ಮುಂಬೈ, ಜೂ.25: ನೀಟ್ (NEET) ಆಕಾಂಕ್ಷಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ (Maharashtra) ಹಿಂಗೋಲಿಯಲ್ಲಿ ನಡೆದಿದೆ. 18 ವರ್ಷದ ನೀಟ್ ಆಕಾಂಕ್ಷಿಯೊಬ್ಬ ಆತ್ಮಹತ್ಯೆ (Self-harming) ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ವಿಡಿಯೊ ಮಾಡಿ, ಕ್ಷಮಿಸಿ ಅಮ್ಮ ಎಂದು ಕೇಳಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಸುಶೀಲ್ ಧಾಗೆ ಎಂದು ಗುರುತಿಸಲಾಗಿದೆ.
ಮೇ 3 ರಂದು ನಡೆದ ವೈದ್ಯಕೀಯ ಪ್ರವೇಶ ಪರೀಕ್ಷೆಯನ್ನು ಪತ್ರಿಕೆ ಸೋರಿಕೆ ಆರೋಪದ ನಡುವೆ ರದ್ದುಗೊಳಿಸಿದ ನಂತರ, ಸುಶೀಲ್ ಧಾಗೆ ಜೂನ್ 21 ರಂದು ನಡೆದಿದ್ದ ಮರುಪರೀಕ್ಷೆಗೆ ಹಾಜರಾಗಿದ್ದ. ಇದೀಗ ವಿಡಿಯೊ ರೆಕಾರ್ಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. “ಅಮ್ಮಾ, ನಾನು ಇಂದು ನನ್ನ ಪ್ರಾಣವನ್ನೇ ತೆಗೆದುಕೊಳ್ಳುತ್ತಿದ್ದೇನೆ. ಅಮ್ಮ, ದಯವಿಟ್ಟು ಸ್ವಲ್ಪವೂ ಚಿಂತಿಸಬೇಡಿ. ನನ್ನ ಮುಂದಿನ ಜನ್ಮದಲ್ಲಿ, ನಾನು ಮತ್ತೆ ನಿಮ್ಮ ಗರ್ಭದಿಂದ ಹುಟ್ಟುತ್ತೇನೆ. ನಿಮಗೆ ಈ ರೀತಿಯ ನೋವುಂಟು ಮಾಡುವುದಿಲ್ಲ” ಎಂದು ಆತ ತಮ್ಮ ಮೊಬೈಲ್ ಫೋನ್‌ನಲ್ಲಿ ರೆಕಾರ್ಡ್ ಮಾಡಿದ ವಿಡಿಯೊದಲ್ಲಿ ಕೈಗಳನ್ನು ಜೋಡಿಸಿ ಹೇಳಿದರು.
“ನನ್ನನ್ನು ಕ್ಷಮಿಸಿಬಿಡಿ ಅಮ್ಮ. ಸುಮೇಧ್ ಜೊತೆ ಇರಿ ಅಮ್ಮ. ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳಿ. ನನ್ನ ಬಗ್ಗೆ ಚಿಂತಿಸಬೇಡಿ. ನನಗೆ ತುಂಬಾ ನೋವಾಗಿದೆ. ನನಗೆ ಏನೂ ಮಾಡಲು ಸಾಧ್ಯವಿಲ್ಲ. ನನಗೆ ಏನೂ ಅರ್ಥವಾಗುತ್ತಿಲ್ಲ. ನನ್ನನ್ನು ಕ್ಷಮಿಸು ಅಮ್ಮ” ಎಂದು 33 ಸೆಕೆಂಡುಗಳ ವಿಡಿಯೊದಲ್ಲಿ ದುಃಖ ವ್ಯಕ್ತಪಡಿಸಿದ್ದಾರೆ. ನಂತರ ಈ ವಿಡಿಯೊವನ್ನು ತನ್ನ ಕುಟುಂಬಕ್ಕೆ ಕಳುಹಿಸಿ ಬಾವಿಗೆ ಹಾರಿದ್ದಾರೆ. ಮರುಪರೀಕ್ಷೆ ಕಷ್ಟಕರ ಎಂದು ಅವರ ಕುಟುಂಬ ಪೊಲೀಸ್ ದೂರಿನಲ್ಲಿ ತಿಳಿಸಿದೆ.
ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (NEET) ಪರೀಕ್ಷೆಯನ್ನು ಮೇ 3 ರಂದು ನಡೆಸಲಾಗಿತ್ತು. ಆದರೆ ಪ್ರಶ್ನೆಪತ್ರಿಕೆ ಸೋರಿಕೆಯ ಆರೋಪದಿಂದಾಗಿ ಮೇ 12 ರಂದು ರದ್ದುಗೊಳಿಸಲಾಯಿತು. ಕೇಂದ್ರ ತನಿಖಾ ದಳ (ಸಿಬಿಐ) ಈ ಪ್ರಕರಣದ ತನಿಖೆ ನಡೆಸಿ ಸೋರಿಕೆಯ ಹಿಂದಿನ ಕಿಂಗ್‌ಪಿನ್ ಎಂದು ಆರೋಪಿಸಲ್ಪಟ್ಟ ವ್ಯಕ್ತಿಯನ್ನು ಬಂಧಿಸಿತು. ಅವರನ್ನು ಪುಣೆ ಮೂಲದ ರಸಾಯನಶಾಸ್ತ್ರ ಉಪನ್ಯಾಸಕ ಎಂದು ಗುರುತಿಸಲಾಯಿತು.
ಜೂನ್ 21 ರಂದು ಮರು ಪರೀಕ್ಷೆ ನಡೆಸಲಾಯಿತು. ಸುಮಾರು 1,00,000 ಪದವಿಪೂರ್ವ ಸೀಟುಗಳಿಗೆ ಸ್ಪರ್ಧಿಸುವ ಲಕ್ಷಾಂತರ ಅಭ್ಯರ್ಥಿಗಳು ವಾರ್ಷಿಕವಾಗಿ ನೀಟ್ ಪರೀಕ್ಷೆ ಬರೆಯುತ್ತಾರೆ.
ಉತ್ತರ ಪ್ರದೇಶದಲ್ಲಿ ವಿದ್ಯಾರ್ಥಿನಿ ಆತ್ಮಹತ್ಯೆ
ನೀಟ್ ಮರುಪರೀಕ್ಷೆ ಬರೆದಿದ್ದ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯ ಮರುದಿನವೇ ತನ್ನ ಮನೆಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ವಿದ್ಯಾರ್ಥಿನಿ ತನ್ನ ನೀಟ್ ಪರೀಕ್ಷೆಯ ಸಾಧನೆ ಬಗ್ಗೆ ತೀವ್ರ ಆತಂಕಗೊಂಡಿದ್ದಳು ಹಾಗೂ ನಿರಾಶೆಯಲ್ಲಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಶ್ನೆಪತ್ರಿಕೆಯಲ್ಲಿ ತನ್ನ ಸಹೋದರನಿಗೆ ಉದ್ದೇಶಿಸಿ ಬರೆದಿರುವುದಾಗಿ ಹೇಳಲಾಗುತ್ತಿರುವ ಆತ್ಮಹತ್ಯೆ ಪತ್ರದಲ್ಲಿ "ನನಗೆ ಏನನ್ನೂ ಮಾಡಲು ಸಾಧ್ಯವಿಲ್ಲ" ಎಂದು ಹಿಂದಿಯಲ್ಲಿ ಉಲ್ಲೇಖಿಸಿದ್ದಾಳೆ.