ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಕಿ ಅವಘಡದಲ್ಲಿ 21 ಜನರು ಮೃತಪಟ್ಟ ದೆಹಲಿ ಹೊಟೇಲ್‌ ದುರ್ಘಟನೆಗೆ ನಿರ್ಲಕ್ಷ್ಯ ಕಾರಣ: 6 ಕೊಠಡಿಗೆ ಅನುಮತಿ ಪಡೆದು 25 ರೂಂಗಳ ಕಾರ್ಯನಿರ್ವಹಣೆ

Delhi Hotel Tragedy: ಬೆಂಕಿ ಅವಘಡ ಸಂಭವಿಸಿರುವ ಹೊಟೇಲ್‌ಗೆ ದೆಹಲಿ ಸರ್ಕಾರವು ಬೆಡ್ ಆ್ಯಂಡ್‌ ಬ್ರೇಕ್‌ಫಾಸ್ಟ್ (ಬಿ & ಬಿ) ಯೋಜನೆಯಡಿ ಪರವಾನಗಿ ನೀಡಿದೆ. ಈ ಅನುಮತಿಯಡಿ ಒಂದು ಸಂಕೀರ್ಣವು ಕೇವಲ ಆರು ಕೊಠಡಿಗಳನ್ನು ನಿರ್ವಹಿಬಹುದಷ್ಟೆ. ಆದರೆ ಈ ನಿಯಮವನ್ನು ಉಲ್ಲಂಘಿಸಿರುವುದು ಗೊತ್ತಾಗಿದೆ.

ದೆಹಲಿ ಹೊಟೇಲ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡ

ನವದೆಹಲಿ, ಜೂ. 3: ಪ್ರತಿ ಬಾರಿ ಅಗ್ನಿ ದುರಂತ (Fire Tragedy) ಸಂಭವಿಸಿದಾಗಲೂ ನಿರ್ಲಕ್ಷ್ಯ, ದುರಾಸೆಗಾಗಿ ನಿಯಮಗಳನ್ನು ಉಲ್ಲಂಘಿಸುವುದು ಮತ್ತು ಅಧಿಕೃತ ಮೇಲ್ವಿಚಾರಣೆಯ ಕೊರತೆಯಿರುವುದು ಕಂಡು ಬರುತ್ತಿದೆ. ಇದಕ್ಕೆ ಬೆಲೆ ತೆರುವವರು ಮಾತ್ರ ತಮ್ಮ ಜೀವ ಕಳೆದುಕೊಂಡ ಮುಗ್ಧ ಜನರು. ಬುಧವಾರ (ಜೂನ್‌ 3) ಬೆಳಗ್ಗೆ ದಕ್ಷಿಣ ದೆಹಲಿಯ (Delhi) ಫ್ಲೋರಿಶ್ ಸ್ಟೇ ಬಿ & ಬಿ ರೆಸ್ಟೋರೆಂಟ್‌ನಲ್ಲಿ ಭಾರಿ ಬೆಂಕಿ ಅವಘಡದಲ್ಲಿ ಕನಿಷ್ಠ 21 ಜನರು ಮೃತಪಟ್ಟಿದ್ದಾರೆ.

ಹೌಜ್ ರಾಣಿ ಪ್ರದೇಶದಲ್ಲಿರುವ ಹೊಟೇಲ್‌ ದೆಹಲಿ ಸರ್ಕಾರವು ಬೆಡ್ ಆ್ಯಂಡ್‌ ಬ್ರೇಕ್‌ಫಾಸ್ಟ್ (ಬಿ & ಬಿ) ಯೋಜನೆಯಡಿ ಪರವಾನಗಿ ನೀಡಿದೆ. ಈ ಅನುಮತಿಯಡಿ ಒಂದು ಸಂಕೀರ್ಣವು ಕೇವಲ ಆರು ಕೊಠಡಿಗಳನ್ನು ನಿರ್ವಹಿಸಲು ಮಾತ್ರ ಅನುಮತಿಸಲಾಗಿದೆ. ಆದರೆ ಫ್ಲೋರಿಶ್ ಸ್ಟೇ ಕೆಲವು ನೆಲಮಾಳಿಗೆಯಲ್ಲಿಯೂ ಸೇರಿದಂತೆ 25 ಕೊಠಡಿಗಳನ್ನು ನಿರ್ವಹಿಸುತ್ತಿತ್ತು.

ಬೆಂಕಿ ಹೊತ್ತಿಕೊಂಡಾಗ ನಿಯಮಗಳ ಉಲ್ಲಂಘನೆಯೇ ಹೊಟೇಲ್‌ನಲ್ಲಿ ಅಗ್ನಿ ಅವಘಡ ಸಂಭವಿಸಲು ಕಾರಣ ಎನ್ನಲಾಗಿದೆ. ಬೆಂಕಿ ಹೊಟೇಲ್‌ ಆವರಿಸಿದಾಗ ಕನಿಷ್ಠ 40 ಅತಿಥಿಗಳು ತಂಗಿದ್ದರು, ಅವರಲ್ಲಿ ಹೆಚ್ಚಿನವರು ನಿದ್ರಿಸುತ್ತಿದ್ದರು ಎಂದು ವರದಿಯಾಗಿದೆ.

