ಭೋಪಾಲ್, ಜೂ. 1: ಬಕ್ರೀದ್ ಹಬ್ಬದಂದು (Eid al-Adha) ಪ್ರಾಣಿ ಬಲಿ ನೀಡುವ ಪದ್ಧತಿಯಿಂದ ನೊಂದ ಯುವಕನೋರ್ವ ಇಸ್ಲಾಂ ಧರ್ಮ ತೊರೆದು ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಮಧ್ಯ ಪ್ರದೇಶದ (Madhya Pradesh) ಖಾಂಡ್ವಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಬಿಲಾಲ್ ಎಂಬ ಯುವಕ ಹಿಂದೂ ಧರ್ಮವನ್ನು ಸ್ವೀಕರಿಸಿದ್ದು, ವಿಶಾಲ್ ಎಂದು ಹೆಸರು ಬದಲಾಯಿಸಿದ್ದಾರೆ. ಚಿಕ್ಕ ವಯಸ್ಸಿನಿಂದಲೂ ರಾಜೇಶ್ ಸಾರಂಗ್ ಎಂಬ ವ್ಯಕ್ತಿಯ ಬಳಿ ದುಡಿಯುತ್ತಿರುವುದರಿಂದ ಅವರಿಂದ ಪ್ರೇರಿತನಾಗಿದ್ದಾರೆ ಎನ್ನಲಾಗಿದೆ.
ತನ್ನ ಉದ್ಯೋಗದಾತರು ಯಾವಾಗಲೂ ತನ್ನನ್ನು ಕುಟುಂಬದ ಸದಸ್ಯರಂತೆ ನಡೆಸಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ. ಕುಟುಂಬದಂತಹ ವಾತ್ಸಲ್ಯವು ಹಿಂದೂ ಪದ್ಧತಿಗಳು ಮತ್ತು ಸಂಪ್ರದಾಯಗಳಿಂದ ಪ್ರಭಾವಿತನಾಗಲು ಕಾರಣವಾಯಿತು ಎಂದು ವಿಶಾಲ್ (ಬಿಲಾಲ್) ತಿಳಿಸಿದ್ದಾರೆ.
ಇಲ್ಲಿದೆ ವಿಡಿಯೊ:
ಇಸ್ಲಾಂ ಧರ್ಮ ತೊರೆಯುವ ನಿರ್ಧಾರದ ಬಗ್ಗೆ ಮಾತನಾಡಿದ ವಿಶಾಲ್, ʼʼಸರ್ವೇ ಭವಂತು ಸುಖಿನಃ (ಎಲ್ಲ ಜೀವಿಗಳು ಸಂತೋಷವಾಗಿರಲಿ) ಎಂಬ ತತ್ವದಿಂದ ಪ್ರಭಾವಿತನಾಗಿ ಎಲ್ಲ ಜೀವಿಗಳ ಬಗ್ಗೆ ಕರುಣೆ ತೋರುತ್ತೇನೆʼʼ ಎಂದು ಹೇಳಿದರು.
ಗೋಹತ್ಯೆಯು ಬಕ್ರೀದ್ ಹಬ್ಬದ ಅತ್ಯಗತ್ಯ ಆಚರಣೆಯಲ್ಲ: ಮದ್ರಾಸ್ ಹೈಕೋರ್ಟ್ ಮಹತ್ವದ ತೀರ್ಪು
ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ಬಗ್ಗೆ ರಾಜೇಶ್ ಸಾರಂಗ್ ಅವರ ಬಳಿ ವಿಶಾಲ್ ಇಚ್ಛೆ ವ್ಯಕ್ತಪಡಿಸಿದ್ದರು. ಅದಕ್ಕೆ ಅವರು ಸಂತಸದಿಂದ ಸಮ್ಮತಿ ನೀಡಿದ್ದರು. ಖಾಂಡ್ವಾದಲ್ಲಿರುವ ಹಿಂದೂಯೇತರರ ಘರ್ ವಾಪಸಿಗೆ (ಮತಾಂತರ) ಹೆಸರುವಾಸಿಯಾದ ದೇವಾಲಯಕ್ಕೆ ಕರೆದೊಯ್ಯುವಂತೆ ವಿನಂತಿಸಿಕೊಂಡಿದ್ದಾಗಿ ವಿಶಾಲ್ ಹೇಳಿದರು. ಹಿಂದೂ ಧರ್ಮವನ್ನು ಸ್ವೀಕರಿಸುವ ಸಮಾರಂಭದ ಭಾಗವಾಗಿ, ವಿಶಾಲ್ ಶಿವನನ್ನು ಪೂಜಿಸಿದರು. ದೇವಾಲಯದ ಪೂಜೆಯಲ್ಲಿ ಭಾಗವಹಿಸಿದರು. ಜತೆಗೆ ತಲೆಗೂದಲನ್ನು ಬೋಳಿಸಿಕೊಂಡರು.
ಗಂಗಾ ಜಲ, ಹಸುವಿನ ಹಾಲು, ಪಂಚಾಮೃತ (ಐದು ಪದಾರ್ಥಗಳ ಪವಿತ್ರ ಮಿಶ್ರಣ), ಗೋಮೂತ್ರ, ಹಸುವಿನ ಸಗಣಿ, ತುಳಸಿ, ಹಣ್ಣುಗಳು, ಲೋಹಗಳು, ಪಂಚಗವ್ಯ (ಹಸುವಿನ ಉತ್ಪನ್ನಗಳಿಂದ ಪಡೆದ ಸಾಂಪ್ರದಾಯಿಕ ಮಿಶ್ರಣ) ಮತ್ತು ಇತರ ಧಾರ್ಮಿಕ ದ್ರವ್ಯಗಳಿಂದ ಹತ್ತು ವಿಧದ ಸ್ನಾನಗಳನ್ನು ಮಾಡಿಸಲಾಯಿತು.
ಆಚರಣೆಗಳನ್ನು ಪೂರ್ಣಗೊಳಿಸಿದ ನಂತರ, ವಿಶಾಲ್ ಎಂಬ ಹೆಸರನ್ನು ಸ್ವೀಕರಿಸಿದರು. ನಂತರ ನಿಯಮಿತವಾಗಿ ರಾಮಚರಿತ ಮಾನಸವನ್ನು ಓದುವುದಾಗಿ ಪ್ರತಿಜ್ಞೆ ಮಾಡಿದರು. ಅದರ ಪ್ರತಿಯನ್ನು ಭಕ್ತಿಯ ಸಂಕೇತವಾಗಿ ಹಣೆಯ ಮೇಲೆ ಇಟ್ಟುಕೊಂಡರು.
“ನನಗೆ ಸನಾತನ ಧರ್ಮ ತುಂಬಾ ಇಷ್ಟ. ನಾನು ಅದಕ್ಕೆ ಸೇರಲೇಬೇಕಿತ್ತು. ನಾನು ಮೊದಲಿನಿಂದಲೂ ಅದರ ಆಚರಣೆಗಳನ್ನು ಅನುಸರಿಸುತ್ತಿದ್ದೇನೆ. ಬಕ್ರೀದ್ ದಿನದಂದು, ಮುಗ್ಧ ಪ್ರಾಣಿಗಳ ಬಲಿಗಳನ್ನು ನೋಡಿ ನನಗೆ ಸಹಿಸಲಾಗಲಿಲ್ಲ” ಎಂದು ಅವರು ಹೇಳಿದರು. ಬಾಲ್ಯದಿಂದಲೂ ಹಿಂದೂ ಧರ್ಮದ ಬಗ್ಗೆ ಅವರಿಗೆ ಆಸಕ್ತಿ ಇತ್ತು.