ಕಠ್ಮಂಡು: ನೇಪಾಳದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಮಂಗಳವಾರ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ನೆರೆಯ ರಾಷ್ಟ್ರದ "ಸ್ಥಿರತೆ, ಶಾಂತಿ ಮತ್ತು ಸಮೃದ್ಧಿ" ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಒತ್ತಿ ಹೇಳಿದ ಪ್ರಧಾನಿ ಮೋದಿ, ಅಶಾಂತಿಯ ಹಿನ್ನೆಲೆಯಲ್ಲಿ ನೇಪಾಳದ ನಾಗರಿಕರು ಶಾಂತತೆಯನ್ನು ಬೆಂಬಲಿಸುವಂತೆ ಒತ್ತಾಯಿಸಿದರು. ನೇಪಾಳದಲ್ಲಿನ ಹಿಂಸಾಚಾರ ಹೃದಯ ವಿದ್ರಾವಕವಾಗಿದೆ. ಅನೇಕ ಯುವಕರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ನನಗೆ ದುಃಖವಾಗಿದೆ. ನೇಪಾಳದ ಸ್ಥಿರತೆ, ಶಾಂತಿ ಮತ್ತು ಸಮೃದ್ಧಿ ನಮಗೆ ಅತ್ಯಂತ ಮುಖ್ಯವಾಗಿದೆ. ನೇಪಾಳದಲ್ಲಿರುವ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ಶಾಂತಿಯನ್ನು ಬೆಂಬಲಿಸುವಂತೆ ನಾನು ವಿನಮ್ರವಾಗಿ ಮನವಿ ಮಾಡುತ್ತೇನೆ" ಎಂದು ಪ್ರಧಾನಿ ಮೋದಿ X ನಲ್ಲಿ ಬರೆದಿದ್ದಾರೆ.
ಇಂದು ಪ್ರವಾಹ ಪೀಡಿತ ಪಂಜಾಬ್ ಮತ್ತು ಹಿಮಾಚಲ ಪ್ರದೇಶಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಭದ್ರತಾ ಕುರಿತ ಸಂಪುಟ ಸಮಿತಿಯ ಸಭೆಯಲ್ಲಿ ನೇಪಾಳದಲ್ಲಿನ ಬೆಳವಣಿಗೆಗಳ ಕುರಿತು ಚರ್ಚಿಸಲಾಗಿದೆ ಎಂದು ಹೇಳಿದರು. ಸಂಸತ್ತಿಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರ ಮೇಲೆ ಭದ್ರತಾ ಪಡೆಗಳು ರಬ್ಬರ್ ಗುಂಡುಗಳು ಮತ್ತು ಅಶ್ರುವಾಯು ಹಾರಿಸಿದಾಗ 20 ಜನರು ಸಾವನ್ನಪ್ಪಿದ್ದಾರೆ.
ನೇಪಾಳದಲ್ಲಿನ ಪ್ರಕ್ಷುಬ್ಧತೆಯಿಂದಾಗಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಮಂಗಳವಾರ ರಾಜೀನಾಮೆ ನೀಡಬೇಕಾಯಿತು. ಕಳೆದ ವಾರ ಸಾಮಾಜಿಕ ಮಾಧ್ಯಮಗಳ ಮೇಲೆ ವ್ಯಾಪಕ ನಿಷೇಧ ಹೇರಿದ್ದ ಸರ್ಕಾರ, ಹಿಂಸಾಚಾರದ ನಂತರ ನಿರ್ಬಂಧಗಳನ್ನು ತೆಗೆದುಹಾಕಿತು, ಆದರೆ ಅನಿರ್ದಿಷ್ಟ ಕರ್ಫ್ಯೂ ಹೊರತಾಗಿಯೂ ಪ್ರತಿಭಟನೆಗಳು ಮುಂದುವರೆದವು. 73 ವರ್ಷದ ಓಲಿ ಅವರು ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರಿಗೆ ರಾಜೀನಾಮೆ ಸಲ್ಲಿಸಿದ್ದು, "ಸಮಸ್ಯೆಗೆ ಪರಿಹಾರವನ್ನು ಸುಗಮಗೊಳಿಸಲು ಮತ್ತು ಸಂವಿಧಾನಕ್ಕೆ ಅನುಗುಣವಾಗಿ ರಾಜಕೀಯವಾಗಿ ಪರಿಹರಿಸಲು ಸಹಾಯ ಮಾಡಲು" ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Nepal Gen Z Protest: ನೇಪಾಳದಲ್ಲಿ ಹಿಂಸಾಚಾರ; 39 ಕನ್ನಡಿಗರ ರಕ್ಷಣೆಗೆ ಸಿಎಂ ಸಿದ್ದರಾಮಯ್ಯ ಸೂಚನೆ
ಪ್ರತಿಭಟನಾಕಾರರು ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮತ್ತು ರಾಷ್ಟ್ರಾಧ್ಯಕ್ಷ ರಾಮಚಂದ್ರ ಪೌಡೆಲ್ ಅವರ ಖಾಸಗಿ ಮನೆಗೆ ಬೆಂಕಿ ಹಚ್ಚಿದ್ದಾರೆ. ಅಲ್ಲದೆ ನೇಪಾಳದ ಮಾಜಿ ಪ್ರಧಾನಿಗಳಾದ ಪುಷ್ಪ ಕಮಲ್ ದಾಹಲ್ ಮತ್ತು ಶೇರ್ ಬಹಾದ್ದೂರ್ ದೌಬ, ಸಚಿವ ದೀಪಕ್ ಖದ್ಕ ಅವರ ನಿವಾಸವನ್ನೂ ಪ್ರತಿಭಟನಾಕಾರರು ಹಾನಿಗೊಳಿಸಿದ್ದಾರೆ. ಜತೆಗೆ ನೇಪಾಳ ಸಂಸತ್ತಿನ ಕಟ್ಟಡಕ್ಕೂ ಬೆಂಕಿ ಹಚ್ಚಿದ್ದಾರೆ .ನೇಪಾಳದಲ್ಲಿ ವ್ಯಾಪಕವಾಗಿ ಬಳಸಲಾಗುವ ಸುಮಾರು 26ಕ್ಕೂ ಅಧಿಕ ಸೋಶಿಯಲ್ ಮೀಡಿಯಾಗಳ ಕಂಪನಿಗಳಿಗೆ ಅಧಿಕೃತವಾಗಿ ತಮ್ಮ ಕಂಪನಿಗಳನ್ನು ನೋಂದಾಯಿಸಲು ಪದೇ ಪದೆ ನೋಟಿಸ್ ನೀಡಲಾಗುತ್ತಿದ್ದರೂ ನೋಂದಾಯಿಸಲು ವಿಫಲವಾದ ಕಂಪನಿಗಳನ್ನು ಕಳೆದ ವಾರದಿಂದ ನಿರ್ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನೋಂದಾಯಿಸಲು ಆಗಸ್ಟ್ 28ರಿಂದ ಏಳು ದಿನಗಳ ಕಾಲಾವಕಾಶ ನೀಡಲಾಗಿತ್ತು.