Delhi Blast: ದೆಹಲಿ ಬಾಂಬ್ ಸ್ಫೋಟದ ರೂವಾರಿ ಡಾ. ಉಮರ್‌ನ ಮತ್ತೊಂದು ವಿಡಿಯೊ ಬೆಳಕಿಗೆ; ಮೊಬೈಲ್ ಅಂಗಡಿಗೆ ಹೋಗಿದ್ದೇಕೆ?
Dr. Umar Mohammad: ದೆಹಲಿ ಕೆಂಪು ಕೋಟೆ ಬಳಿ ನವೆಂಬರ್ 10ರಂದು ನಡೆದ ಕಾರ್ ಸ್ಫೋಟದಲ್ಲಿ 12 ಮಂದಿ ಬಲಿಯಾಗಿರುವ ಆಘಾತಕಾರಿ ಘಟನೆಯಿಂದ ಇನ್ನೂ ದೇಶ ಚೇತರಿಸಿಕೊಂಡಿಲ್ಲ. ಇದೀಗ ಉಗ್ರರ ಈ ಕೃತ್ಯದ ಒಂದೊಂದೇ ರಹಸ್ಯ ಬಯಲಾಗುತ್ತಿದೆ. ದಾಳಿಯ ರೂವಾರಿ ಜಮ್ಮು ಮತ್ತು ಕಾಶ್ಮೀರ ಮೂಲದ ವೈದ್ಯ ಡಾ. ಉಮರ್ ಮೊಹಮ್ಮದ್ ಮುಖವನ್ನು ಸ್ಪಷ್ಟವಾಗಿ ತೋರಿಸುವ ಸಿಸಿಟಿವಿ ದೃಶ್ಯಾವಳಿ ಹೊರ ಬಿದ್ದಿದೆ.
ದೆಗಲಿ ಬಾಂಬ್ ಸ್ಫೋಟದ ರೂವಾರಿ ಡಾ. ಉಮರ್. ಎರಡನೇ ಚಿತ್ರದಲ್ಲಿ ಬಾಂಬ್ ದಾಳಿ ನಡೆದ ಸ್ಥಳ. -
ದೆಹಲಿ, ನ. 15: ದೆಹಲಿ ಕೆಂಪು ಕೋಟೆ ಬಳಿ ನವೆಂಬರ್ 10ರಂದು ನಡೆದ ಕಾರ್ ಸ್ಫೋಟದಲ್ಲಿ (Delhi Blast) 12 ಮಂದಿ ಬಲಿಯಾಗಿರುವ ಆಘಾತಕಾರಿ ಘಟನೆಯಿಂದ ಇನ್ನೂ ದೇಶ ಚೇತರಿಸಿಕೊಂಡಿಲ್ಲ. ಇದೀಗ ಉಗ್ರರ ಈ ಕೃತ್ಯದ ಒಂದೊಂದೇ ರಹಸ್ಯ ಬಯಲಾಗುತ್ತಿದೆ. ಜಮ್ಮು ಮತ್ತು ಕಾಶ್ಮೀರ ಮೂಲದ ವೈದ್ಯ ಡಾ. ಉಮರ್ ಮೊಹಮ್ಮದ್ (Dr. Umar Mohammad) ಹ್ಯುಂಡೈ ಐ20 ಕಾರನ್ನು ಚಲಾಯಿಸಿಕೊಂಡು ಬಂದು ಕೆಂಪು ಕೋಟೆಯ ಮೆಟ್ರೋ ಸ್ಟೇಷನ್ ಬಳಿ ಸ್ಫೋಟಿಸಿದ್ದು, ಇದೀಗ ಪುರಾವೆ ಮೂಲಕ ದೃಢಪಟ್ಟಿದೆ. ಇದೀಗ ಡಾ. ಉಮರ್ ಮುಖವನ್ನು ಸ್ಪಷ್ಟವಾಗಿ ತೋರಿಸುವ ಸಿಸಿಟಿವಿ ದೃಶ್ಯಾವಳಿ ಹೊರ ಬಿದ್ದಿದೆ. ಅಕ್ಟೋಬರ್ 30ರಂದು ಹರಿಯಾಣದ ಫರಿದಾಬಾದ್‌ನ ಮೊಬೈಲ್ ಅಂಗಡಿಯಲ್ಲಿ ಉಮರ್ 2 ಮೊಬೈಲ್ ಹಿಡಿದುಕೊಂಡು ನಿಂತಿರುವ ದೃಶ್ಯ ಇದಾಗಿದೆ. ಈ ವೇಳೆ ಆತ ಉದ್ವಿಗ್ನನಾಗಿರುವುದು, ಚಿಂತೆಯಲ್ಲಿರುವುದು ಕಂಡು ಬಂದಿದೆ.
