ನವದೆಹಲಿ, ಜ. 19: ಪ್ರಸಿದ್ಧ 'ನಾಟು ನಾಟು' ಹಾಡಿನ ಸಂಯೋಜಕ, ದಕ್ಷಿಣ ಭಾರತದ ಖ್ಯಾತ ಮ್ಯೂಸಿಕ್ ಡೈರಕ್ಟರ್, ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ. ಕೀರವಾಣಿ (MM Keeravani) 2026ರ ಗಣರಾಜ್ಯೋತ್ಸವ ಪರೇಡ್‌ಗೆ (Republic Day Parade) ಸಂಗೀತ ಸಂಯೋಜಿಸಿದ್ದಾರೆ. ಗಣರಾಜ್ಯೋತ್ಸವ ಪರೇಡ್‌ಗೆ ಸಂಗೀತ ಸಂಯೋಜಿಸುವ ಅವಕಾಶ ಸಿಕ್ಕಿದ್ದು ಬಹುದೊಡ್ಡ ಗೌರವ ಎಂದು ಎಂ.ಎಂ.ಕೀರವಾಣಿ ಹೇಳಿದ್ದಾರೆ.
ಐತಿಹಾಸಿಕ ಗೀತೆಯಾದ ‘ವಂದೇ ಮಾತರಂ’ಗೆ 150 ವರ್ಷ ಪೂರೈಸುತ್ತಿರುವ ಈ ಸಂದರ್ಭದಲ್ಲಿ, ಸಂಸ್ಕೃತಿ ಸಚಿವಾಲಯದ ಆಶ್ರಯದಲ್ಲಿ ಜನವರಿ 26ರ ಗಣರಾಜ್ಯೋತ್ಸವ ಮೆರವಣಿಗೆಗೆ ಸಂಗೀತ ಸಂಯೋಜಿಸಲು ನನಗೆ ಸಿಕ್ಕಿರುವುದು ಸೌಭಾಗ್ಯ ಎಂದು ಎಂ.ಎಂ. ಕೀರವಾಣಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಹಾಡಿಗೆ ದೇಶದ ವಿವಿಧ ಭಾಗಗಳಿಂದ ಆಗಮಿಸುವ 2,500 ಕಲಾವಿದರು ಪ್ರದರ್ಶನ ನೀಡಲಿದ್ದಾರೆ. ನಮ್ಮ ರಾಷ್ಟ್ರದ ಚೈತನ್ಯವನ್ನು ಆಚರಿಸಲು ನಾವು ಒಂದಾಗಿ ಸೇರುವ ಕ್ಷಣಕ್ಕೆ ನಮ್ಮೊಂದಿಗೆ ಇರಿ ಎಂದು ಬರೆದಿದ್ದಾರೆ.
ಗಣರಾಜ್ಯೋತ್ಸವ: ರಾಷ್ಟ್ರಪತಿ ಔತಣಕೂಟಕ್ಕೆ ರಾಜ್ಯದ ಕೌಶಿಕ್ ಮುದ್ದಾಗೆ ಆಹ್ವಾನ
ಜನವರಿ 26ರ ಆಚರಣೆಗೆ ಮುಂಚಿತವಾಗಿ ಕರ್ತವ್ಯ ಪಥ್‍ನಲ್ಲಿ 77ನೇ ಗಣರಾಜ್ಯೋತ್ಸವ ಪರೇಡ್‌ನ ಅಭ್ಯಾಸಗಳು ನಡೆಯುತ್ತಿವೆ. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಲೂಯಿಸ್ ಸ್ಯಾಂಟೋಸ್ ಡಾ ಕೋಸ್ಟಾ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ 77ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಜನವರಿ 27ರಂದು ನಡೆಯಲಿರುವ 16ನೇ ಯುರೋಪಿಯನ್ ಒಕ್ಕೂಟ-ಭಾರತ ಶೃಂಗಸಭೆಯಲ್ಲಿ ಅವರು ಯುರೋಪಿಯನ್ ಒಕ್ಕೂಟವನ್ನು ಪ್ರತಿನಿಧಿಸಲಿದ್ದಾರೆ. ಈ ಇಬ್ಬರು ಅಧ್ಯಕ್ಷರು ನವದೆಹಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ, ಯುರೋಪಿಯನ್-ಭಾರತ ಕಾರ್ಯತಂತ್ರದ ಪಾಲುದಾರಿಕೆಯನ್ನು ಗಟ್ಟಿಗೊಳಿಸುವ ಮತ್ತು ಪ್ರಮುಖ ನೀತಿ ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಭೆ ನಡೆಸಲಿದ್ದಾರೆ.
ಯಾರು ಈ ಎಂ.ಎಂ. ಕೀರವಾಣಿ?
ಎಂ.ಎಂ. ಕೀರವಾಣಿ ಭಾರತದ ಪ್ರಸಿದ್ಧ ಸಂಗೀತ ನಿರ್ದೇಶಕ, ಗಾಯಕ. 1961ರಲ್ಲಿ ತೆಲಂಗಾಣದ ನಲ್ಗೊಂಡಾ ಜಿಲ್ಲೆಯಲ್ಲಿ ಜನಿಸಿದ ಕೀರವಾಣಿ ತೆಲುಗು ಜತೆಗೆ, ಕನ್ನಡ, ತಮಿಳು, ಹಿಂದಿ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಂಗೀತ ಸಂಯೋಜಕಾರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕೀರವಾಣಿ 350ಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ತಮ್ಮದೇ ಶೈಲಿಯಲ್ಲಿ ಜಾನಪದ, ಶಾಸ್ತ್ರೀಯ ಹಾಗೂ ಆಧುನಿಕ ಸಂಗೀತವನ್ನು ಪರಿಪೂರ್ಣವಾಗಿ ಸಂಯೋಜಿಸುವುದು ಅವರ ವೈಶಿಷ್ಟ್ಯ. ಅವರು 2022ರಲ್ಲಿ ʼಆರ್‌ಆರ್‌ಆರ್ʼ ತೆಲುಗು ಸಿನಿಮಾದ ʼನಾಟು ನಾಟುʼ ಹಾಡಿಗೆ ಆಸ್ಕರ್ ಪ್ರಶಸ್ತಿ ಗಳಿಸಿ ಜಾಗತಿಕ ಖ್ಯಾತಿ ಗಳಿಸಿದ್ದಾರೆ.
2026ರ ಗಣರಾಜ್ಯೋತ್ಸವ ಪೆರೇಡ್ ಹಾಗೂ ವಂದೇ ಮಾತರಂಗೆ 150ನೇ ವಾರ್ಷಿಕೋತ್ಸವದ ಭವ್ಯ ಕಾರ್ಯಕ್ರಮಕ್ಕೆ ಕೀರವಾಣಿ ಸಂಗೀತ ಸಂಯೋಜನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.