ಮುಂಬೈ ನೂತನ ಮೇಯರ್ ಆಗಿ ಬಿಜೆಪಿಯ ರಿತು ತಾವ್ಡೆ ಆಯ್ಕೆ: 25 ವರ್ಷಗಳ ಬಳಿಕ ಶಿವಸೇನೆಗೆ ಮುಖಭಂಗ
ಬಿಜೆಪಿ ನಾಯಕಿ ರಿತು ತಾವ್ಡೆ ಮುಂಬೈ ನೂತನ ಮೇಯರ್ ಆಗಲು ಸಿದ್ಧರಾಗಿದ್ದು, ಇದರೊಂದಿಗೆ ಕಳೆದ 25 ವರ್ಷಗಳಿಂದ ಮುಂಬೈ ಮೇಯರ್ ಹುದ್ದೆಯನ್ನು ಹಿಡಿದಿಟ್ಟಿದ್ದ ಶಿವಸೇನೆಗೆ ಭಾರೀ ರಾಜಕೀಯ ಹಿನ್ನಡೆ ಎದುರಾಗಿದೆ. ಈ ಬೆಳವಣಿಗೆಯನ್ನು ಮುಂಬೈ ಮಹಾನಗರ ರಾಜಕೀಯದಲ್ಲಿ ಮಹತ್ವದ ಬದಲಾವಣೆಯಾಗಿ ವಿಶ್ಲೇಷಿಸಲಾಗುತ್ತಿದೆ.
-
ಮುಂಬೈ, ಫೆ. 7: ಬೃಹತ್ ಮುಂಬೈ ಮಹಾನಗರ ಪಾಲಿಕೆಯ (BMC) ಮೇಯರ್ ಸ್ಥಾನಕ್ಕೆ ಬಿಜೆಪಿ(BJP)ಯ ರಿತು ತಾವ್ಡೆ (Ritu Tawde) ಆಯ್ಕೆಯಾಗಿದ್ದಾರೆ. ಇದರೊಂದಿಗೆ ಕಳೆದ 25 ವರ್ಷಗಳಿಂದ ಶಿವಸೇನೆ (Shiv Sena) ಅಧಿಕಾರದಲ್ಲಿದ್ದ ಈ ಪ್ರತಿಷ್ಠಿತ ಹುದ್ದೆ ಇದೇ ಮೊದಲ ಬಾರಿಗೆ ಬೇರೆ ಪಕ್ಷದ ಪಾಲಾದಂತಾಗಿದೆ. ಘಾಟ್‌ಕೋಪರ್ (Ghatkopar)ನ ಕಾರ್ಪೊರೇಟರ್ (corporator) ಆಗಿರುವ ರಿತು ತಾವ್ಡೆ ಈ ಹಿಂದೆ ಬಿಎಂಸಿಯ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಉಪಮೇಯರ್ ಸ್ಥಾನ
ಜನವರಿ 15ರಂದು ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ಸಂಖ್ಯೆ 5ರಿಂದ ಕಾರ್ಪೊರೇಟರ್ ಆಗಿ ಆಯ್ಕೆಯಾದ ಶಿವಸೇನೆ ನಾಯಕ ಸಂಜಯ ಶಂಕರ ಘಾಡಿ ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅವರು 15 ತಿಂಗಳ ಕಾಲ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಶಿವಸೇನೆಯು ತನ್ನ ನಾಲ್ವರು ಕಾರ್ಪೊರೇಟರ್‌ಗಳಿಗೆ ಅವಕಾಶ ನೀಡುವ ಸಲುವಾಗಿ ಉಪಮೇಯರ್ ಅವಧಿಯನ್ನು ಹಂಚಿಕೆ ಮಾಡಿದೆ.
