗಲೂ ಹಿಂದೂ ವಿರೋಧಿಯಾಗಿದ್ದಾರೆ. ನಾವು ಅವರನ್ನು ಕಪ್ಪುಪಟ್ಟಿಗೆ ಸೇರಿಸಿದ್ದೇವೆ" ಎಂದು ಅವರು ಹೇಳಿರುವುದಾಗಿ ಪಿಟಿಐ ತಿಳಿಸಿದೆ.
ದಿಯಾ ಮಿರ್ಜಾ ವೈಯಕ್ತಿಕ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸ್ವತಂತ್ರರಾಗಿದ್ದರೂ, ಬಿಎಂಸಿಯ ಅಧಿಕೃತ ಖಾತೆಗಳ ಮೂಲಕ ಪ್ರಕಟವಾಗುವ ಯಾವುದೇ ವಿಷಯವು ಆಡಳಿತ ಪಕ್ಷದ ಅನುಮೋದನೆಯನ್ನು ಹೊಂದಿರಬೇಕು ಎಂದು ರಿತು ಪ್ರತಿಕ್ರಿಯಿಸಿದ್ದಾರೆ.
ದಿಯಾ ಮಿರ್ಜಾ ಹೇಳಿದ್ದೇನು?
ವಿಡಿಯೊವನ್ನು ತೆಗೆದುಹಾಕಿದ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ರಾಜಕೀಯ ವಿವಾದದ ನಡುವೆ, ದಿಯಾ ಮಿರ್ಜಾ ಹಿಂದೂಸ್ಥಾನ್ ಟೈಮ್ಸ್ ಜತೆ ಮಾತನಾಡಿ, ಮಹಾರಾಷ್ಟ್ರದ ಪಟಾಕಿ ವಿರೋಧಿ ಅಭಿಯಾನವನ್ನು ಬೆಂಬಲಿಸುವಂತೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಸೆಲೆಬ್ರಿಟಿಗಳಿಗೆ ನೀಡಿದ ಮನವಿಯ ಭಾಗವಾಗಿ ಈ ವಿಡಿಯೊವನ್ನು ಚಿತ್ರೀಕರಿಸಲಾಗಿತ್ತು ಎಂದು ತಿಳಿಸಿದ್ದಾರೆ.
"ನಾನು ಯಾವುದೇ ಸಾರ್ವಜನಿಕ ಸೇವಾ ಅಭಿಯಾನಗಳಿಗಾಗಿ ಎಂದಿಗೂ ಹಣ ಪಡೆದಿಲ್ಲ. ಯಾರಿಗೆ ದೊಡ್ಡ ಮೊತ್ತದ ಹಣವನ್ನು ಪಾವತಿಸಲಾಗಿದೆ ಎಂಬುದು ನನಗೆ ತಿಳಿದಿಲ್ಲ. ಮಾಲಿನ್ಯದಂತಹ ಸುಲಭವಾಗಿ ಪರಿಹರಿಸಬಹುದಾದ ಸಮಸ್ಯೆಯನ್ನು ಬಗೆಹರಿಸಲು ಆದ್ಯತೆ ನೀಡಿದರೆ ಸಮಾಜ ಮತ್ತು ಸರ್ಕಾರಗಳೊಂದಿಗೆ ಕೆಲಸ ಮಾಡಲು ಸೆಲೆಬ್ರಿಟಿಗಳು ಸಿದ್ಧರಿದ್ದಾರೆ" ಎಂದು ಅವರು ಹೇಳಿದ್ದಾರೆ.
ಮಹಿಳೆಯರನ್ನು ಸೆಳೆದ ದಿಯಾ ಮಿರ್ಜಾ ಉಟ್ಟ ಹ್ಯಾಂಡ್‌ಲೂಮ್ ಸೀರೆ
ಏನಿದು ವಿವಾದ?
ಮುಂಬೈ ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ನೀಡಿದ ನಿರ್ದೇಶನದ ಮೇರೆಗೆ, ಪಟಾಕಿ ಸಿಡಿಸುವುದನ್ನು ತಪ್ಪಿಸಿ, ಪರಿಸರ ಸ್ನೇಹಿ ದೀಪಾವಳಿಯನ್ನು ಆಚರಿಸುವಂತೆ ಬಿಎಂಸಿ ಮನವಿ ಮಾಡಿತ್ತು. ಈ ಸಂದೇಶವನ್ನು ಜನರಿಗೆ ತಲುಪಿಸಲು ದಿಯಾ ಮಿರ್ಜಾ ಸೇರಿ ಹಲವು ಸೆಲೆಬ್ರಿಟಿಗಳು ಈ ಅಭಿಯಾನದಲ್ಲಿ ಭಾಗವಹಿಸಿದ್ದರು. ವಾಯು ಮಾಲಿನ್ಯವನ್ನು ನಿಯಂತ್ರಿಸುವ ಉದ್ದೇಶದಿಂದ ಸಾರ್ವಜನಿಕ ರಸ್ತೆಗಳು, ಬೀದಿಗಳು ಮತ್ತು ಪಾದಚಾರಿ ಮಾರ್ಗಗಳಲ್ಲಿ ಪಟಾಕಿ ಸಿಡಿಸುವುದನ್ನು ಬಾಂಬೆ ಹೈಕೋರ್ಟ್ ಕಟ್ಟುನಿಟ್ಟಾಗಿ ನಿಷೇಧಿಸಿದೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.