ನವದೆಹಲಿ: ಮೇ 3 ರಂದು ನಡೆದಿದ್ದ ನೀಟ್ ಯುಜಿ ಪರೀಕ್ಷೆಯನ್ನು (NEET UG Exam) ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(NTA) ರದ್ದುಗೊಳಿಸಿದೆ. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಎನ್‌ಟಿಎ ಪರೀಕ್ಷೆಯನ್ನು ರದ್ದುಗೊಳಿದ್ದು ಶೀಘ್ರವಾಗಿ ಹೊಸದಾಗಿ ನಡೆಸಲಿರುವ ಪರೀಕ್ಷೆಯ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ. ರಾಜಸ್ಥಾನದ ಸೀಕರ್ನಲ್ಲಿ ಕೈ ಬರಹದಲ್ಲಿದ್ದ 140 ಪ್ರಶ್ನೆಗಳಿದ್ದ ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿತ್ತು ಎನ್ನುವ ಗಂಭೀರ ಆರೋಪ ಕೇಳಿ ಬಂದಿತ್ತು. ಹೀಗಾಗಿ ಪರೀಕ್ಷೆಯನ್ನು ರದ್ದುಗೊಳಿಸಿ ಸಿಬಿಐ ತನಿಖೆಗೆ ಆದೇಶಿಸಲಾಗಿದೆ.
ಏನಿದು ಪ್ರಕರಣ?
ಮೇ 3, 2026 ರಂದು ಭಾನುವಾರ ದೇಶಾದ್ಯಂತ ನೀಟ್ ಪರೀಕ್ಷೆ ನಡೆದಿತ್ತು. ರಾಜಸ್ಥಾನದಲ್ಲಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ ಎಂಬ ವರದಿಗಳು ಹರಿದಾಡಿದ್ದವು. ಪ್ರಶ್ನೆ ಪತ್ರಿಕೆಯಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರಶ್ನೆಗಳು ಅಸಲಿ ಪ್ರಶ್ನೆ ಪತ್ರಿಕೆಗೆ ಹೋಲಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಮೇ 8 ರಂದು ಎನ್‌ಟಿಎ ಕೇಂದ್ರ ತನಿಖಾ ಸಂಸ್ಥೆಗಳಿಗೆ ಸ್ವತಂತ್ರ ಪರಿಶೀಲನೆ ನಡೆಸುವಂತೆ ಮನವಿ ಮಾಡಿತ್ತು. ತನಿಖಾ ಸಂಸ್ಥೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳು ನೀಡಿದ ವರದಿಯನ್ನಾಧರಿಸಿ, ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಪರೀಕ್ಷೆಯನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.
NEET-UG 2026 ಪರೀಕ್ಷೆಯ ಸಮಯದಲ್ಲಿ ಅಕ್ರಮಗಳು ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆಯ ದೂರುಗಳು ವರದಿಯಾಗಿವೆ. NTA ಮೇ 8 ರಂದು ತನಿಖೆಗಾಗಿ ಕೇಂದ್ರ ಸಂಸ್ಥೆಗಳಿಗೆ ವಿಷಯವನ್ನು ಉಲ್ಲೇಖಿಸಿದೆ. ತನಿಖಾ ಸಂಸ್ಥೆಗಳಿಂದ ಮಾಹಿತಿ ಪಡೆದ ನಂತರ, ಸರ್ಕಾರ ಮತ್ತು NTA ಪರೀಕ್ಷೆಯನ್ನು ಮುಂದುವರಿಸಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ. ಆದ್ದರಿಂದ, ಮೇ 3 ರಂದು ನಡೆದ ಸಂಪೂರ್ಣ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. NEET-UG ಅನ್ನು ಈಗ ಮರು ನಿಗದಿಪಡಿಸಲಾಗುವುದು. ಹೊಸ ಪರೀಕ್ಷಾ ದಿನಾಂಕ ಮತ್ತು ಹೊಸ ಪ್ರವೇಶ ಪತ್ರಗಳ ಬಗ್ಗೆ ಮಾಹಿತಿಯನ್ನು ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾಗುತ್ತದೆ ಎಂದು ಎನ್‌ಟಿಎ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಪರೀಕ್ಷೆಗೆ ಸಂಬಂಧಿಸಿದ ಆರೋಪಗಳ ಸಮಗ್ರ ತನಿಖೆಗಾಗಿ ಭಾರತ ಸರ್ಕಾರವು ಈ ವಿಷಯವನ್ನು ಕೇಂದ್ರ ತನಿಖಾ ದಳ (ಸಿಬಿಐ)ಕ್ಕೆ ಹಸ್ತಾಂತರಿಸಲು ನಿರ್ಧರಿಸಿದೆ. ತನಿಖಾ ಸಂಸ್ಥೆಗೆ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಮತ್ತು ಅಗತ್ಯವಿರುವ ಎಲ್ಲಾ ದಾಖಲೆಗಳು ಮತ್ತು ಸಹಾಯವನ್ನು ಒದಗಿಸುವುದಾಗಿ ಎನ್‌ಟಿಎ ತಿಳಿಸಿದೆ.