ಮುಂಬೈ ಮೇಯರ್ ಆಗಿ ರಿತು ತಾವ್ಡೆ ಆಯ್ಕೆ:
BJP party chief Ameet Satam’s Press conference in BMC after naming Ritu Tawde as the Mayoral candidate of the Mahayuti. Here’s what he said:
— Richa Pinto (@richapintoi) February 7, 2026
On the Shiv Sena’s decision to name Ghadi as Deputy Mayor for a term of just 1.5 years, Satam said the move was likely aimed at giving… pic.twitter.com/WA3Xort7yC
ಪಕ್ಷಗಳ ಬಲಾಬಲ
227 ಸದಸ್ಯ ಬಲದ ಬಿಎಂಸಿಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಶಿವಸೇನೆ (ಶಿಂಧೆ ಬಣ) 29 ಸ್ಥಾನಗಳನ್ನು ಗೆದ್ದಿದೆ. ಈ ಆಡಳಿತಾರೂಢ ಮೈತ್ರಿಕೂಟವು ಒಟ್ಟು 118 ಸದಸ್ಯರ ಬಲದೊಂದಿಗೆ ಮ್ಯಾಜಿಕ್ ನಂಬರ್ (114) ದಾಟಿದೆ.
ವಿರೋಧ ಪಕ್ಷಗಳ ಸ್ಥಿತಿ
1997ರಿಂದ 25 ವರ್ಷಗಳ ಕಾಲ ಆಡಳಿತ ನಡೆಸಿದ್ದ ಶಿವಸೇನೆಯು (ಯುಬಿಟಿ) ಈ ಬಾರಿ 65 ಸ್ಥಾನಗಳನ್ನು ಗೆದ್ದಿದೆ. ಅದರ ಮಿತ್ರಪಕ್ಷಗಳಾದ ಎಂಎನ್‌ಎಸ್ (MNS) 6 ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) 1 ಸ್ಥಾನ ಪಡೆದಿವೆ. ಇತರ ಪಕ್ಷಗಳಾದ ಕಾಂಗ್ರೆಸ್ 24, ಎಐಎಂಐಎಂ (AIMIM) 8, ಎನ್‌ಸಿಪಿ (ಅಜಿತ್ ಪವಾರ್ ಬಣ) 3 ಮತ್ತು ಸಮಾಜವಾದಿ ಪಕ್ಷ 2 ಸ್ಥಾನಗಳನ್ನು ಗೆದ್ದಿವೆ.
ಸುಮಾರು ಒಂಬತ್ತು ವರ್ಷಗಳ ದೀರ್ಘ ಕಾಲದ ಬಳಿಕ ಬಿಎಂಸಿಗೆ ಚುನಾವಣೆ ನಡೆದಿದೆ. 2022ರ ಮಾರ್ಚ್ 7ರಂದು ಹಿಂದಿನ ಅವಧಿ ಮುಕ್ತಾಯಗೊಂಡ ನಂತರ, ರಾಜ್ಯ ಸರ್ಕಾರ ನೇಮಿಸಿದ ಆಡಳಿತಾಧಿಕಾರಿಯ ಅಡಿಯಲ್ಲಿ ಪಾಲಿಕೆಯು ಕಾರ್ಯನಿರ್ವಹಿಸುತ್ತಿತ್ತು.
ದೇಶದ ಅತ್ಯಂತ ಶ್ರೀಮಂತ ಪಾಲಿಕೆ
ಬಿಎಂಸಿ ದೇಶದ ಅತ್ಯಂತ ಶ್ರೀಮಂತ ನಾಗರಿಕ ಸಂಸ್ಥೆಯಾಗಿದ್ದು, 2025-26ನೇ ಸಾಲಿನ ಬಜೆಟ್ ಗಾತ್ರ 74,450 ಕೋಟಿ ರುಪಾಯಿಗಳಷ್ಟಿದೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಅಮಿತ್ ಸಾಟಮ್ ತಾವ್ಡೆ ಅವರ ಹೆಸರನ್ನು ಮತ್ತು ಶಿವಸೇನೆ ನಾಯಕ ರಾಹುಲ್ ಶೆವಾಳೆ ಘಾಡಿ ಅವರ ಉಮೇದುವಾರಿಕೆಯನ್ನು ಘೋಷಿಸಿದರು.