ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರೇಯಸಿಯರ ಐಫೋನ್ ಆಸೆಗೆ ಖದೀಮರಾದ ಅಪ್ರಾಪ್ತ ಬಾಲಕರು; 6.5 ಲಕ್ಷ ರುಪಾಯಿ ಮೌಲ್ಯದ ಐಷಾರಾಮಿ ಟ್ಯಾಪ್‌ ಕಳವು!

ಮಹಾರಾಷ್ಟ್ರದ ನಾಗ್ಪುರದಲ್ಲಿ ಇಬ್ಬರು ಅಪ್ರಾಪ್ತ ಬಾಲಕರು ತಮ್ಮ ಪ್ರೇಯಸಿಯರಿಗೆ ಐಫೋನ್ ಉಡುಗೊರೆ ನೀಡುವ ಉದ್ದೇಶದಿಂದ 6.5 ಲಕ್ಷ ರುಪಾಯಿ ಮೌಲ್ಯದ ಐಷಾರಾಮಿ ಟ್ಯಾಪ್‌ಗಳು ಮತ್ತು ಸ್ಯಾನಿಟರಿ ವಸ್ತುಗಳನ್ನು ಕಳವು ಮಾಡಿದ್ದಾರೆ. ಬಳಿಕ ಕಳವು ಮಾಡಿದ ವಸ್ತುಗಳನ್ನು ಕೇವಲ 20 ಸಾವಿರ ರುಪಾಯಿಗೆ ಕಬ್ಬಿಣದ ಅಂಗಡಿ ಮಾಲೀಕನಿಗೆ ಮಾರಾಟ ಮಾಡಿದ್ದಾರೆ. ಸಿಸಿಟಿವಿ ದೃಶ್ಯಾವಳಿ ಹಾಗೂ ತಾಂತ್ರಿಕ ಮಾಹಿತಿಯ ನೆರವಿನಿಂದ ಪೊಲೀಸರು ಕೇವಲ 12 ಗಂಟೆಗಳಲ್ಲಿ ಪ್ರಕರಣವನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸರು ವಶಕ್ಕೆ ಪಡೆದ ಐಷಾರಾಮಿ ನಳ್ಳಿಗಳು

ಮುಂಬೈ, ಜೂ. 5: "ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಸರಿ" ಎಂಬ ಮಾತಿಗೆ ಸಾಕ್ಷಿಯಾಗುವಂತಹ ವಿಚಿತ್ರ ಘಟನೆಯೊಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಬೆಳಕಿಗೆ ಬಂದಿದೆ. ತಮ್ಮ ಪ್ರೇಯಸಿಯರಿಗೆ ಐಫೋನ್‌ ಉಡುಗೊರೆಯಾಗಿ ನೀಡುವ ಉದ್ದೇಶದಿಂದ ಇಬ್ಬರು ಅಪ್ರಾಪ್ತ ಬಾಲಕರು 6.5 ಲಕ್ಷ ರುಪಾಯಿ ಮೌಲ್ಯದ ಐಷಾರಾಮಿ ಡಿಸೈನರ್ ಟ್ಯಾಪ್‌ಗಳು (ನಳ್ಳಿ) ಮತ್ತು ಸ್ಯಾನಿಟರಿ ವಸ್ತುಗಳನ್ನು ಕಳವು ಮಾಡಿರುವುದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಿದೆ. ಆದರೆ ಕಳವು ಮಾಡಿದ ದುಬಾರಿ ವಸ್ತುಗಳನ್ನು ಅವರು ಕೇವಲ 20 ಸಾವಿರ ರುಪಾಯಿಗೆ ಮಾರಾಟ ಮಾಡಿರುವುದು ಪ್ರಕರಣದ ಮತ್ತೊಂದು ಅಚ್ಚರಿಯ ಸಂಗತಿ.

ನಾಗ್ಪುರದ ರಾಹುಲ್ ಸೆರಾಮಿಕ್ಸ್ ಪ್ರೈವೇಟ್ ಲಿಮಿಟೆಡ್ ಗೋದಾಮಿನಲ್ಲಿ ಈ ಕಳವು ನಡೆದಿತ್ತು. ಮೇ 27 ಮತ್ತು 28ರ ಮಧ್ಯರಾತ್ರಿ ವೇಳೆ ಆರೋಪಿಗಳು ಗೋದಾಮಿನ ಮೇಲ್ಛಾವಣಿಯ ಟಿನ್ ಶೀಟ್‌ಗಳನ್ನು ತೆಗೆದು ಒಳನುಗ್ಗಿದ್ದರು. ಬಳಿಕ ದುಬಾರಿ ಸ್ಯಾನಿಟರಿ ವಸ್ತುಗಳನ್ನು ಕದ್ದೊಯ್ದಿದ್ದರು.

