ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

"ಶೇಕಡ 100ರಷ್ಟು ಅಸಲಿ ಪ್ರಶ್ನೆ ಪತ್ರಿಕೆ": ಟೆಲಿಗ್ರಾಮ್ ಗ್ರೂಪ್‌ಗಳೊಳಗಿನ 'ನೀಟ್ ಸೋರಿಕೆ ಫ್ಯಾಕ್ಟರಿ'ಯ ಕರಾಳ ಮುಖ ಅನಾವರಣ

ನೀಟ್ ಪರೀಕ್ಷೆಗೂ ಮುನ್ನ ಟೆಲಿಗ್ರಾಮ್ ಗ್ರೂಪ್‌ಗಳಲ್ಲಿ ʼ100% ಅಸಲಿ ಪ್ರಶ್ನೆ ಪತ್ರಿಕೆʼ ಎಂಬ ಆಮಿಷದ ಮೂಲಕ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ವಂಚಿಸಲು ಯತ್ನಿಸಲಾಗುತ್ತಿದೆ. ನಕಲಿ ಸ್ಕ್ರೀನ್‌ಶಾಟ್‌, ವಾಯ್ಸ್ ನೋಟ್‌ಗಳು ಮತ್ತು ಖಚಿತ ಪ್ರಶ್ನೆಪತ್ರಿಕೆ ಭರವಸೆಗಳ ಮೂಲಕ ಹಣ ವಸೂಲಿ ಮಾಡಲಾಗಿದೆ. ಸಿಬಿಐ ತನಿಖೆ ನಡುವೆ ಇಂತಹ ಎನ್‌ಕ್ರಿಪ್ಟೆಡ್ ನೆಟ್‌ವರ್ಕ್‌ಗಳು ತನಿಖಾ ಸಂಸ್ಥೆಗಳಿಗೆ ದೊಡ್ಡ ಸವಾಲಾಗಿವೆ.

ಎಐ ರಚಿತ ಚಿತ್ರ

ನವದೆಹಲಿ, ಮೇ 19: "100 ಪ್ರತಿಶತ ಅಸಲಿ ಪ್ರಶ್ನೆ ಪತ್ರಿಕೆ"- ಇದು ಸದ್ಯ ಟೆಲಿಗ್ರಾಮ್ ಗ್ರೂಪ್‌ (Telegram group)ಗಳಲ್ಲಿ ಎಗ್ಗಿಲ್ಲದೆ ಹರಿದಾಡುತ್ತಿರುವ ಅತ್ಯಂತ ಸಾಮಾನ್ಯವಾದ ಆಮಿಷದ ಸಂದೇಶ. ನೀಟ್(NEET) ಪರೀಕ್ಷೆಗೆ ಕೆಲ ದಿನಗಳ ಮುಂಚಿತವಾಗಿಯೇ "ಖಚಿತ ಸೆಟ್‌ಗಳು" ಮತ್ತು ಪ್ರಶ್ನೆ ಪತ್ರಿಕೆಗೆ "ನೇರ ಪ್ರವೇಶ" ಕಲ್ಪಿಸಿಕೊಡುವ ಭರವಸೆಗಳ ನಡುವೆ ಈ ಸಂದೇಶಗಳು ನಿರಂತರವಾಗಿ ರಾರಾಜಿಸುತ್ತಿವೆ. ಇದರೊಂದಿಗೆ ಅಡ್ಮಿನ್‌ಗಳು ಕಳುಹಿಸುವ ಧ್ವನಿ ಸಂದೇಶಗಳು (Voice notes) ಪತ್ರಿಕೆ ಸೋರಿಕೆಯಾಗಿರುವುದು ನಿಜ ಮತ್ತು ಸೂಕ್ತ ಹಣ ನೀಡಿದರೆ ಅದನ್ನು ಖರೀದಿಸಬಹುದು ಎಂದು ಪೋಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ನಂಬಿಸುತ್ತಿವೆ. ನಂಬಿಕೆ ಹುಟ್ಟಿಸಲು ಬ್ಯಾಂಕ್ ವರ್ಗಾವಣೆ ಮತ್ತು ಯುಪಿಐ (UPI) ಪಾವತಿಗಳ ನಕಲಿ ಸ್ಕ್ರೀನ್‌ಶಾಟ್‌ಗಳನ್ನು ಈ ಗ್ರೂಪ್‌ಗಳಲ್ಲಿ ಪದೇ ಪದೆ ಹಂಚಿಕೊಳ್ಳಲಾಗುತ್ತಿದೆ ಎಂದು ಎನ್‌ಡಿಟಿವಿ (NDTV) ವರದಿ ಮಾಡಿದೆ.

