ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ನಿಗೂಢ ಬಲೂನ್ ಪತ್ತೆ; ಪೊಲೀಸರಿಂದ ತನಿಖೆ

PIA markings balloon found: ಜಮ್ಮು ಕಾಶ್ಮೀರದಲ್ಲಿ ಪಾಕಿಸ್ತಾನದ ಗುರುತುಗಳಿರುವ ನಿಗೂಢ ಬಲೂನ್ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಈ ಘಟನೆ ಕುರಿತು ಪೊಲೀಸರು ತಕ್ಷಣ ತನಿಖೆ ಆರಂಭಿಸಿದ್ದಾರೆ. ಭಾರತೀಯ ಸೇನೆಯು ಬಲೂನ್ ವಶಪಡಿಸಿಕೊಂಡಿದೆ.

ಜಮ್ಮು ಕಾಶ್ಮೀರದಲ್ಲಿ ಪತ್ತೆಯಾದ ಪಾಕಿಸ್ತಾನದ ಬಲೂನ್‌

ಶ್ರೀನಗರ, ಡಿ. 29: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್‌ನಲ್ಲಿ ಪಾಕಿಸ್ತಾನಿ ಗುರುತುಗಳನ್ನು ಹೊಂದಿರುವ ಅನುಮಾನಾಸ್ಪದ ಬಲೂನ್ (Pakistani Balloon) ಪತ್ತೆಯಾಗಿದೆ. ಭಾರತೀಯ ಸೇನೆಯು (Indian Army) ಬಲೂನ್ ವಶಪಡಿಸಿಕೊಂಡಿದೆ. ಆ ಬಲೂನ್ ವಿಮಾನವನ್ನು ಹೋಲುತ್ತಿದೆ. ಅದರ ಮೇಲೆ ಪಾಕಿಸ್ತಾನಿ ಧ್ವಜದ ಗುರುತು ಮತ್ತು PIA (ಪಾಕಿಸ್ತಾನ ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆ) ಎಂದು ಬರೆಯಲಾಗಿದೆ. ಅದರ ಮೇಲೆ PIA ಎಂಬ ಪದವನ್ನು ಇಂಗ್ಲಿಷ್ ಮತ್ತು ಉರ್ದು ಭಾಷೆಗಳಲ್ಲಿ ಬರೆದಿರುವುದು ಕಂಡು ಬಂದಿದೆ.

ಮೂಲಗಳ ಪ್ರಕಾರ, ಪಾಕಿಸ್ತಾನಿ ಬಲೂನ್ ಅಖ್ನೂರ್‌ನ ಪ್ರಾಗ್ವಾಲ್ ಪ್ರದೇಶದಲ್ಲಿ ಪತ್ತೆಯಾಗಿದೆ. ಬಲೂನ್ ಈ ಪ್ರದೇಶಕ್ಕೆ ಯಾವಾಗ ಬಂದಿತು ಎಂಬುದರ ಕುರಿತು ಸೇನೆ ತನಿಖೆ ಆರಂಭಿಸಿದೆ. ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಮನೆಯೊಂದರ ಛಾವಣಿಯ ಮೇಲೆ ಇದೇ ರೀತಿಯ ಬಲೂನ್ ಪತ್ತೆಯಾದ ಕೆಲವು ದಿನಗಳ ನಂತರ ಈ ಘಟನೆ ನಡೆದಿದೆ. ಈ ಹಿಂದೆ, ಉನಾ ಜಿಲ್ಲೆಯ ಮತ್ತೊಂದು ಗ್ರಾಮದಲ್ಲಿ ಇದೇ ರೀತಿಯ ಘಟನೆ ವರದಿಯಾಗಿತ್ತು.

ಬಲೂನ್‌ ಮೂಲಕ ಪಾಕಿಸ್ತಾನ ಬೇಹುಗಾರಿಕೆ; ಹಿಮಾಚಲದಲ್ಲಿ ಪತ್ತೆಯಾಯ್ತು ಸ್ಫೋಟಕ ಮಾಹಿತಿ

ಡಿಸೆಂಬರ್ 8ರಂದು, ಗ್ಯಾಗ್ರೆಟ್ ಉಪವಿಭಾಗದ ಟಟೆಹ್ರಾ ಗ್ರಾಮದಲ್ಲಿ ಅಂತಹ ಮೂರು ಬಲೂನ್‌ಗಳು ಕಂಡುಬಂದವು. ಆ ಬಲೂನ್‌ಗಳ ಮೇಲೆ ಪಾಕಿಸ್ತಾನಿ ಧ್ವಜದ ಗುರುತುಗಳಿದ್ದು, ಅವುಗಳ ಮೇಲೆ ಐ ಲವ್ ಪಾಕಿಸ್ತಾನ್ ಎಂದು ಬರೆಯಲಾಗಿತ್ತು. ಬಲೂನ್‌ಗಳಿಗೆ ಯಾವುದೇ ಸಾಧನಗಳನ್ನು ಜೋಡಿಸಲಾಗಿಲ್ಲ ಎಂದು ಪೊಲೀಸ್ ತಂಡ ತಿಳಿಸಿತ್ತು.

