ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Great Escape; ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಸಂಚರಿಸುತ್ತಿದ್ದ ಕಾರ್‌ನ ಟೈರ್‌ ಸ್ಫೋಟ: ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ

MK Stalin: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಸಂಚರಿಸುತ್ತಿದ್ದ ಕಾರ್‌ನ ಟೈರ್‌ ಸ್ಫೋಟಗೊಂಡಿದ್ದು ಅದೃಷ್ಟವಶಾತ್‌ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ದಿಂಡಿಗಲ್‌ನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರು ಮುಧುರೈ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ.

ಕೂದಲೆಳೆ ಅಂತರದಲ್ಲಿ ಪಾರಾದ ಎಂ.ಕೆ. ಸ್ಟಾಲಿನ್‌

ಎಂ.ಕೆ. ಸ್ಟಾಲಿನ್‌ (ಸಂಗ್ರಹ ಚಿತ್ರ) -

Ramesh B
Ramesh B Jan 7, 2026 9:22 PM

ಚೆನ್ನೈ, ಜ. 7: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ (MK Stalin) ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಅವರು ಸಂಚರಿಸುತ್ತಿದ್ದ ಕಾರ್‌ನ ಟೈರ್‌ ಸ್ಫೋಟಗೊಂಡಿದ್ದು ಅದೃಷ್ಟವಶಾತ್‌ ಯಾವುದೇ ಅಪಾಯವಿಲ್ಲದೆ ಸುರಕ್ಷಿತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ದಿಂಡಿಗಲ್‌ನಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಅವರು ಮುಧುರೈ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅವರನ್ನೂ ಕೂಡಲೇ ಮತ್ತೊಂದು ವಾಹನದಲ್ಲಿ ಕರೆದೊಯ್ಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ʼʼದಿಂಡಿಗಲ್‌ನಲ್ಲಿ ಆಯೋಜಿಸಿದ್ದ ವಿವಿಧ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸ್ಟಾಲಿನ್‌ ಹಲವು ಯೋಜನೆಗಳಿಗೆ ಶಿಲಾನ್ಯಾಸ, ಉದ್ಘಾಟನೆ ನೆರವೇರಿಸಿ, ಅಧಿಕ ಸಂಖ್ಯೆಯಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಸವಲತ್ತುಗಳನ್ನು ವಿತರಿಸಿ ಹಿಂದಿರುಗುತ್ತಿದ್ದರು. ಆ ವೇಳೆ ವಾಹನ ಟೈರ್‌ ಸ್ಫೋಟಗೊಂಡಿತುʼʼ ಎಂದು ಅಧಿಕಾರಿಗಳು ವಿವರಿಸಿದ್ದಾರೆ. ಡಿಎಂಕೆಗೆ ಸೇರಿದ ಲ್ಯಾಂಡ್‌ ರೋವರ್‌ ಕಾರ್‌ನಲ್ಲಿ ಅವರು ಪ್ರಯಾಣಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರ ಕಾರ್‌ ಟೈರ್‌ ಸ್ಫೋಟ:



ʼʼಇದು ಟೈರ್‌ಗೆ ಸಂಬಂಧಿಸಿದ ಸಮಸ್ಯೆ. ಸ್ಟಾಲಿನ್‌ ಅವರನ್ನು ಕೂಡಲೇ ಮತ್ತೊಂದು ಕಾರ್‌ಗೆ ಸ್ಥಳಾಂತರಿಸಲಾಯಿತು. ಅವರಿಗೆ ಯಾವುದೇ ಅಪಾಯವಾಗಿಲ್ಲʼʼ ಎಂದು ಪೊಲೀಸ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಂತರ ಸ್ಟಾಲಿನ್ ವಿಮಾನ ನಿಲ್ದಾಣಕ್ಕೆ ತೆರಳಿ ನಿಗದಿಯಂತೆ ಮಧುರೈನಿಂದ ಹೊರಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತದ ಬಳಿಕ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲಾಯಿತು.