ವಿಡಿಯೊದಲ್ಲಿ ಡಾ. ಉಮರ್ ತನ್ನ ಬ್ಯಾಗ್‌ನಿಂದ ಫೋನ್ ತೆಗೆದು ಅಂಗಡಿಯವರಿಗೆ ಚಾರ್ಜ್ ಮಾಡಲು ನೀಡುತ್ತಿರುವುದನ್ನು ಸೆರೆಯಾಗಿದೆ. ಜತೆಗೆ ಇನ್ನೊಂದು ಮೊಬೈಲ್ ಕೂಡ ಆತನ ಬಳಿ ಇತ್ತು. ಆದಾಗ್ಯೂ ಆತನ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಯಾವುದೇ ಮೊಬೈಲ್ ಫೋನ್ ತುಣುಕು ಕಂಡು ಬಂದಿಲ್ಲ. ಆತನ ಮೊಬೈಲ್ ಎಲ್ಲಿದೆ ಎನ್ನುವ ಬಗ್ಗೆ ಅನುಮಾನ ಮೂಡಿದೆ. ಮೊಬೈಲ್ ಸಿಕ್ಕರೆ ಅದರಿಂದ ಮಹತ್ವದ ವಿವರ ಹೊರ ಬೀಳುವ ಸಾಧ್ಯತೆ ಇದೆ. ಮಧ್ಯಾಹ್ನ ಕಾರನ್ನು ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಆತ ಅದರಲ್ಲೇ ಸಂಜೆಯವರೆಗೆ ಇದ್ದು, 6 ಗಂಟೆಯ ಬಳಿಕ ಅದನ್ನು ಚಾಲಾಯಿಸಿಕೊಂಡು ಹೋಗಿದ್ದ. ಈ ವೇಳೆ ಸಿಗ್ನಲ್ ಬಳಿ ಸ್ಫೋಟಗೊಂಡಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ.
ಬಾಂಬರ್ ಡಾ. ಉಮರ್ ಮೊಬೈಲ್ ಅಂಗಡಿಯೊಂದರಲ್ಲಿ ಕಂಡು ಬಂದಿದ್ದ ದೃಶ್ಯ:
#VIDEO | New CCTV Footage of Jaish Terrorist Umar Mohammad.
— Kushagra Mishra (@m_kushagra) November 15, 2025
Fresh footage shows Umar using two mobile phones while on the run. He was seen inside a Faridabad mobile shop on October 30—pulling one phone out of his bag and giving it to the shopkeeper, while holding another phone in… pic.twitter.com/ADoqojL8ox
ಅದಕ್ಕೂ ಮೊದಲು ಪೊಲೀಸರು ಫರಿದಾಬಾದ್ ವಿವಿದ ಕಡೆಗಳಲ್ಲಿ ದಾಳಿ ನಡೆಸಿ ಉಗ್ರ ಜಾಲವನ್ನು ಭೇದಿಸಿ ಬರೋಬ್ಬರಿ 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದರು. ಸ್ಫೋಟದ ನಂತರ ಜಮ್ಮು ಮತ್ತು ಕಾಶ್ಮೀರ ಪೊಲೀಸರು ರಾತ್ರಿಯಿಡೀ ದಾಳಿ ನಡೆಸಿ, ಡಾ. ಉಮರ್ ಕುಟುಂಬದ ಮೂವರು ಸದಸ್ಯರು ಸೇರಿದಂತೆ 6 ಮಂದಿಯನ್ನು ಬಂಧಿಸಿದರು.
