ಮುಂಬೈ, ಮೇ 18: ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದ (NEET-UG Paper Leak) ತನಿಖೆಯನ್ನು ತೀವ್ರಗೊಳಿಸಿರುವ ಸಿಬಿಐ, ಈಗ ಮಹಾರಾಷ್ಟ್ರದ ಲಾತೂರ್‌ನ ಪ್ರಮುಖ ಕೋಚಿಂಗ್ ಉದ್ಯಮಿಯೊಬ್ಬರ ಮೇಲೆ ಕಣ್ಣಿಟ್ಟಿದೆ. ಪರೀಕ್ಷೆಗೂ ಹತ್ತು ದಿನಗಳ ಮುಂಚಿತವಾಗಿಯೇ ಅವರ ಮೊಬೈಲ್ ಫೋನ್ ಮೂಲಕ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರಬಹುದು ಎಂದು ತನಿಖಾ ಸಂಸ್ಥೆ ಶಂಕಿಸಿದೆ ಎಂದು ನ್ಯೂಸ್18 ವರದಿ ಮಾಡಿದೆ. ಮಹಾರಾಷ್ಟ್ರದ ಅತಿ ದೊಡ್ಡ ಕೋಚಿಂಗ್ ನೆಟ್‌ವರ್ಕ್‌ಗಳಲ್ಲಿ ಒಂದಾದ ರೇಣುಕಾಯಿ ಕೆರಿಯರ್ ಸೆಂಟರ್ (RCC) ಸಂಸ್ಥಾಪಕ, ವಿದ್ಯಾರ್ಥಿ ವಲಯದಲ್ಲಿ ʼಎಂ. ಸರ್ʼ ಎಂದೇ ಖ್ಯಾತರಾಗಿರುವ ಶಿವರಾಜ್ ಮೊಟೇಗಾಂವ್ಕರ್ ಸದ್ಯ ಈ ತನಿಖೆಯ ಕೇಂದ್ರಬಿಂದುವಾಗಿದ್ದಾರೆ.
ಸಿಬಿಐ ಮೂಲಗಳ ಪ್ರಕಾರ, ಮೊಟೇಗಾಂವ್ಕರ್ ಪರೀಕ್ಷೆಗೆ ಸುಮಾರು 10 ದಿನಗಳ ಮೊದಲೇ ನೀಟ್ ಪ್ರಶ್ನೆ ಪತ್ರಿಕೆಯನ್ನು ಪಡೆದುಕೊಂಡಿದ್ದರು ಮತ್ತು ಅದನ್ನು ವಿವೇಕ್ ಪಾಟೀಲ್ ಎಂಬ ಆರೋಪಿ ಸೇರಿ ಹಲವರಿಗೆ ರವಾನಿಸಿದ್ದರು ಎಂದು ನಂಬಲಾಗಿದೆ. ಸದ್ಯ ಆರ್‌ಸಿಸಿ ಸಂಸ್ಥೆಗೆ ಸೇರಿದ ಸ್ಥಳಗಳ ಮೇಲೆ ದಾಳಿ ನಡೆಸಿರುವ ಸಿಬಿಐ ಮೊಬೈಲ್, ಲ್ಯಾಪ್‌ಟಾಪ್, ಐಪ್ಯಾಡ್ ಸೇರಿ ಹಲವು ಡಿಜಿಟಲ್ ಉಪಕರಣಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ವಿಶ್ಲೇಷಣೆಗೆ ಒಳಪಡಿಸಿದೆ.
ರಸಾಯನಶಾಸ್ತ್ರ ಶಿಕ್ಷಕನಿಂದ ಕೋಚಿಂಗ್ ಸಾಮ್ರಾಜ್ಯದವರೆಗೆ
ಮೊಟೇಗಾಂವ್ಕರ್ ಆರಂಭದಲ್ಲಿ ಕೆಮಿಸ್ಟ್ರಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ನಂತರ ಮಹಾರಾಷ್ಟ್ರದಾದ್ಯಂತ ಆರ್‌ಸಿಸಿ ಬ್ರ್ಯಾಂಡ್ ಅನ್ನು ಬೆಳೆಸಿದ್ದರು. ಇವರ ಸಂಸ್ಥೆಯಲ್ಲಿ ವಾರ್ಷಿಕ ಸುಮಾರು 40,000 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಆದರೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ತಂಡದ ಒಳಗಿನವರೊಂದಿಗೆ ಈ ಕೋಚಿಂಗ್ ದಂಧೆಯ ಲಿಂಕ್ ಇತ್ತೇ ಎಂಬ ಬಗ್ಗೆ ಸಿಬಿಐ ಈಗ ಲಾತೂರ್ ಮತ್ತು ಪುಣೆಯಲ್ಲಿ ಮೊಟೇಗಾಂವ್ಕರ್ ಅವರನ್ನು ಗಂಟೆಗಟ್ಟಲೆ ವಿಚಾರಣೆಗೆ ಒಳಪಡಿಸಿದೆ.
