ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ನೇಪಾಳ ಪ್ರವಾಹದಲ್ಲಿ 288 ಭಾರತೀಯರು ನಾಪತ್ತೆ, 21 ಜನರ ರಕ್ಷಣೆ: ಮಾಹಿತಿ ಹಂಚಿಕೊಂಡ ಕೇಂದ್ರ ಸರ್ಕಾರ

Nepal Floods: ನೇಪಾಳ ಪ್ರವಾಹಕ್ಕೆ ಸಿಲುಕಿ ನಾಪತ್ತೆಯಾದ ಭಾರತೀಯರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವವರನ್ನು ಪತ್ತೆಹಚ್ಚಲು ಕೇಂದ್ರ ಸರ್ಕಾರ ನೇಪಾಳದ ಅಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. 288 ಭಾರತೀಯ ಪ್ರಜೆಗಳು ಸಂಪರ್ಕಕ್ಕೆ ಲಭ್ಯವಿಲ್ಲ ಎಂದು ಅವರು ವಿವರಿಸಿದ್ದಾರೆ.

ನೇಪಾಳದಲ್ಲಿ ಭಾರಿ ಪ್ರವಾಹ

ನವದೆಹಲಿ, ಆ. 27: ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಪ್ರವಾಹದ (Nepal Floods) ನಂತರ ಕೈಲಾಸ ಮಾನಸ ಸರೋವರ ಯಾತ್ರೆಗೆ (Kailash Mansarovar) ತೆರಳಿದ್ದ ತೀರ್ಥಯಾತ್ರಿಕರು ಮತ್ತು ತ್ರಿಶೂಲಿ 1 ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಸೇರಿ ಹಲವು ಭಾರತೀಯರು ನಾಪತ್ತೆಯಾಗಿದ್ದು, ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ದುರಂತದ ನಂತರ ನೇಪಾಳದಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಮುಂದುವರೆದಿದ್ದು, ವಿದೇಶಾಂಗ ಸಚಿವಾಲಯ (ಎಂಇಎ), 288 ಭಾರತೀಯ ಪ್ರಜೆಗಳು ಸಂಪರ್ಕಕ್ಕೆ ಲಭ್ಯವಿಲ್ಲ ಎಂದು ತಿಳಿಸಿದೆ. ಇದುವರೆಗೆ 21 ಭಾರತೀಯರನ್ನು ರಕ್ಷಿಸಲಾಗಿದೆ.

ನಾಪತ್ತೆಯಾದ ಭಾರತೀಯರೊಂದಿಗೆ ಸಂಪರ್ಕ ಸಾಧಿಸಲು ಮತ್ತು ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವವರನ್ನು ಪತ್ತೆಹಚ್ಚಲು ಸರ್ಕಾರ ನೇಪಾಳದ ಅಧಿಕಾರಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ. 288 ಭಾರತೀಯ ಪ್ರಜೆಗಳಲ್ಲಿ ಕೈಲಾಸ ಮಾನಸ ಸರೋವರ ಯಾತ್ರೆಗೆ ಪ್ರಯಾಣಿಸುವ ಹಲವು ಗುಂಪುಗಳು, ತ್ರಿಶೂಲಿ 1 ವಿದ್ಯುತ್ ಯೋಜನೆಯ ಕಾರ್ಮಿಕರು ಮತ್ತು ಭಾರತದ ವಿವಿಧ ರಾಜ್ಯಗಳ ಪ್ರವಾಸಿಗರು ಸೇರಿದ್ದಾರೆ.

ನೇಪಾಳ ಜಲಪ್ರಳಯದಲ್ಲಿ 80 ಈಶಾ ಯಾತ್ರಿಕರು ನಾಪತ್ತೆ: ಭಾವುಕರಾಗಿ ಕಣ್ಣೀರಿಟ್ಟ ಸದ್ಗುರು

ತ್ರಿಶೂಲಿ 1 ವಿದ್ಯುತ್ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ 73 ಭಾರತೀಯ ಪ್ರಜೆಗಳು ಪ್ರಸ್ತುತ ಸಂಪರ್ಕಕ್ಕೆ ಸಿಗದವರ ಪಟ್ಟಿಯಲ್ಲಿ ಸೇರಿದ್ದಾರೆ ಎಂದು ಜೈಸ್ವಾಲ್ ಹೇಳಿದ್ದಾರೆ. ಕಾರ್ಮಿಕರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಯೋಜನಾ ಮುಖ್ಯಸ್ಥರೊಂದಿಗೆ ಸಂಪರ್ಕದಲ್ಲಿದ್ದೇವೆ. ಆ ಪ್ರದೇಶದಲ್ಲಿನ ಸಂವಹನ ಮಾರ್ಗಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿವೆ. ಹೀಗಾಗಿ ಜನರೊಂದಿಗೆ ಸಂಪರ್ಕ ಸಾಧಿಸುವುದು ಕಷ್ಟವಾಗಿದೆ ಎಂದು ಜೈಸ್ವಾಲ್ ವಿವರಿಸಿದ್ದಾರೆ.