ಈ ದಂಧೆಯ ನಡುವೆ ಗ್ರೂಪ್‌ಗಳ ನಡುವಿನ ಜಿದ್ದಾಜಿದ್ದಿ ಕೂಡ ತಾರಕಕ್ಕೇರಿದೆ. ಅಡ್ಮಿನ್‌ಗಳು ಇತರ ಸ್ಪರ್ಧಿಗಳನ್ನು ʼನಕಲಿ ಮಾರಾಟಗಾರರುʼ ಎಂದು ಕರೆಯುತ್ತಾ, ಬೇರೆ ಗ್ರೂಪ್‌ಗಳ ವಂಚನೆಯ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೇವಲ ತಮ್ಮ ಬಳಿ ಮಾತ್ರ ʼನಿಜವಾದ ಪತ್ರಿಕೆʼ ಇದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಭಾರತದ ಅತ್ಯಂತ ಕಠಿಣ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ 2026 ಸುತ್ತಲಿನ ಹಗರಣವು ಇತ್ತೀಚಿನ ವರ್ಷಗಳಲ್ಲೇ ಅತ್ಯಂತ ದೊಡ್ಡ ಪರೀಕ್ಷಾ ಹಗರಣವಾಗಿ ಮಾರ್ಪಟ್ಟಿದ್ದು, ಕೇಂದ್ರ ಸರ್ಕಾರವು ಇದರ ತನಿಖೆಯನ್ನು ಸಿಬಿಐಗೆ ವಹಿಸಿದೆ. ಸಿಬಿಐ ಈಗಾಗಲೇ ದೇಶಾದ್ಯಂತ ದಾಳಿ ನಡೆಸಿ ಕೋಚಿಂಗ್ ಆಪರೇಟರ್‌ಗಳು ಮತ್ತು ಮಧ್ಯವರ್ತಿಗಳನ್ನು ಬಂಧಿಸಿದೆ. ಎನ್‌ಟಿಎ ಜತೆ ಸಂಪರ್ಕ ಹೊಂದಿದ್ದ ಪುಣೆಯ ರಸಾಯನಶಾಸ್ತ್ರ ಉಪನ್ಯಾಸಕ ಪಿ.ವಿ. ಕುಲಕರ್ಣಿ ಈ ಹಗರಣದ ಪ್ರಮುಖ ಸೂತ್ರಧಾರಿ ಎಂದು ಸಿಬಿಐ ಹೇಳಿದೆ.

ತನಿಖಾ ಸಂಸ್ಥೆಗಳಿಗೆ ಸವಾಲಾದ ಎನ್‌ಕ್ರಿಪ್ಟೆಡ್ ಆ್ಯಪ್‌ಗಳು

ʼಎನ್‌ಟಿಎ ಅಫೀಶಿಯಲ್ ಚೆನ್ನೈʼನಂತಹ ಟೆಲಿಗ್ರಾಮ್ ಚಾನೆಲ್‌ಗಳು ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲು ಇಂತಹ ಜಾಲಗಳನ್ನು ಹೆಣೆದಿವೆ. ಎನ್‌ಟಿಎ ಈ ಎಲ್ಲಾ ಕ್ಲೈಮ್‌ಗಳು ನಕಲಿ ಎಂದು ಹೇಳಿದ್ದರೂ, ಇಂತಹ ನೆಟ್‌ವರ್ಕ್‌ಗಳು ವಿದ್ಯಾರ್ಥಿಗಳ ಆತಂಕವನ್ನು ಹೇಗೆ ದುರುಪಯೋಗಪಡಿಸಿಕೊಳ್ಳುತ್ತಿವೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಎನ್‌ಡಿಟಿವಿ ಜೊತೆ ಮಾತನಾಡಿ, "ಈ ಚಾನೆಲ್‌ಗಳು ವಿದ್ಯಾರ್ಥಿಗಳ ಭಯದ ಮೇಲೆ ಕೆಲಸ ಮಾಡುತ್ತವೆ. ಇವರು ವಿಪಿಎನ್ ಬಳಸುವುದರಿಂದ ಇವರನ್ನು ಟ್ರ್ಯಾಕ್ ಮಾಡುವುದು ಕಷ್ಟಕರವಾಗಿದೆ ಮತ್ತು ಇವರ ಗುರುತು ಪತ್ತೆಹಚ್ಚಲು ನಾವು ಟೆಲಿಗ್ರಾಮ್ ಸಂಸ್ಥೆಯನ್ನೇ ಅವಲಂಬಿಸಬೇಕಾಗಿದೆ" ಎಂದು ತಿಳಿಸಿದ್ದಾರೆ.

ಪರೀಕ್ಷೆಗೂ 10 ದಿನ ಮುನ್ನವೇ ಮಹಾರಾಷ್ಟ್ರದ 'ಎಂ ಸರ್' ಕೈ ಸೇರಿತ್ತೆ ನೀಟ್ ಪ್ರಶ್ನೆ ಪತ್ರಿಕೆ? ಸಿಬಿಐ ಶಂಕೆ

ಮತ್ತೊಂದೆಡೆ, ದೆಹಲಿಯ ಕೋಚಿಂಗ್ ಸೆಂಟರ್‌ಗಳಲ್ಲಿರುವ ನೀಟ್ ಅಭ್ಯರ್ಥಿಗಳು ಮರುಪರೀಕ್ಷೆಯ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. "ನಾವು ಮೊದಲ ಪರೀಕ್ಷೆಯನ್ನು ಚೆನ್ನಾಗಿ ಬರೆದಿದ್ದೆವು. ಆದರೆ ಈ ಬಾರಿ ಪರೀಕ್ಷೆ ಕಠಿಣವಾಗಬಹುದು. ನಮ್ಮ ಯಾವುದೇ ತಪ್ಪಿಲ್ಲದಿದ್ದರೂ ನಮಗೆ ಜಂಟಿ ಶಿಕ್ಷೆ ನೀಡಲಾಗುತ್ತಿದೆ" ಎಂದು ವಿದ್ಯಾರ್ಥಿಯೊಬ್ಬರು ಅಳಲು ತೋಡಿಕೊಂಡಿದ್ದಾರೆ. ಪ್ರತಿ ವರ್ಷವೂ ಪತ್ರಿಕೆ ಸೋರಿಕೆಯ ವದಂತಿಗಳು ಹರಡುವುದರಿಂದ, ಸಾಮಾಜಿಕ ಮಾಧ್ಯಮಗಳ ಮೇಲೆ ಎನ್‌ಟಿಎ ಮತ್ತು ಕೇಂದ್ರೀಯ ತನಿಖಾ ಸಂಸ್ಥೆಗಳು ಕಣ್ಗಾವಲು ಹೆಚ್ಚಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.