ನೀಟ್ ರದ್ದು; ಬೆಂಗಳೂರಿನ ವಿದ್ಯಾರ್ಥಿ ಸೇರಿ ನಾಲ್ವರು ಆತ್ಮಹತ್ಯೆ
ವಿಷಯ ತಜ್ಞರ ಬಂಧನ ಮತ್ತು 42 ಪ್ರಶ್ನೆಗಳು ಮ್ಯಾಚ್!
ಈ ಹಗರಣಕ್ಕೆ ಸಂಬಂಧಿಸಿದಂತೆ ಎನ್‌ಟಿಎಯ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ವಿಷಯ ತಜ್ಞರ ಸಮಿತಿಯಲ್ಲಿದ್ದ ಲಾತೂರ್‌ನ ನಿವೃತ್ತ ಕೆಮಿಸ್ಟ್ರಿ ಪ್ರಾಧ್ಯಾಪಕ ಪಿ.ವಿ. ಕುಲಕರ್ಣಿ ಮತ್ತು ಪುಣೆಯ ಬಯಾಲಜಿ ಉಪನ್ಯಾಸಕಿ ಮನೀಷಾ ಗುರುನಾಥ್ ಮಾಂಧರೆ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಆರ್‌ಸಿಸಿ ಸಂಸ್ಥೆ ನಡೆಸಿದ ಅಣಕು ಪರೀಕ್ಷೆಯಲ್ಲಿದ್ದ 42 ಪ್ರಶ್ನೆಗಳು, ನಿಜವಾದ ನೀಟ್ ಪರೀಕ್ಷೆಯ ಪ್ರಶ್ನೆಗಳಿಗೆ ಹೋಲಿಕೆಯಾಗಿದ್ದವು ಎಂದು ಪೋಷಕರೊಬ್ಬರು ದೂರು ನೀಡಿದ್ದಾರೆ. ಅಷ್ಟೇ ಅಲ್ಲದೆ, ಪರೀಕ್ಷೆಯ ನಂತರ ಮೊಟೇಗಾಂವ್ಕರ್ ವಿದ್ಯಾರ್ಥಿಗಳೊಂದಿಗೆ ಮಾತನಾಡುತ್ತಾ ಎಷ್ಟು ಪ್ರಶ್ನೆಗಳು ಮ್ಯಾಚ್ ಆಗಿದ್ದವು ಎಂದು ಕೇಳುತ್ತಿರುವ ವಿಡಿಯೊ ಕೂಡ ಸಿಬಿಐ ಕೈ ಸೇರಿದೆ.
20ರಿಂದ 30 ಲಕ್ಷ ರೂಪಾಯಿಗೆ ಮಾರಾಟ
ಪ್ರಾಥಮಿಕ ತನಿಖೆಯ ಪ್ರಕಾರ, ಈ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ತಲಾ 20ರಿಂದ 30 ಲಕ್ಷ ರುಪಾಯಿ ಭಾರಿ ಮೊತ್ತಕ್ಕೆ ಮಾರಾಟ ಮಾಡಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ತನಿಖೆಯು ಲಾತೂರ್ ದಾಟಿ ಪಕ್ಕದ ನಾಂದೇಡ್‌ಗೂ ವಿಸ್ತರಿಸಿದ್ದು, ಮಧ್ಯವರ್ತಿಗಳ ಮೂಲಕ ಪತ್ರಿಕೆ ಖರೀದಿಸಿದ ಶಂಕೆಯ ಮೇರೆಗೆ ಉದ್ಯಮಿಯೊಬ್ಬರ ಮನೆಯಲ್ಲೂ ಶೋಧ ಕಾರ್ಯ ನಡೆಸಲಾಗಿದೆ