ವಿಡಿಯೊ ಇಲ್ಲಿದೆ:



ದೆಹಲಿಯ ಅತಿದೊಡ್ಡ ಖಾಸಗಿ ಆಸ್ಪತ್ರೆಗಳಲ್ಲಿ ಒಂದಕ್ಕೆ ಸಮೀಪದಲ್ಲಿರುವ ಹೌಜ್ ರಾಣಿ ಪ್ರದೇಶದ ಕಿರಿದಾದ ಬೈಲೇನ್‌ಗಳಲ್ಲಿ ನೆಲೆಗೊಂಡಿರುವ ಈ ಹೊಟೇಲ್‌ಗೆ ವೈದ್ಯಕೀಯ ಚಿಕಿತ್ಸೆಗಾಗಿ ದೆಹಲಿಗೆ ಭೇಟಿ ನೀಡುವ ವಿದೇಶಿ ಅತಿಥಿಗಳು ಆಗಮಿಸುತ್ತಾರೆ. ಅಗ್ನಿ ದುರಂತದಲ್ಲಿ ಮೃತಪಟ್ಟ 21 ಜನರಲ್ಲಿ ಬಹುತೇಕರು ವಿದೇಶಿಯರು. ದೆಹಲಿ ಪೊಲೀಸರ ಪ್ರಕಾರ, ಹೊಟೇಲ್‌ಗೆ ಕೇವಲ ಒಂದು ಪ್ರವೇಶ ಮತ್ತು ನಿರ್ಗಮನ ದ್ವಾರವಿತ್ತು. ಇದು 25 ಕೊಠಡಿ ಹೊಂದಿದೆ.

ದೆಹಲಿಯ ರೆಸ್ಟೋರೆಂಟ್‌ನಲ್ಲಿ ಭಾರಿ ಬೆಂಕಿ ಅವಘಡ: 20 ಮಂದಿ ಸಾವು

ಹೊಟೇಲ್‌ಗೆ ಅಗ್ನಿ ಸುರಕ್ಷತಾ ಅನುಮೋದನೆ ಇತ್ತೇ ಎನ್ನುವುದನ್ನು ಪರಿಶೀಲಿಸಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಗ್ನಿಶಾಮಕ ಇಲಾಖೆಯ ಪ್ರಾಥಮಿಕ ತನಿಖೆಯ ಪ್ರಕಾರ, ಹೊಟೇಲ್‌ ಬಳಿ ಮಾನ್ಯವಾದ ಅಗ್ನಿ ಸುರಕ್ಷತಾ ಎನ್‌ಒಸಿ ಇರಲಿಲ್ಲ ಎಂದು ತಿಳಿದುಬಂದಿದೆ.

ಬೆಂಕಿಯಿಂದ ತಪ್ಪಿಸಿಕೊಳ್ಳಲು ಮಹಿಳೆಯರು ಮೇಲಿನ ಮಹಡಿಯಿಂದ ಹಾರಿದ್ದಾರೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಹತಾಶರಾದ ಇಬ್ಬರು ಮಹಿಳೆಯರು ತಮ್ಮ ಜೀವಗಳನ್ನು ಉಳಿಸಿಕೊಳ್ಳಲು ಹೊಟೇಲ್‌ ಮುಂಭಾಗದ ರಸ್ತೆಗೆ ಕಟ್ಟಡದಿಂದ ಜಿಗಿಯುತ್ತಿರುವುದು ಕಂಡುಬಂದಿದೆ. ಸ್ಥಳೀಯರು ಅವರ ಸಹಾಯಕ್ಕೆ ಧಾವಿಸಿದ್ದಾರೆ. ಹಾಸಿಗೆ ಹಿಡಿದು ನಿಂತ ಸ್ಥಳೀಯರು ಕಟ್ಟಡದಿಂದ ಹಾರುತ್ತಿದ್ದವರ ರಕ್ಷಣೆಗೆ ಮುಂದಾದರು.

ದೆಹಲಿ ಅಗ್ನಿಶಾಮಕ ದಳಕ್ಕೆ ಬೆಳಗ್ಗೆ ತುರ್ತು ಕರೆ ಬಂದ ತಕ್ಷಣವೇ ಎರಡು ವಾಟರ್ ಟೆಂಡರ್‌ಗಳು, ಎರಡು ವಾಟರ್ ಬೌಸರ್‌ಗಳು, ತ್ವರಿತ ಪ್ರತಿಕ್ರಿಯ ವಾಹನ ಸೇರಿ ಇತರ ತುರ್ತು ಉಪಕರಣಗಳೊಂದಿಗೆ ಹಲವು ಅಗ್ನಿಶಾಮಕ ಘಟಕಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.