ʼಕೌನ್ ಬನೇಗಾ ಕರೋಡ್‌ಪತಿʼಯಲ್ಲಿ ಕೋಟಿ ರುಪಾಯಿ ಗೆದ್ದ ಬಾಲಕ ಈಗ ಐಪಿಎಸ್ ಅಧಿಕಾರಿ: ಯಾರಿವರು?
Kaun Banega Crorepati: 2001ರಲ್ಲಿ ರವಿ ಮೋಹನ್ ಸೈನಿ ಎನ್ನುವ ಬಾಲಕ 14 ವರ್ಷ ವಯಸ್ಸಿನವನಾಗಿದ್ದಾಗ ಕೆಬಿಸಿ ಜೂನಿಯರ್ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡಿದ್ದರು. ಜೂನಿಯರ್ ಶೋನಲ್ಲಿ ಅವರು 1 ಕೋಟಿ ರುಪಾಯಿ ಗೆದ್ದು ದೇಶದ ಗಮನ ಸೆಳೆದಿದ್ದರು. ಈಗ ಅವರು ಐಪಿಎಸ್ ಅಧಿಕಾರಿಯಾಗಿ ಆಯ್ಕೆಯಾಗಿದ್ದಾರೆ.
ರವಿ ಮೋಹನ್ ಸೈನಿ ಮತ್ತು ಅಮಿತಾಭ್ ಬಚ್ಚನ್ (ಸಂಗ್ರಹ ಚಿತ್ರ) -
ನವದೆಹಲಿ, ಮಾ. 10: ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ (Kaun Banega Crorepati) ರಿಯಾಲಿಟಿ ಶೋ ನೀವು ನೋಡಿರಬಹುದು. ಈ ಕಾರ್ಯಕ್ರಮ ಜ್ಞಾನ ಮತ್ತು ಮನರಂಜನೆಯ ಭಾಗವಾಗಿ ಹೆಚ್ಚು ಖ್ಯಾತಿ ಗಳಿಸಿದೆ. ಕೇವಲ 14 ವರ್ಷದವನಿದ್ದಾಗ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಾಲಕನೊಬ್ಬ ಈಗ ದೇಶದ ಐಪಿಎಸ್ ಅಧಿಕಾರಿಯಾಗಿದ್ದಾರೆ. ಹೌದು, 2001ರಲ್ಲಿ ರವಿ ಮೋಹನ್ ಸೈನಿ ಎನ್ನುವ ಬಾಲಕ ಕೇವಲ 14 ವರ್ಷ ವಯಸ್ಸಿನವನಾಗಿದ್ದಾಗ ಕೆಬಿಸಿ ಜೂನಿಯರ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಜೂನಿಯರ್ ಶೋನಲ್ಲಿ ಅವರು 1 ಕೋಟಿ ರುಪಾಯಿ ಗೆದ್ದು ದೇಶದ ಗಮನ ಸೆಳೆದಿದ್ದರು. ಈಗ ಅವರು ಐಪಿಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನೇಕರ ಕಥೆಗಳು ಸ್ಫೂರ್ತಿ ನೀಡುತ್ತವೆ. ಅಂತವುಗಳ ಪಟ್ಟಿಯಲ್ಲಿ ರವಿ ಮೋಹನ್ ಸೈನಿ ಕೂಡ ಸೇರಿದ್ದಾರೆ. 2001ರಲ್ಲಿ ಕೌನ್ ಬನೇಗಾ ಕರೋಡ್‌ಪತಿ ರಿಯಾಲಿಟಿ ಶೋದಲ್ಲಿ ಕಾಣಿಸಿಕೊಂಡಿದ್ದು ಅವರಿಗೆ ಆಗ ಕೇವಲ 14 ವರ್ಷ. ಆ ಸಮಯದಲ್ಲಿ, ಅವರು 10ನೇ ತರಗತಿ ವಿದ್ಯಾರ್ಥಿಯಾಗಿದ್ದರು. ಎಲ್ಲ 15 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ 1 ಕೋಟಿ ರುಪಾಯಿ ಬಹುಮಾನ ಗೆದ್ದಿದ್ದರು.
ಹಿಮದ ಕಣಿವೆಯ ನಡುವೆ ಹಾದು ಹೋದ ವಂದೇ ಭಾರತ್: ಕಾಶ್ಮೀರದ ಎದುರು ಸ್ವಿಟ್ಜರ್ಲೆಂಡ್ ಶೂನ್ಯ ಎಂದ ನೆಟ್ಟಿಗರು
ಶಾಲಾ ಶಿಕ್ಷಣದ ಬಳಿಕ ಸೈನಿ ವೈದ್ಯಕೀಯ ಶಿಕ್ಷಣವನ್ನು ಮುಂದುವರಿಸಲು ನಿರ್ಧರಿಸಿದರು. ಅವರು ವೈದ್ಯಕೀಯ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸಿ ಅಂತಿಮವಾಗಿ ಮಹಾತ್ಮ ಗಾಂಧಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದರು. ರಾಜಸ್ಥಾನದ ಜೈಪುರದ ಮಹಾತ್ಮಾ ಗಾಂಧಿ ವೈದ್ಯಕೀಯ ಕಾಲೇಜಿನಲ್ಲಿ MBBS ಪದವಿ ಪಡೆದರು.
ಈ ಅವಧಿಯಲ್ಲಿ, ಅವರು ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಬರೆಯಲು ಕೂಡ ತಯಾರಿ ನಡೆಸಿದರು. ಅನೇಕ ಆಕಾಂಕ್ಷಿಗಳಂತೆ, ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಸಾಕಷ್ಟು ಸವಾಲು ಎದುರಿಸಿದರು. 2012ರಲ್ಲಿ ಮೊದಲ ಪ್ರಯತ್ನದಲ್ಲಿ ವಿಫಲರಾದರು. ಬಳಿಕ 2014ರಲ್ಲಿ ಮತ್ತೊಮ್ಮೆ ನಾಗರಿಕ ಸೇವಾ ಪರೀಕ್ಷೆಗೆ ಹಾಜರಾಗಿ 461ನೇ ಅಖಿಲ ಭಾರತ ಶ್ರೇಣಿಯನ್ನು ಪಡೆದು ಐಪಿಎಸ್ ಅಧಿಕಾರಿಯಾದರು.
ತಮ್ಮ ಪರಿಶ್ರಮದಿಂದಾಗಿ ರವಿ ಮೋಹನ್ ಸೈನಿ ಗುಜರಾತ್ ಕೆಡರ್‌ನ ಐಪಿಎಸ್ ಅಧಿಕಾರಿಯಾಗಿ ನೇಮಕಗೊಂಡರು. 2021ರಲ್ಲಿ ಪೋರ್ ಬಂದರ್‌ನಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಂಡಾಗ ಅವರ ಸಾಧನೆ ಮತ್ತಷ್ಟು ಗಮನ ಸೆಳೆಯಿತು.