ದೆಹಲಿ, ನ. 19: ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ (Narayana Murthy) ಮತ್ತೊಮ್ಮೆ ವೃತ್ತಿ ಜೀವನ- ವೈಯಕ್ತಿಕ ಜೀವನದ ಸಮತೋಲನದ ಬಗ್ಗೆ ಚರ್ಚೆ ಹುಟ್ಟು ಹಾಕಿದ್ದಾರೆ. ಈ ಬಾರಿ ಅವರು ಚೀನಾದ (China) 9-9-6 ಕೆಲಸದ ಸಂಸ್ಕೃತಿಯನ್ನು (ವಾರದಲ್ಲಿ 6 ದಿನಗಳ ಕಾಲ ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕೆಲಸ ಮಾಡುವುದು) ಉಲ್ಲೇಖಿಸಿದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ 79 ವರ್ಷದ ಅವರು, ಭಾರತ ವೇಗವಾಗಿ ಬೆಳೆಯಲು ಯುವಜನತೆ ಹೆಚ್ಚು ಸಮಯ ಕೆಲಸ ಮಾಡಬೇಕು ಎಂಬುದನ್ನು ಪುನರುಚ್ಚರಿಸಿದರು. ಚೀನಾದ 9-9-6 ವ್ಯವಸ್ಥೆಯನ್ನು ಹೆಸರಿಸಿ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.
2023ರಲ್ಲಿ ಭಾರತೀಯರು ರಾಷ್ಟ್ರ ನಿರ್ಮಾಣಕ್ಕಾಗಿ ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡಬೇಕು ಎಂದು ಹೇಳುವ ಮೂಲಕ ಮೂರ್ತಿ ವ್ಯಾಪಕ ಟೀಕೆಗೆ ಕಾರಣರಾಗಿದ್ದರು. ಕೆಲವು ದಶಕಗಳಲ್ಲಿ ಪರಿಶ್ರಮದಿಂದಲೇ ಅಭಿವೃದ್ದಿ ಹೊಂದಿರುವ ರಾಷ್ಟ್ರವಾಗಿ ಬೆಳೆದ ಚೀನಾವನ್ನು ಉದಾಹರಣೆಯಾಗಿ ತೆಗೆದುಕೊಂಡ ಅವರು ಈ ವಿಚಾರವನ್ನು ಪ್ರಸ್ತಾವಿಸಿದ್ದರು.
9-9-6 ನಿಯಮವನ್ನು ಒಂದು ಕಾಲದಲ್ಲಿ ಚೀನಾದ ತಂತ್ರಜ್ಞಾನ ಕಂಪನಿಗಳಲ್ಲಿ ಸಾಮಾನ್ಯವಾಗಿತ್ತು. ಅದರ ಪ್ರಕಾರ ಉದ್ಯೋಗಿಗಳು ವಾರದಲ್ಲಿ 6 ದಿನಗಳು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ಕೆಲಸ ಮಾಡಬೇಕಾಗಿತ್ತು. ಇದು ವಾರಗಳ ಕಾಲ 72 ಗಂಟೆ ಕೆಲಸ ಮಾಡುವ ನೀತಿಗೆ ಸಮಾನವಾಗಿದೆ.
ನಾರಾಯಣ ಮೂರ್ತಿ ಹೇಳಿದಂತೆ ವಾರಕ್ಕೆ 72 ಗಂಟೆಗಳ ಕೆಲಸ ಮಾಡಿದ್ರೆ ಏನಾಗುತ್ತೆ? ಈ ಬಗ್ಗೆ ವೈದ್ಯರ ಎಚ್ಚರಿಕೆ ಇಲ್ಲಿದೆ
ಚೀನಾದ ತಂತ್ರಜ್ಞಾನ ಉಚ್ಛ್ರಾಯ ಸ್ಥಿತಿಗೆ ತಲುಪಿದ ಕಾಲದಲ್ಲಿ ವಿಶೇಷವಾಗಿ ಅಲಿಬಾಬಾ ಮತ್ತು ಹುವಾವೇಯಂತಹ ಜನಪ್ರಿಯ ಕಂಪನಿಗಳಲ್ಲಿ ಈ ವ್ಯವಸ್ಥೆ ಜಾರಿಯಲ್ಲಿತ್ತು. ಆದರೆ ಇದು ಹೆಚ್ಚಿನ ಒತ್ತಡಕ್ಕ ಕಾರಣವಾಗುತ್ತದೆ ಮತ್ತು ವೃತ್ತಿ ಜೀವನ ಮತ್ತು ವೈಯಕ್ತಿಕ ಬದುಕಿನ ಅಸಮತೋಲನಕ್ಕೆ ಕಾರಣವಾಗುತ್ತದೆ ಎಂಬ ಟೀಕೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ 2021ರಲ್ಲಿ ಚೀನಾದ ಸುಪ್ರೀಂ ಕೋರ್ಟ್ 9-9-6 ವೇಳಾಪಟ್ಟಿಯನ್ನು ಕಾನೂನುಬಾಹಿರವೆಂದು ಘೋಷಿಸಿತು.
ರಿಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ನಾರಾಯಣ ಮೂರ್ತಿ, ಉತ್ಪಾದಕತೆಗೆ ಚೀನಾದ ವಿಧಾನವನ್ನು ಉಲ್ಲೇಖಿಸಿದರು ಮತ್ತು ದೇಶವು ಇದೇ ರೀತಿಯ ವೇಗದಲ್ಲಿ ಪ್ರಗತಿ ಹೊಂದಲು ಬಯಸಿದರೆ ಯುವ ಭಾರತೀಯರು ಹೆಚ್ಚು ಶ್ರಮ ವಹಿಸಲು ಸಿದ್ಧರಾಗಿರಬೇಕು ಎಂದು ಕರೆ ನೀಡಿದರು.
ಭಾರತವು ಉತ್ಪಾದನೆ ಅಥವಾ ಇತರ ಕ್ಷೇತ್ರಗಳಲ್ಲಿ ಚೀನಾವನ್ನು ಹಿಂದಿಕ್ಕಬಹುದೇ ಎಂಬ ಪ್ರಶ್ನೆಗೆ ಉತ್ತರಿಸಿದ ಮೂರ್ತಿ, ʼʼನಿರಂತರ ಪ್ರಯತ್ನದಿಂದ ಮಾತ್ರ ಇದು ಸಾಧ್ಯʼʼ ಎಂದು ಹೇಳಿದರು. ಭಾರತವು ಶೇ. 6.57ರ ಆರ್ಥಿಕ ಬೆಳವಣಿಗೆಯ ದರದಲ್ಲಿ ಬೆಳೆಯುತ್ತಿದೆ ಎಂದು ಅವರು ಇದರ 6 ಪಟ್ಟು ದೊಡ್ಡ ಆರ್ಥಿಕತೆಯನ್ನು ಹೊಂದಿರುವ ಚೀನಾವನ್ನು ತಲುಪಲು ಸಮಾಜದ ಪ್ರತಿಯೊಂದು ವರ್ಗದಿಂದ ಅಸಾಧಾರಣ ಬದ್ಧತೆಯ ಅಗತ್ಯವಿದೆ ಎಂದು ಹೇಳಿದರು.
N.R. Narayana Murthy: ದೇಶದ ಶೇ.60 ಜನರನ್ನು ಬಡತನ ಕಾಡುತ್ತಿದೆ: ಇನ್ಫೋಸಿಸ್ ನಾರಾಯಣ ಮೂರ್ತಿ
"ಕೆಲಸ ಮಾಡುವುದು ಸುಲಭವಲ್ಲ ಎಂದು ನಾವು ಅರಿತುಕೊಳ್ಳಬೇಕು. ನಮ್ಮಲ್ಲಿ ಪ್ರತಿಯೊಬ್ಬರೂ ಕಷ್ಟಪಡಬೇಕಾಗಿದೆ. ನಮ್ಮ ಸ್ವಂತ ಕಾರ್ಯಗಳಿಗೆ ಉನ್ನತ ಮಾನದಂಡಗಳನ್ನು ಹೊಂದಿಸುವ ಅಗತ್ಯವಿದೆ. ಇದರಿಂದ ಭಾರತವು ಚೀನಾ ಸಮೀಪಕ್ಕೆ ತಲುಪಬಹುದುʼʼ ಎಂದು ಅವರು ಹೇಳಿದರು.