ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೀಟ್ ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆಯಾಗಿಲ್ಲ: ನಕಲಿ ಸುದ್ದಿ ನಂಬಬೇಡಿ ಎಂದ ಎನ್‌ಟಿಎ

NEET Question Paper: ನೀಟ್ ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅದು ಸುಳ್ಳು ಎಂದು ಎನ್‌ಟಿಎ ಹೇಳಿದೆ. ಮರುಪರೀಕ್ಷೆಯ ಸಿದ್ಧತೆಗಳನ್ನು ಪ್ರತಿಯೊಂದು ಹಂತದಲ್ಲೂ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ಎನ್‌ಟಿಎ ಸ್ಪಷ್ಟಪಡಿಸಿದೆ. ಈ ಬಗ್ಗೆ ಫ್ಯಾಕ್ಟ್‌ ಚೆಕ್‌ ಕೂಡ ಮಾಡಲಾಗಿದ್ದು, ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎನ್ನುವುದನ್ನು ತಿಳಿಸಲಾಗಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ನಡೆದ ಪ್ರತಿಭಟನೆ (ಸಂಗ್ರಹ ಚಿತ್ರ)

ನವದೆಹಲಿ, ಜೂ. 13: ನೀಟ್ (NEET) ಪ್ರಶ್ನೆ ಪತ್ರಿಕೆ ಮತ್ತೆ ಸೋರಿಕೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಅದು ಸುಳ್ಳು ಎಂದು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ಹೇಳಿದೆ. ಮರುಪರೀಕ್ಷೆಯ ಸಿದ್ಧತೆಗಳನ್ನು ಪ್ರತಿಯೊಂದು ಹಂತದಲ್ಲೂ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದೆ. ಕೇಂದ್ರ, ರಾಜ್ಯಗಳು ಮತ್ತು ಜಿಲ್ಲೆಗಳಾದ್ಯಂತ ಸಂಘಟಿತ ಪ್ರಯತ್ನಗಳೊಂದಿಗೆ, ಪ್ರತಿಯೊಬ್ಬ ಅಭ್ಯರ್ಥಿಗೂ ಸುಗಮ ಮತ್ತು ಸುರಕ್ಷಿತ ಪರೀಕ್ಷಾ ಅನುಭವವನ್ನು ಖಚಿತಪಡಿಸುವುದರ ಮೇಲೆಯೇ ನಮ್ಮ ಗಮನ ಕೇಂದ್ರೀಕೃತವಾಗಿದೆ ಎಂದು ಪರೀಕ್ಷಾ ಸಮಿತಿ ಎಕ್ಸ್‌ನ ಪೋಸ್ಟ್‌ನಲ್ಲಿ ತಿಳಿಸಿದೆ.

ಮರು ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಮತ್ತೆ ಸೋರಿಕೆಯಾಗಿದೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದು ನಕಲಿ ಎಂದು ಎನ್‌ಟಿಎ ಹೇಳಿದೆ. ನೀಟ್-ಯುಜಿ ಪರೀಕ್ಷೆಯು ಈ ಮೊದಲು ಮೇ 3ರಂದು ನಡೆಯಿತು. ಆದರೆ ಪರೀಕ್ಷೆಗೆ ಮುನ್ನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬುದು ತಿಳಿದುಬಂದ ನಂತರ ಅದನ್ನು ರದ್ದುಗೊಳಿಸಿ ಮರು ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ.

ಫ್ಯಾಕ್ಟ್‌ ಚೆಕ್‌:



