ನವದೆಹಲಿ: ದೇಶದ ರಕ್ಷಣಾ ಉದ್ಯಮದಲ್ಲೊಂದು ಹೊಸ ಮೈಲುಗಲ್ಲು ಸ್ಥಾಪಿಸಲಾಗಿದೆ. ಸ್ಥಳೀಯವಾಗಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿರುವ ದೇಶದ ಮೊದಲ ಖಗಂಟಕ್-243 (Khagantak-243) ದೀರ್ಘ ಶ್ರೇಣಿಯ ಗ್ಲೈಡ್ ಬಾಂಬ್ (long-range glide bomb) ಅನ್ನು ಭಾರತೀಯ ವಾಯುಪಡೆಯು (Indian Air Force) ಪರೀಕ್ಷೆ ನಡೆಸಿದ್ದು, ಇದು ಯಶಸ್ವಿಯಾಗಿದೆ. ಈ ಪರೀಕ್ಷೆಯಿಂದ 125 ಕೆಜಿ ಗ್ಲೈಡ್ ಬಾಂಬ್ (125 kg glide bomb)ನ ಸಾಮರ್ಥ್ಯ ಎಷ್ಟು ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಈ ಪರೀಕ್ಷೆಯು ಸ್ಥಳೀಯ ದಾಳಿ ಸಾಮರ್ಥ್ಯವನ್ನು ಬಲಪಡಿಸಲಿದ್ದು, ಯುದ್ಧಸಾಮಗ್ರಿಗಳ ಆಮದು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರವಹಿಸಲಿದೆ.
ನಾಗ್ಪುರ ಮೂಲದ ಸ್ಟಾರ್ಟ್ ಅಪ್ ಜೆಎಸ್ ಆರ್ ಡೈನಾಮಿಕ್ಸ್ ಪ್ರೈವೇಟ್ ಲಿಮಿಟೆಡ್ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಲಾಂಗ್ ರೇಂಜ್ ಗ್ಲೈಡ್ ಬಾಂಬ್ ಖಗಂಟಕ್-243 ಭಾರತೀಯ ರಕ್ಷಣಾ ಉದ್ಯಮದಲ್ಲೊಂದು ಪ್ರಮುಖ ಮೈಲುಗಲ್ಲು. ಇದು ಭಾರತದ ರಕ್ಷಣಾ ವಲಯದಲ್ಲಿ ಸಾರ್ವಜನಿಕ ಖಾಸಗಿ ಸಿನರ್ಜಿಯನ್ನು ಎತ್ತಿ ತೋರಿಸುತ್ತದೆ.
ಗೋವಾ ಏರ್‌ಲೈನ್ಸ್ ಸೇರಿದ ವೀರ ಚಕ್ರ ಪ್ರಶಸ್ತಿ ಪುರಸ್ಕೃತ ಫೈಟರ್ ಜೆಟ್ ಪೈಲಟ್ ಅಭಿನಂದನ್; IAFಗೆ ನಿವೃತ್ತಿ
ಖಗಂಟಕ್- 243ರಲ್ಲಿ 243 ಎನ್ನುವುದು ಬಾಂಬ್‌ನ ಸಂರಚನಾ ವರ್ಗವನ್ನು ಸೂಚಿಸುತ್ತದೆ. ಖಗಂಟಕ್-243 ಸಿಲಿಂಡರಾಕಾರವನ್ನು ಹೊಂದಿದ್ದು, 125 ಕೆಜಿ ಸ್ಫೋಟಕದೊಂದಿಗೆ ಎಂಕೆ-81 ಸಾಮಾನ್ಯ ಉದ್ದೇಶಕ್ಕಾಗಿ ಬಳಸುವ ಸಿಡಿ ತಲೆಯನ್ನು ಒಳಗೊಂಡಿದೆ. ಇದು ಸ್ವಿವೆಲ್ ಟೈಪ್ ಮಿಡ್ ಬಾಡಿ ಗ್ಲೈಡ್ ರೆಕ್ಕೆಗಳು ಮತ್ತು ಐದು ಆಫ್ಟ್ ಕಂಟ್ರೋಲ್ ಸರ್ಫೇಸ್‌ಗಳನ್ನು ಹೊಂದಿದ್ದು, 12ಕ್ಕಿಂತ ಹೆಚ್ಚು ಗ್ಲೈಡ್ ಅನುಪಾತವನ್ನು ಹೊಂದಿದೆ.