ಪಾಕಿಸ್ತಾನ ಎಂದು ಬರೆದಿರುವ ಬಲೂನ್ ಭಾರತದ ಅಂತಾರಾಷ್ಟ್ರೀಯ ಗಡಿ ಪ್ರದೇಶವಾದ ಜಮ್ಮುವಿನ ಬಳಿ ಪತ್ತೆಯಾಗಿತ್ತು. ಭಾರತ ಮತ್ತು ಪಾಕಿಸ್ತಾನ ಗಡಿ ಪ್ರದೇಶವಾದ ಜಮ್ಮುವಿನೊಳಗೆ ಸುಮಾರು 3 ಕಿಲೋ ಮೀಟರ್ ದೂರದಲ್ಲಿರುವ ರಂಜನ್ ಪ್ರದೇಶದಲ್ಲಿ ಹಸಿರು ಮತ್ತು ಬಿಳಿ ಬಣ್ಣದ ಬಲೂನ್ ಪತ್ತೆಯಾಗಿತ್ತು. ಘರೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಂಡು ಬಂದಿರುವ ಬಲೂನ್ ಅನ್ನು ಸೇನಾ ಸಿಬ್ಬಂದಿಯೊಂದಿಗೆ ತೆರಳಿದ ಪೊಲೀಸ್ ತಂಡ ವಶಕ್ಕೆ ಪಡೆದಿತ್ತು.

ಮತ್ತೊಂದು ಪ್ರಕರಣದಲ್ಲಿ ಫಿರೋಜ್‌ಪುರದ ಕಲುವಾಲಾ ಗ್ರಾಮದ ಬಳಿ ಗುರುವಾರ ಬಿಎಸ್‌ಎಫ್ ಪಡೆಗಳು ಕೃಷಿ ಪ್ರದೇಶದಲ್ಲಿ ಡಿಜೆಐ ಮಾವಿಕ್ 3 ಕ್ಲಾಸಿಕ್ ಡ್ರೋನ್ ಅನ್ನು ವಶಪಡಿಸಿಕೊಂಡಿತ್ತು. ಗುಪ್ತಚರ ಇಲಾಖೆಯ ನಿಖರವಾದ ಮಾಹಿತಿ ಮೇರೆಗೆ ಬಿಎಸ್‌ಎಫ್ ಸಿಬ್ಬಂದಿ, ಪಂಜಾಬ್ ಪೊಲೀಸರೊಂದಿಗೆ ಸೇರಿ ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಫಜಿಲ್ಕಾ ಜಿಲ್ಲೆಯ ಹಜಾರ ರಾಮ್‍ಸಿಂಗ್ ವಾಲಾ ಗ್ರಾಮದ ಪಕ್ಕದ ಕೃಷಿ ಹೊಲಗಳಲ್ಲಿ 552 ಗ್ರಾಂ ತೂಕದ ಒಂದು ಪ್ಯಾಕೆಟ್ ಹೆರಾಯಿನ್ ವಶಪಡಿಸಿಕೊಂಡಿತ್ತು.

ಮೇಯಲ್ಲಿ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಪಾಕಿಸ್ತಾನದ ರಾಷ್ಟ್ರೀಯ ಚಿಹ್ನೆ ಮತ್ತು ಪಿಐಎ ಎಂಬ ಸಂಕ್ಷಿಪ್ತ ರೂಪವನ್ನು ಹೊಂದಿರುವ ಅನುಮಾನಾಸ್ಪದ ಬಲೂನ್ ಪತ್ತೆಯಾಗಿತ್ತು. ಕಾಂಗ್ರಾ ಜಿಲ್ಲೆಯ ನೂರ್ಪುರ್ ಪ್ರದೇಶದ ಸುಲಿಯಾಲಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿರುವ ಛತ್ರಿ ಮಾತಾ ದೇವಸ್ಥಾನದ ಬಳಿ ಮಹಿಳೆಯೊಬ್ಬರು ಇದನ್ನು ನೋಡಿ ಅವರು ತಮ್ಮ ತಂದೆಗೆ ತಿಳಿಸಿದ್ದರು. ಬಳಿಕ ಗ್ರಾಮದ ಮುಖ್ಯಸ್ಥರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಬಲೂನ್ ಅನ್ನು ವಶಕ್ಕೆ ಪಡೆದಿದ್ದರು.