ಇನ್ನು ತಮಿಳುನಾಡಿನ ಎರಡು ಗುಂಪುಗಳಲ್ಲಿ 37 ಮತ್ತು 49 ಭಾರತೀಯ ಪ್ರಜೆಗಳಿದ್ದಾರೆ. ಇವರೆಲ್ಲರೂ ಇದುವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ. ಎರಡೂ ಗುಂಪುಗಳು ಕೈಲಾಸ ಮಾನಸ ಸರೋವರ ಯಾತ್ರೆಗೆ ಪ್ರತ್ಯೇಕ ಟ್ರಾವೆಲ್ ಏಜೆಂಟ್‌ಗಳಾದ ಸಾಮ್ರಾಟ್ ಟ್ರಾವೆಲ್ಸ್ ಮತ್ತು ಫ್ಲೈ ಎವರೆಸ್ಟ್ ಟ್ರಾವೆಲ್ಸ್ ಮೂಲಕ ಪ್ರಯಾಣಿಸಿದ್ದವು.

ಸಾಮ್ರಾಟ್ ಟ್ರಾವೆಲ್ಸ್ ಸಹಾಯದಿಂದ ಪ್ರಯಾಣಿಸಿದ ಪಶ್ಚಿಮ ಬಂಗಾಳದ 32 ಭಾರತೀಯರ ಮತ್ತೊಂದು ಗುಂಪು, ದುರಂತ ಸಂಭವಿಸಿದ ಪ್ರದೇಶವಾದ ರಸುವಾ ಜಿಲ್ಲೆಯ ತಿಮುರೆಯಲ್ಲಿತ್ತು ಎಂದು ವರದಿಯಾಗಿದೆ. ರಿಚಾ ಟೂರ್ಸ್ ಮೂಲಕ ಪ್ರಯಾಣಿಸಿದ ವಿವಿಧ ರಾಜ್ಯಗಳ 61 ಭಾರತೀಯ ಪ್ರಜೆಗಳು ಸಹ ಪ್ರಸ್ತುತ ಸಂಪರ್ಕಕ್ಕೆ ಲಭ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದಲ್ಲದೆ ಕೇರಳಂನ 33 ಪ್ರಜೆಗಳು ಇನ್ನೂ ಎಲ್ಲಿದ್ದಾರೆ ಎಂಬುದು ದೃಢಪಟ್ಟಿಲ್ಲ. ಸಂಪರ್ಕಿಸಲು ಸಾಧ್ಯವಿಲ್ಲದ ವ್ಯಕ್ತಿಗಳು ಎಂದು ಪಟ್ಟಿ ಮಾಡಲಾಗಿರುವುದರಿಂದ ಆ ವ್ಯಕ್ತಿಗಳು ಕಾಣೆಯಾಗಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂದು ಅರ್ಥವಲ್ಲ ಎಂದು ಎಂಇಎ ಒತ್ತಿ ಹೇಳಿದೆ. ಅಧಿಕಾರಿಗಳು ಅವರೊಂದಿಗೆ ಸಂವಹನ ನಡೆಸಲು ಸಾಧ್ಯವಾಗದ ಕಾರಣ ಈ ಪದವನ್ನು ಬಳಸಲಾಗುತ್ತಿದೆ.

ನೇಪಾಳ ಪ್ರವಾಹದ ಬಳಿಕ ಚೀನಾದ ಮೆಗಾ ಡ್ಯಾಂ ಆತಂಕ: ಭಾರತದ ಮಗ್ಗುಲಲ್ಲೇ ಇದೆ ಡ್ರ್ಯಾಗನ್‌ ದೇಶದ ʼವಾಟರ್‌ ಬಾಂಬ್‌ʼ

ನಿರಂತರ ಶೋಧ ಮತ್ತು ಪರಿಹಾರ ಕಾರ್ಯಗಳ ಮಧ್ಯೆ, ಸರ್ಕಾರವು ತಮಿಳುನಾಡಿನ 21 ಭಾರತೀಯ ಪ್ರಜೆಗಳೊಂದಿಗೆ ಸಂಪರ್ಕ ಸಾಧಿಸಿ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ರಕ್ಷಿಸಲ್ಪಟ್ಟ 21 ಭಾರತೀಯರು ಕಠ್ಮಂಡುವಿಗೆ ಪ್ರಯಾಣಿಸುವ ನಿರೀಕ್ಷೆಯಿದ್ದು, ನಂತರ ಅವರಿಗೆ ಭಾರತಕ್ಕೆ ಮರಳಲು ವ್ಯವಸ್ಥೆ ಮಾಡಲಾಗುವುದು ಎಂದು ಜೈಸ್ವಾಲ್ ಹೇಳಿದ್ದಾರೆ. ನೇಪಾಳದ ಅಧಿಕಾರಿಗಳ ಮೂಲಕ ನಾಗರಿಕರನ್ನು ತಲುಪಲು ಭಾರತ ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಜೈಸ್ವಾಲ್ ತಿಳಿಸಿದ್ದಾರೆ.