ಈ ಸುದ್ದಿಯನ್ನೂ ಓದಿ: Delhi Bomb Blast: ದಿಲ್ಲಿ ಕಾರ್ ಬಾಂಬ್ ಸ್ಫೋಟ; ಜಿಹಾದಿ ಕೃತ್ಯ ಬಯಲಿಗೆಳೆಯುತ್ತಿದೆ ಮೋದಿ ಸರ್ಕಾರ
ಸ್ಫೋಟ ನಡೆದ ಸ್ಥಳದಿಂದ ಸಂಗ್ರಹಿಸಲಾದ ಡಿಎನ್‌ಎ ಮಾದರಿಗಳ ಮೂಲಕ ಡಾ. ಉಮರ್‌ನ ಗುರುತನ್ನು ದೃಢಪಡಿಸಲಾಗಿದೆ. ಅದು ಅವನ ತಾಯಿಯ ಡಿಎನ್‌ಎ ಜತೆ ಹೊಂದಿಕೆಯಾಗಿದೆ. ಒಂದು ಕಾಲದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದ ಉಮರ್ 2 ವರ್ಷಗಳಿಂದ ಉಗ್ರ ತರಬೇತಿ ಪಡೆದಿದ್ದ ಎನ್ನಲಾಗಿದೆ.
1989ರ ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಜನಿಸಿದ ಉಮರ್ ಫರಿದಾಬಾದ್‌ನ ಅಲ್ ಪಲಾಹ್ ಮೆಡಿಕಲ್ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಸದ್ಯ ಈ ಕಾಲೇಜಿನ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ: Delhi Blast: ದೆಹಲಿ ಸ್ಫೋಟದ ಸಂಚು; ವೈದ್ಯರಿಗೆ ತರಬೇತಿ ಕೊಡುತ್ತಿದ್ದ ಮಾಸ್ಟರ್ ಮೈಂಡ್ ಬಂಧನ
ಉಮರ್ ಚಲಾಯಿಸುತ್ತಿದ್ದ ಕಾರ್ ನವೆಂಬರ್ 10ರ ಬೆಳಗ್ಗೆ ಫರಿದಾಬಾದ್‌ನ ಅಲ್ ಫಲಾಹ್ ವಿಶ್ವವಿದ್ಯಾಲಯದಿಂದ ಹೊರಟಿರುವುದು ತನಿಖೆ ವೇಳೆ ಗೊತ್ತಾಗಿದೆ. ಸುಮಾರು 600 ಪೊಲೀಸರು ಬಿಳಿ ಹುಂಡೈ ಐ20 ಕಾರಿನ ಚಲನವಲನವನ್ನು ಪತ್ತೆಹಚ್ಚಲು 1,000ಕ್ಕೂ ಹೆಚ್ಚು ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಕಾರ್ ಬೆಳಗ್ಗೆ 8.13ಕ್ಕೆ ಬದರ್ಪುರದ ಹರಿಯಾಣ-ದೆಹಲಿ ಗಡಿಯಲ್ಲಿರುವ ಟೋಲ್ ಪ್ಲಾಜಾವನ್ನು ದಾಟುತ್ತಿರುವುದನ್ನು ಕಂಡುಬಂದಿದೆ. ನಂತರ ಅದು ಮಯೂರ್ ವಿಹಾರ್ ಮತ್ತು ಕನ್ನಾಟ್ ಪ್ಲೇಸ್ ಮೂಲಕ ಕೆಂಪು ಕೋಟೆ ಬಳಿಯ ಪಾರ್ಕಿಂಗ್ ಸ್ಥಳವನ್ನು ತಲುಪಿತ್ತು.