ಕೋಲ್ಕತಾ, ಜು. 15: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ (Mamatha Banerjee) ಅವರಿಗೆ ಮತ್ತೊಂದು ಭಾರಿ ರಾಜಕೀಯ ಆಘಾತ ಎದುರಾಗಿದೆ. ಪಕ್ಷದ ಹಿರಿಯ ನಾಯಕ ಹಾಗೂ ಪ್ರಭಾವಿ ಶಾಸಕ ಮದನ್ ಮಿತ್ರಾ (Madan Mitra) ಟಿಎಂಸಿ ಪಕ್ಷಕ್ಕೆ ದಿಢೀರ್ ರಾಜೀನಾಮೆ ನೀಡಿದ್ದು, ಋತಬ್ರತಾ ಬ್ಯಾನರ್ಜಿ ನೇತೃತ್ವದ ಬಂಡಾಯ ಬಣವನ್ನು ಸೇರಿಕೊಂಡಿದ್ದಾರೆ. ಆ ಮೂಲಕ ವಿಧನಾಸಭಾ ಚುನಾವಣೆ ಸೋಲಿನಿಂದ ಕಂಗೆಟ್ಟ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆ ಎದುರಾಗಿದೆ.
ತೃಣಮೂಲ ಕಾಂಗ್ರೆಸ್ ಛಿದ್ರಗೊಂಡ ಪಕ್ಷವಾಗಿ ಮಾರ್ಪಟ್ಟಿದೆ ಎಂದು ಮಿತ್ರಾ ಹೇಳಿದರು. “ನಾನು ನನ್ನ ಕೊಠಡಿಯನ್ನು ಮಾತ್ರ ಬದಲಾಯಿಸಿದ್ದೇನೆ. ನನ್ನ ಮನೆಯನ್ನು ಅಲ್ಲ. ನಾನು ಟಿಎಂಸಿಯಲ್ಲಿಯೇ ಇದ್ದೇನೆ” ಎಂದು ಬಂಡಾಯ ಬಣಕ್ಕೆ ಸೇರಿದ ನಂತರ ಅವರು ತಿಳಿಸಿದರು.
ಮೇಯಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಎದುರಿಸಿದ ಸೋಲಿನ ನಂತರ ಮಮತಾ ಬ್ಯಾನರ್ಜಿ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿದ ಎರಡು ವಾರಗಳ ನಂತರ ಇದೀಗ ಮಿತ್ರಾ ರಾಜೀನಾಮೆ ನೀಡಿದ್ದಾರೆ. ಪ್ರಭಾವಿ ನಾಯಕಿ ಚಂದ್ರಿಮಾ ಭಟ್ಟಾಚಾರ್ಯ ಪಕ್ಷದಿಂದ ಹೊರಬಂದು ಕೆಲವು ದಿನಗಳ ನಂತರ ಈ ಆಘಾತಕಾರಿ ಬೆಳವಣಿಗೆ ನಡೆದಿದೆ.
ಇಲ್ಲಿದೆ ವಿಡಿಯೊ:
ಮದನ್ ಮಿತ್ರಾ ರಾಜಕೀಯ ಪಯಣ
2026ರ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ತೃಣಮೂಲ ಪಕ್ಷದ 80 ನಾಯಕರಲ್ಲಿ ಮದನ್ ಮಿತ್ರಾ ಕೂಡ ಒಬ್ಬರು. ಬಿಜೆಪಿಯ ಭಾರಿ ಅಲೆಯ ನಡುವೆಯೂ ಅವರು ಅವರು ಕಮರ್ಹಟಿಯಲ್ಲಿನ ತಮ್ಮ ಸ್ಥಾನ ಉಳಿಸಿಕೊಂಡರು.
ಪಕ್ಷದ ಕಾರ್ಯಕರ್ತನಿಗೆ ಮಮತಾ ಬ್ಯಾನರ್ಜಿ ಕಪಾಳಮೋಕ್ಷ: ಟಿಎಂಸಿ ವಿರುದ್ಧ ಹರಿಹಾಯ್ದ ಬಿಜೆಪಿ
ತಮ್ಮ ವಿಭಿನ್ನ ಹಾಗೂ ರಂಗುರಂಗಿನ ಜೀವನಶೈಲಿಗೆ ಹೆಸರುವಾಸಿಯಾಗಿರುವ ಮದನ್ ಮಿತ್ರಾ, ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಅತ್ಯಂತ ಜನಪ್ರಿಯ ನಾಯಕರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. 1998ರಲ್ಲಿ ಟಿಎಂಸಿ ಸ್ಥಾಪನೆಯಾದಾಗಿನಿಂದ ಮಿತ್ರಾ ಪಕ್ಷದ ಜತೆ ಗುರುತಿಸಿಕೊಂಡಿದ್ದರು.
2011ರಿಂದ ಸತತ ಮೂರು ಅವಧಿಗೆ ಮುಖ್ಯಮಂತ್ರಿಯಾಗಿದ್ದ ಮಮತಾ ಬ್ಯಾನರ್ಜಿ, 2026ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಹೀನಾಯವಾಗಿ ಸೋತಾಗಿನಿಂದ ಹಿನ್ನಡೆ ಎದುರಿಸುತ್ತಿದ್ದಾರೆ. ಬ್ಯಾನರ್ಜಿ ಬಿಜೆಪಿಯ ಸುವೇಂದು ಅಧಿಕಾರಿ ವಿರುದ್ಧ ಸೋಲುಂಡಿದ್ದರು.
ಪಕ್ಷದ ವಿರುದ್ಧವೇ ಟಿಎಂಸಿ ಹಿರಿಯ ಋತಬ್ರತ ಬ್ಯಾನರ್ಜಿ ಬಂಡಾಯವೆದ್ದರು. ಅವರು ತೃಣಮೂಲ ಪಕ್ಷದ 58 ಶಾಸಕರ ಬೆಂಬಲವನ್ನು ಹೊಂದಿರುವುದಾಗಿ ಪ್ರತಿಪಾದಿಸಿದ್ದಾರೆ. ಕಳೆದ ತಿಂಗಳು ನಡೆದ ವಿಶೇಷ ಅಧಿವೇಶನದಲ್ಲಿ ಅವರು ಮಮತಾ ಬ್ಯಾನರ್ಜಿ ಅವರನ್ನು ಪಕ್ಷದ ಅಧ್ಯಕ್ಷೆ ಸ್ಥಾನದಿಂದ ತೆಗೆದುಹಾಕಿ, ಅರುಪ್ ರಾಯ್ ಅವರನ್ನು ಆ ಹುದ್ದೆಗೆ ಆಯ್ಕೆ ಮಾಡಿದರು.