ಕೇಂದ್ರದ ವಿರುದ್ದ ವಾಗ್ದಾಳಿ

ಇದಕ್ಕೂ ಮೊದಲು ದಿಂಡಿಗಲ್‌ನಲ್ಲಿ ಸ್ಟಾಲಿನ್‌ 1,595 ಕೋಟಿ ರುಪಾಯಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದರು. ಈ ವೇಳೆ ಅವರು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು. ತಮಿಳುನಾಡು ದೇವಸ್ಥಾನ ಆಡಳಿತ ಮಂಡಳಿ ಮತ್ತು ಧಾರ್ಮಿಕ ಸ್ವಾತಂತ್ರ್ಯದ ವಿಚಾರವಾಗಿ ಮಾತನಾಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಹಿಂದೂ ಧಾರ್ಮಿಕ ಆಚರಣೆಗಳ ಮೇಲೆ ನಿರ್ಬಂಧ ಹೇರಲಾಗಿದೆ ಎಂಬ ಶಾ ಅವರ ಇತ್ತೀಚಿನ ಹೇಳಿಕೆಗಳನ್ನು ಉಲ್ಲೇಖಿಸಿದ ಸ್ಟಾಲಿನ್, ಈ ಆರೋಪವನ್ನು ಆಧಾರರಹಿತ ಎಂದು ತಳ್ಳಿಹಾಕಿದರು.

ತಮಿಳುನಾಡಿನಲ್ಲಿ ಕಾರ್ತಿಕ ದೀಪದ ವಿವಾದದ ಮಧ್ಯೆ ದರ್ಗಾದಲ್ಲಿ ಮೆರೆಯಿತು ಹಿಂದೂ, ಮುಸ್ಲಿಂ ಭಾವೈಕ್ಯತೆ

ʼʼಪ್ರಸ್ತುತ ಡಿಎಂಕೆ ಸರ್ಕಾರದ ಅಡಿಯಲ್ಲಿ ಸುಮಾರು 4,000 ದೇವಾಲಯಗಳಲ್ಲಿ ಕುಂಭಾಭಿಷೇಕ ನಡೆದಿದೆ ಮತ್ತು 7,600 ಎಕರೆಗಳಿಗೂ ಹೆಚ್ಚು ವಿಸ್ತೀರ್ಣದ ಸುಮಾರು 7,701 ಕೋಟಿ ರೂ. ಮೌಲ್ಯದ ದೇವಾಲಯದ ಭೂಮಿಯನ್ನು ಅತಿಕ್ರಮಣಗಳಿಂದ ವಶಪಡಿಸಿಕೊಳ್ಳಲಾಗಿದೆʼʼ ಎಂದು ಸ್ಟಾಲಿನ್ ಹೇಳಿದರು. "ದ್ರಾವಿಡ ಮಾದರಿ ಸರ್ಕಾರವು ಎಲ್ಲ ಧರ್ಮಗಳ ಹಕ್ಕುಗಳನ್ನು ರಕ್ಷಿಸುತ್ತದೆ ಮತ್ತು ಪ್ರತಿಯೊಂದು ನಂಬಿಕೆ ಘನತೆಯನ್ನು ಖಚಿತಪಡಿಸುತ್ತದೆ" ಎಂದು ಅವರು ತಿಳಿಸಿದರು.

ತಿರುಪರಾಂಕುಂದ್ರಂ ಬೆಟ್ಟದ ದರ್ಗಾದ ಪಕ್ಕದಲ್ಲಿರುವ ಕಂಬದ ಮೇಲೆ ದೀಪ ಹಚ್ಚಲು ಅನುಮತಿ ನೀಡಿದ ತಮಿಳುನಾಡು ಹೈಕೋರ್ಟ್‌ ನೀಡಿದ ಆದೇಶವನ್ನು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್‌ನ ತೀರ್ಪಿನ ಬೆನ್ನಲ್ಲೇ ಅವರು ಈ ಹೇಳಿಕೆ ನೀಡಿದರು. ಪ್ರಕರಣವನ್ನು ನೇರವಾಗಿ ಹೆಸರಿಸದೆ, ಬಿಜೆಪಿಯ ಕೆಲವು ವಿಭಾಗಗಳು ನಂಬಿಕೆಯನ್ನು ರಾಜಕೀಯಗೊಳಿಸಲು ಮತ್ತು ತಮಿಳುನಾಡಿನಲ್ಲಿ ವಿಭಜನೆಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಸ್ಟಾಲಿನ್ ಆರೋಪಿಸಿದರು. "ತಮಿಳುನಾಡಿನ ಜನರು ರಾಜಕೀಯ ಲಾಭಕ್ಕಾಗಿ ಧಾರ್ಮಿಕ ಸಾಮರಸ್ಯವನ್ನು ಕದಡಲು ಬಿಡುವುದಿಲ್ಲ" ಎಂದು ಮುಖ್ಯಮಂತ್ರಿ ಸ್ಟಾಲಿನ್‌ ಗುಡುಗಿದರು.