ಪ್ರಶ್ನೆಪತ್ರಿಕೆ ಸೋರಿಕೆಗೆ ವಿದ್ಯಾರ್ಥಿಗಳು ಮತ್ತು ವಿರೋಧ ಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಜೂನ್ 21ರಂದು ಮರು ಪರೀಕ್ಷೆ ನಡೆಸಲು ಆದೇಶಿಸಲಾಯಿತು. ವಿದ್ಯಾರ್ಥಿಗಳನ್ನು ಸಮಾಧಾನಪಡಿಸುವ ಪ್ರಯತ್ನದಲ್ಲಿ, ಸರ್ಕಾರವು ಹೊಸ ಪರೀಕ್ಷೆಯ ಸಮಯದಲ್ಲಿ ವಿವರಗಳನ್ನು ಭರ್ತಿ ಮಾಡಲು ಮತ್ತು ಔಪಚಾರಿಕತೆಗಳನ್ನು ಪೂರ್ಣಗೊಳಿಸಲು 15 ನಿಮಿಷ ಹೆಚ್ಚುವರಿ ನೀಡುವುದಾಗಿ ಘೋಷಿಸಿತು.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ; ಪ್ರಧಾನಿ ವೈಯಕ್ತಿಕವಾಗಿ ಲೋಪಗಳ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದ ಸರ್ಕಾರ

ನ್ಯಾಯಯುತ ಮರು ಪರೀಕ್ಷೆಯ ಭರವಸೆ

ವಿದ್ಯಾರ್ಥಿಗಳಿಗೆ ಮರು ಪರೀಕ್ಷೆಯನ್ನು ನ್ಯಾಯಯುತ ಮತ್ತು ಸಂಘಟಿತ ರೀತಿಯಲ್ಲಿ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಭರವಸೆ ನೀಡಿದ್ದಾರೆ. ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಇರುವಂತೆ ಸೂಚಿಸಿದ್ದಾರೆ. “ಎಲ್ಲ ನೀಟ್ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದಿರಿ ಮತ್ತು ತಮ್ಮ ಅಧ್ಯಯನದತ್ತ ಗಮನಹರಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಮರುಪರೀಕ್ಷೆಯನ್ನು ನ್ಯಾಯಯುತ ಮತ್ತು ಸುಸಂಘಟಿತ ರೀತಿಯಲ್ಲಿ ನಡೆಸಲಾಗುವುದು” ಎಂದು ಧರ್ಮೇಂದ್ರ ಪ್ರಧಾನ್ ಭರವಸೆ ನೀಡಿದ್ದಾರೆ.

ಮೇ 3ರಂದು ನಡೆದ ಪರೀಕ್ಷೆ ರದ್ದಾದ ನಂತರ ನೀಟ್ ಆಕಾಂಕ್ಷಿಗಳಲ್ಲಿ ತೀವ್ರ ಆತಂಕ ಉಂಟಾಗಿತ್ತು. ಕೆಲವು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳೂ ನಡೆದಿವೆ. ಮಹಾರಾಷ್ಟ್ರದ ನಾಗ್ಪುರದಲ್ಲಿ 20 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಪರೀಕ್ಷೆ ರದ್ದಾದ ಕಾರಣ ಆಕೆ ಈ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ಕುಟುಂಬ ಆರೋಪಿಸಿದೆ. ಕಲಬುರಗಿ ಜಿಲ್ಲೆಯಲ್ಲಿ 18 ವರ್ಷದ ಯುವತಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮರುಪರೀಕ್ಷೆ ತೆಗೆದುಕೊಳ್ಳುವ ಬಗ್ಗೆ ಆಕೆ ಒತ್ತಡಕ್ಕೊಳಗಾಗಿದ್ದಳು ಎಂದು ವಿದ್ಯಾರ್ಥಿನಿಯ ತಂದೆ ಹೇಳಿದ್ದಾರೆ.

ಅಂದಹಾಗೆ, ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿದೆ. ಈಗಾಗಲೇ 13 ಜನರನ್ನು ಬಂಧಿಸಲಾಗಿದ್ದು, ಬಂಧಿತರಲ್ಲಿ ಹೆಚ್ಚಿನವರು ಮಹಾರಾಷ್ಟ್ರದವರು. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಸಿಬಿಐ ಹೇಳಿದೆ. ಎನ್‌ಟಿಎ ಅಧಿಕಾರಿಗಳ ಶಾಮೀಲೂ ಬಗ್ಗೆಯೂ ತನಿಖೆ ನಡೆಯುತ್ತಿದೆ.