ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಿಜೆಪಿ ಪ್ರತಿಭಟನೆ ನಡುವೆ ಉನ್ನತ ಶಿಕ್ಷಣ ಇಲಾಖೆಯ ನೂತನ ಕಾರ್ಯದರ್ಶಿಯಾಗಿ ನರೇಶ್ ಪಾಲ್ ಗಂಗ್ವಾರ್ ನೇಮಕ

ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಶಿಕ್ಷಣ ವ್ಯವಸ್ಥೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿರುವ ನಡುವೆಯೇ ಹಿರಿಯ ಐಎಎಸ್ ಅಧಿಕಾರಿ ನರೇಶ್ ಪಾಲ್ ಗಂಗ್ವಾರ್ ಅವರನ್ನು ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ನೂತನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ರಾಜಸ್ಥಾನ ಹಾಗೂ ಕೇಂದ್ರ ಸರ್ಕಾರದಲ್ಲಿ ಶಿಕ್ಷಣ ಮತ್ತು ಆಡಳಿತ ಕ್ಷೇತ್ರದಲ್ಲಿ ದೀರ್ಘ ಅನುಭವ ಹೊಂದಿರುವ ಅವರು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ನರೇಶ್ ಪಾಲ್ ಗಂಗ್ವಾರ್

ನವದೆಹಲಿ: ಕೇಂದ್ರ ಸರ್ಕಾರದ ಪ್ರಮುಖ ಆಡಳಿತಾತ್ಮಕ ಬದಲಾವಣೆಯಲ್ಲಿ ಹಿರಿಯ ಐಎಎಸ್ ಅಧಿಕಾರಿ ನರೇಶ್ ಪಾಲ್ ಗಂಗ್ವಾರ್ (Naresh Pal Gangwar) ಅವರನ್ನು ಕೇಂದ್ರ ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ (Secretary of the Department of Higher Education)ಯಾಗಿ ನೇಮಕ ಮಾಡಲಾಗಿದೆ. ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ (paper leak) ಪ್ರಕರಣ ಹಾಗೂ ಪರೀಕ್ಷಾ ಅಕ್ರಮಗಳಿಂದಾಗಿ ಶಿಕ್ಷಣ ಸಚಿವಾಲಯವು ತೀವ್ರ ಟೀಕೆಗೆ ಗುರಿಯಾಗಿರುವ ಸಂದರ್ಭದಲ್ಲೇ ಈ ಮಹತ್ವದ ನೇಮಕಾತಿ ನಡೆದಿದೆ. ಸ್ಪರ್ಧಾತ್ಮಕ ಪರೀಕ್ಷೆಗಳ ಅಕ್ರಮಗಳು ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳನ್ನು ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಸೇರಿದಂತೆ ವಿವಿಧ ಪ್ರತಿಭಟನಾಕಾರರು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan) ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಈ ಪ್ರಮುಖ ಬೆಳವಣಿಗೆಯಾಗಿದೆ.

ರಾಜಸ್ಥಾನ ಕೆಡರ್‌ನ 1994ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಗಂಗ್ವಾರ್, ಪ್ರಸ್ತುತ ಕಾರ್ಯದರ್ಶಿಯಾಗಿರುವ 1992ರ ಬ್ಯಾಚ್‌ನ ಐಎಎಸ್ ಅಧಿಕಾರಿ ವಿನೀತ್ ಜೋಶಿ ಅವರ ಸ್ಥಾನವನ್ನು ಅಲಂಕರಿಸಲಿದ್ದಾರೆ. ವಿನೀತ್ ಜೋಶಿ ಅವರನ್ನು ಪಂಚಾಯತ್ ರಾಜ್ ಸಚಿವಾಲಯದ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದ್ದು, ಜುಲೈ 31 ರಂದು ಹಾಲಿ ಕಾರ್ಯದರ್ಶಿ ವಿವೇಕ್ ಭಾರದ್ವಾಜ್ ನಿವೃತ್ತರಾದ ನಂತರ ಅವರು ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಯಾರೀ ನರೇಶ್ ಪಾಲ್ ಗಂಗ್ವಾರ್?

1970 ಅಕ್ಟೋಬರ್ 21 ರಂದು ನೈನಿತಾಲ್‌ನಲ್ಲಿ ಜನಿಸಿದ ನರೇಶ್ ಪಾಲ್ ಗಂಗ್ವಾರ್, ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್ ಎಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಹಾಗೂ ಕಮ್ಯುನಿಕೇಷನ್ & ರೇಡಾರ್‌ನಲ್ಲಿ ಎಂ.ಟೆಕ್ ಮುಗಿಸಿದ್ದಾರೆ. ಜೊತೆಗೆ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ (ಎಂಎ) ಪದವಿಯನ್ನೂ ಪಡೆದಿದ್ದಾರೆ. 1993ರಲ್ಲಿ ಯುಪಿಎಸ್‌ಸಿ ಪರೀಕ್ಷೆ ತೇರ್ಗಡೆಯಾದ ಅವರು 1994ರಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆಗೆ ಸೇರಿದರು.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ: ಫಾಸ್ಟ್-ಟ್ರ್ಯಾಕ್ ಕೋರ್ಟ್ ಸಾಕಾಗದು, ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಲಿ: ಸಿಜೆಪಿ ಕಠಿಣ ನಿಲುವು

ಆಡಳಿತ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಅನುಭವ:

ರಾಜಸ್ಥಾನ ಸರ್ಕಾರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿರುವ ಗಂಗ್ವಾರ್, ಟೋಂಕ್, ಸವಾಯಿ ಮಾಧೋಪುರ, ಝಾಲಾವಾರ್, ಜೋಧ್‌ಪುರ ಮತ್ತು ಭರತ್‌ಪುರ ಜಿಲ್ಲೆಗಳ ಜಿಲ್ಲಾಧಿಕಾರಿಯಾಗಿ (ಕಲೆಕ್ಟರ್) ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದಾರೆ.

2014ರಲ್ಲಿ ರಾಜಸ್ಥಾನ ಸರ್ಕಾರದ ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡ ಅವರು, ಶಿಕ್ಷಣ ಕ್ಷೇತ್ರದ ಆಡಳಿತ ಹಾಗೂ ಶೈಕ್ಷಣಿಕ ನೀತಿಗಳನ್ನು ರೂಪಿಸುವಲ್ಲಿ ಸುದೀರ್ಘ ಅನುಭವ ಗಳಿಸಿದರು. ಸುಮಾರು ಎರಡೂವರೆ ದಶಕಗಳ ಕಾಲ ರಾಜಸ್ಥಾನ ಸರ್ಕಾರದ ವಿವಿಧ ಹುದ್ದೆಗಳಲ್ಲಿದ್ದ ಅವರು 2020ರಲ್ಲಿ ಕೇಂದ್ರ ಸೇವೆಗೆ ನಿಯೋಜನೆಗೊಂಡರು.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿ ಹಾಗೂ ಹೆಚ್ಚುವರಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ಗಂಗ್ವಾರ್, ಕಳೆದ ವರ್ಷ ಪಶುಸಂಗೋಪನೆ ಮತ್ತು ಹಾಲಿನ ಉತ್ಪಾದನೆ ಇಲಾಖೆಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದರು. ಇದೀಗ ಶಿಕ್ಷಣ ಇಲಾಖೆಯ ಅತ್ಯುನ್ನತ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದಾರೆ.