ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಹೆಸರು ಬದಲಾವಣೆ, ಬುರ್ಖಾ ಧಾರಣೆಗೆ ತರಬೇತಿ, ಮಲೇಷ್ಯಾ ಉದ್ಯೋಗದ ಆಮಿಷ: ಟಿಸಿಎಸ್ ಕರ್ಮಕಾಂಡದ ಮತ್ತಷ್ಟು ವಿವರ ಬಹಿರಂಗ

ನಾಸಿಕ್‌ನ ಟಿಸಿಎಸ್ ಕಚೇರಿಗೆ ಸಂಬಂಧಿಸಿದ ಮತಾಂತರ ಆರೋಪ ಪ್ರಕರಣದಲ್ಲಿ ಪ್ರಮುಖ ಆರೋಪಿ ನಿದಾ ಖಾನ್ ವಿರುದ್ಧ ಇನ್ನಷ್ಟು ಪುರಾವೆಗಳು ಬಹಿರಂಗಗೊಂಡಿವೆ. ಎಸ್‌ಐಟಿ ತನಿಖೆಯಲ್ಲಿ, ದೂರುದಾರರನ್ನು ಧಾರ್ಮಿಕವಾಗಿ ಪ್ರಭಾವಿಸಲು ಪ್ರಯತ್ನಿಸಿದ ಮಾಹಿತಿ ಹೊರ ಬಿದ್ದಿದೆ. ಧಾರ್ಮಿಕ ವಸ್ತುಗಳ ಒದಗಿಸಿದ್ದು ಹಾಗೂ ಮೊಬೈಲ್ ಮೂಲಕ ಧಾರ್ಮಿಕ ವಿಷಯಗಳನ್ನು ಹಂಚಿಕೊಂಡಿದ್ದ ವಿವರ ಪತ್ತೆಯಾಗಿವೆ. ತನಿಖೆ ಈಗ ಮಾಲೆಗಾಂವ್ ಮತ್ತು ಮಲೇಷ್ಯಾ ಸಂಪರ್ಕಗಳತ್ತ ವಿಸ್ತರಿಸಿದ್ದು, ಉದ್ಯೋಗದ ಹೆಸರಿನಲ್ಲಿ ವಿದೇಶಕ್ಕೆ ಕಳುಹಿಸುವ ಯತ್ನಿಸಿದರ ಕುರಿತು ಪರಿಶೀಲನೆ ನಡೆಯುತ್ತಿದೆ.

ಆರೋಪಿ ನಿದಾ ಖಾನ್

ಮುಂಬೈ, ಏ. 28: ಮಹಾರಾಷ್ಟ್ರದ ನಾಸಿಕ್‌ನ ಟಿಸಿಎಸ್ ಕಚೇರಿಯಲ್ಲಿ (TCS Office) ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಬಲವಂತದ ಮತಾಂತರ ಯತ್ನದ (attempted forced religious conversion) ಆರೋಪ ಪ್ರಕರಣವು ಸೋಮವಾರ ಹೊಸ ತಿರುವು ಪಡೆದುಕೊಂಡಿದೆ. ಪ್ರಮುಖ ಆರೋಪಿ ನಿದಾ ಖಾನ್ (Nida Khan) ವಿರುದ್ಧ ಹೆಚ್ಚಿನ ಪುರಾವೆಗಳಿದ್ದು, ತನಿಖೆಯು ಮಾಲೆಗಾಂವ್ ಮತ್ತು ಮಲೇಷ್ಯಾದ ಸಂಪರ್ಕಗಳನ್ನು ಒಳಗೊಂಡಿದೆ ಎಂದು ಪ್ರಾಸಿಕ್ಯೂಟರ್‌ಗಳು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ನಿದಾ ಖಾನ್‌ನ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ವೇಳೆ ಮಾಹಿತಿ ನೀಡಿದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅಜಯ್ ಮಿಶ್ರಾ, ದೂರುದಾರರೊಬ್ಬರಿಗೆ ಇಸ್ಲಾಂ ಧರ್ಮವನ್ನು ಅಳವಡಿಸಿಕೊಳ್ಳುವಂತೆ ನಿದಾ ಖಾನ್ ಪ್ರಭಾವ ಬೀರಲು ಯತ್ನಿಸಿದ ಪುರಾವೆಗಳನ್ನು ಎಸ್‌ಐಟಿ ಸಂಗ್ರಹಿಸಿದೆ ಎಂದು ಹೇಳಿದರು. ದೂರುದಾರರಿಗೆ ಬುರ್ಖಾ ನೀಡಿ, ಧಾರ್ಮಿಕ ಪುಸ್ತಕಗಳು ಮತ್ತು ಮೊಬೈಲ್‌ನಲ್ಲಿ ಧಾರ್ಮಿಕ ಕಲಿಕೆಯ ಆ್ಯಪ್‌ಗಳನ್ನು ಅಳವಡಿಸುವ ಮೂಲಕ ಆಚರಣೆಗಳನ್ನು ಕಲಿಸಲಾಗುತ್ತಿತ್ತು ಎಂದು ಅವರು ತಿಳಿಸಿದರು.

ನಾಸಿಕ್ ಟಿಸಿಎಸ್ ಪ್ರಕರಣ: ಆರೋಪಿ ನಿದಾ ಖಾನ್ ಅಮಾನತು ಪತ್ರ ಬಹಿರಂಗ

ಪ್ರಾಸಿಕ್ಯೂಷನ್ ಪ್ರಕಾರ, ನಿದಾ ಖಾನ್ ದೂರುದಾರರನ್ನು ತನ್ನ ಮನೆಗೆ ಕರೆದೊಯ್ದು ಪ್ರಾರ್ಥನೆ ಸಲ್ಲಿಸುವುದು ಮತ್ತು ಹಿಜಾಬ್ ಧರಿಸುವುದನ್ನು ಕಲಿಸುತ್ತಿದ್ದಳು. ಅಲ್ಲದೆ, ದೂರುದಾರರ ಹೆಸರನ್ನು 'ಹನಿಯಾ' ಎಂದು ಬದಲಾಯಿಸಲು ಯೋಜಿಸಲಾಗಿತ್ತು. ತನಿಖಾಧಿಕಾರಿಗಳು ನಿದಾ ಖಾನ್‌ ಫೋನ್‌ನಲ್ಲಿ ಇಸ್ಲಾಮಿಕ್ ರೀಲ್ಸ್‌ಗಳು ಮತ್ತು ಯೂಟ್ಯೂಬ್ ಲಿಂಕ್‌ಗಳನ್ನು ಪತ್ತೆಹಚ್ಚಿದ್ದಾರೆ. ಸಹ-ಆರೋಪಿ ಡ್ಯಾನಿಶ್ ಶೇಖ್ ದೂರುದಾರರ ಶೈಕ್ಷಣಿಕ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ಅವುಗಳನ್ನು ಮಾಲೆಗಾಂವ್ ತಂಡಕ್ಕೆ ನೀಡಲು ಮುಂದಾಗಿದ್ದ ಎಂದು ಆರೋಪಿಸಲಾಗಿದೆ.

ಅಷ್ಟೇ ಅಲ್ಲದೆ, ಇಮ್ರಾನ್ ಎಂಬ ವ್ಯಕ್ತಿಯ ಮೂಲಕ ದೂರುದಾರರನ್ನು ಉದ್ಯೋಗಕ್ಕಾಗಿ ಮಲೇಷ್ಯಾಕ್ಕೆ ಕಳುಹಿಸಲು ಸಿದ್ಧತೆ ನಡೆಸಲಾಗಿತ್ತು. ಈ ಸಂಚಿನ ಹಿಂದೆ ಆರ್ಥಿಕ ಬೆಂಬಲವಿದೆಯೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ನಿದಾ ಖಾನ್ ತಲೆಮರೆಸಿಕೊಂಡಿದ್ದು, ಪೊಲೀಸರು ಆಕೆಯ ಬಂಧನಕ್ಕೆ ಪ್ರಯತ್ನಿಸುತ್ತಿದ್ದಾರೆ. ಆದರೆ, ಖಾನ್ ಪರ ವಕೀಲರು ಈ ಆರೋಪಗಳನ್ನು ನಿರಾಕರಿಸಿದ್ದು, ಮಹಾರಾಷ್ಟ್ರದಲ್ಲಿ ಮತಾಂತರದ ವಿರುದ್ಧ ಕಾನೂನು ಇಲ್ಲ ಮತ್ತು ಕೇವಲ ಧಾರ್ಮಿಕ ಭಾವನೆಗಳ ಹೆಸರಿನಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವಾದಿಸಿದ್ದಾರೆ. ಈ ಪ್ರಕರಣದ ಮುಂದಿನ ವಿಚಾರಣೆಯು ಮೇ 2ರಂದು ನಡೆಯಲಿದೆ.