ಕಳುವಾದ ವಸ್ತುಗಳಲ್ಲಿ ಐದು ಗೋಲ್ಡ್ ಟೋನ್ ಡಿಸೈನರ್ ಟ್ಯಾಪ್‌ಗಳು, ಮೂರು ಚಿನ್ನದ ಬಣ್ಣದ ಟ್ಯಾಪ್‌ಗಳು, ಒಂಬತ್ತು ರೋಸ್ ಗೋಲ್ಡ್ ಟ್ಯಾಪ್‌ಗಳು ಹಾಗೂ ನಾಲ್ಕು ಬೆಳ್ಳಿ ಬಣ್ಣದ ಟ್ಯಾಪ್‌ಗಳು ಸೇರಿದ್ದವು. ಇವುಗಳ ಒಟ್ಟು ಮೌಲ್ಯ ಸುಮಾರು 6.5 ಲಕ್ಷ ರುಪಾಯಿ ಎಂದು ಅಂದಾಜಿಸಲಾಗಿದೆ. ಗೋದಾಮಿನ ಮಾಲಕ ರಾಹುಲ್ ಜಯಚಂದ್ ಬಾತ್ರಾ ಪೊಲೀಸರಿಗೆ ದೂರು ನೀಡಿದ ಬಳಿಕ ತನಿಖೆ ಆರಂಭಿಸಲಾಯಿತು. ವಿಶೇಷ ತನಿಖಾ ತಂಡ ರಚಿಸಿದ ಪೊಲೀಸರು ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ 20ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಸ್ಥಳೀಯ ಮಾಹಿತಿದಾರರಿಂದ ದೊರೆತ ಸುಳಿವಿನ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದರು.

ಲೈಂಗಿಕ ದೌರ್ಜನ್ಯ ಎಸಗಿದ ಡೆಪ್ಯುಟಿ ಕಲೆಕ್ಟರ್! ಮಧ್ಯ ಪ್ರದೇಶದಲ್ಲಿ ಅಮಾನುಷ ಘಟನೆ

ವಿಚಾರಣೆ ವೇಳೆ ಇಬ್ಬರು ಅಪ್ರಾಪ್ತ ಬಾಲಕರು ತಮ್ಮ ಪ್ರೇಯಸಿಯರಿಗೆ ಐಫೋನ್ ಖರೀದಿಸಲು ಹಣದ ಅಗತ್ಯವಿದ್ದ ಕಾರಣ ಈ ಕಳ್ಳತನ ನಡೆಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಕಳವು ಮಾಡಿದ ಲಕ್ಷಾಂತರ ರುಪಾಯಿ ಮೌಲ್ಯದ ಟ್ಯಾಪ್‌ಗಳನ್ನು ಸ್ಥಳೀಯ ಕಬ್ಬಿಣದ ಅಂಗಡಿ ಮಾಲಕನಿಗೆ ಕೇವಲ 20 ಸಾವಿರ ರುಪಾಯಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾರೆ. ಪ್ರಕರಣದಲ್ಲಿ ಕಳವು ವಸ್ತುಗಳನ್ನು ಖರೀದಿಸಿದ್ದ 38 ವರ್ಷದ ಇರ್ಫಾನ್ ಅಲಿ ಅಲಿಯಾಸ್ ಇಮ್ಮು ರಂಜಾನ್ ಅಲಿಯನ್ನೂ ಬಂಧಿಸಲಾಗಿದೆ. ಆರೋಪಿಗಳಿಂದ ಕಳುವಾಗಿದ್ದ ಬಹುತೇಕ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ಪ್ರಕಾರ, ತಾಂತ್ರಿಕ ಮಾಹಿತಿ, ಸಿಸಿಟಿವಿ ದೃಶ್ಯಾವಳಿ ಮತ್ತು ಗುಪ್ತ ಮಾಹಿತಿಯ ನೆರವಿನಿಂದ ಕೇವಲ 12 ಗಂಟೆಗಳಲ್ಲೇ ಪ್ರಕರಣವನ್ನು ಭೇದಿಸಲಾಗಿದೆ. ಪ್ರೇಮದ ಹೆಸರಿನಲ್ಲಿ ದುಬಾರಿ ಉಡುಗೊರೆ ನೀಡಲು ಬಾಲಕರು ಕಳ್ಳತನದ ಮಾರ್ಗ ಹಿಡಿದಿರುವ ಈ ಘಟನೆ ನಾಗ್ಪುರದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.