ಖಗಂಟಕ್-243 ಮ್ಯಾಕ್ 0.8ನಲ್ಲಿ 12 ಕಿಮೀ ಎತ್ತರದಿಂದ ಬಿದ್ದಾಗ 144 ಕಿಮೀ ನಿಂದ 180 ಕಿಮೀ ವ್ಯಾಪ್ತಿಯನ್ನು ಕ್ರಮಿಸಬಹುದು. ಈ ಶ್ರೇಣಿಯು ವಾಯುಪಡೆಯ ಯುದ್ಧ ವಿಮಾನಗಳು ಶತ್ರು ವಾಯು ರಕ್ಷಣಾ ವಲಯಗಳನ್ನು ಪ್ರವೇಶಿಸದೆ ಶತ್ರು ಪ್ರದೇಶದೊಳಗಿನ ಆಳವಾದ ಗುರಿಗಳನ್ನು ಹೊಡೆಯಲು ಅನುವು ಮಾಡಿಕೊಡುತ್ತದೆ.
ಗ್ಲೈಡ್ ಬಾಂಬ್‌ಗಳು ಪ್ರೊಪಲ್ಷನ್ ಅನ್ನು ಬಳಸುವುದಿಲ್ಲ. ಅವು ತಮ್ಮ ಗುರಿಗಳ ಕಡೆಗೆ ಪ್ರಯಾಣಿಸಲು ವಾಯುಬಲ ವೈಜ್ಞಾನಿಕ ಲಿಫ್ಟ್ ಅನ್ನು ಅವಲಂಬಿಸಿರುವುದರಿಂದ ಸಾಮೂಹಿಕ ಉತ್ಪಾದನೆ ಕಡಿಮೆ ಖರ್ಚಿನಲ್ಲಿ ಆಗುತ್ತದೆ.
ಆಪರೇಷನ್ ಸಿಂದೂರ್ ನಲ್ಲಿ ಆಮದು ಮಾಡಿದ ಸ್ಪೈಸ್ ಮತ್ತು ಹ್ಯಾಮರ್ ಬಾಂಬ್‌ಗಳನ್ನು ಬಳಸಲಾಗಿತ್ತು. ಇನ್ನು ಮುಂದೆ ಇಂತಹ ಕಾರ್ಯಾಚರಣೆಗಳಿಗೆ ಗ್ಲೈಡ್ ಬಾಂಬ್‌ಗಳನ್ನು ಬಳಸಬಹುದಾಗಿದೆ. 2026ರ ಅಂತ್ಯದ ವೇಳೆಗೆ 1,000ಕ್ಕೂ ಹೆಚ್ಚು ಖಗಂಟಕ್ ಭಾರತೀಯ ವಾಯುಪಡೆಯನ್ನು ಸೇರುವ ನಿರೀಕ್ಷೆಯಿದೆ.
ಭಾರತೀಯ ವಾಯುಪಡೆಯು ಪೋಖ್ರಾನ್‌ನಲ್ಲಿ ಸು-30ಎಂಕೆಐನಿಂದ ಖಗಂಟಕ್-243 ಅನ್ನು ಪರೀಕ್ಷಿಸಿದೆ. ಇದನ್ನು ಮಿಗ್-29ಕೆ ಮತ್ತು ಮಿರಾಜ್-2000 ನೊಂದಿಗೆ ಸಂಯೋಜಿಸಲು ಯೋಜಿಸಲಾಗಿದೆ. ಖಗಂಟಕ್-243ಕ್ಕಾಗಿ ಬಿಇಎಲ್ ನೊಂದಿಗೆ ಸೀಮಿತ ಸರಣಿಯ ಒಪ್ಪಂದವನ್ನು ಭಾರತೀಯ ವಾಯುಪಡೆ ಮಾಡಿಕೊಂಡಿದೆ. ಖಗಂಟಕ್ ನಲ್ಲಿ ದೀರ್ಘ ಶ್ರೇಣಿಗಳನ್ನು ನೀಡುವ ಭಾರವಾದ ಖಗಂಟಕ್-306 ಮತ್ತು ಖಗಂಟಕ್-225 ಕೂಡ ಇದೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ಸ್ವಂತ 1,000 ಕೆಜಿ ತೂಕದ ಗೌರವ್ ಲಾಂಗ್ ರೇಂಜ್ ಗ್ಲೈಡ್ ಬಾಂಬ್ ಕಳೆದ 2025ರ ಏಪ್ರಿಲ್ ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಇದರ ಬಳಿಕ ಈಗ ಖಗಂಟಕ್ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ.