ನವದೆಹಲಿ, ಜು. 1: ಕೇಂದ್ರ ಸರ್ಕಾರವು ಮಹತ್ವಾಕಾಂಕ್ಷೆಯ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‌ಗಾರ್ ಆ್ಯಂಡ್ ಆಜೀವಿಕಾ ಮಿಷನ್ (ಗ್ರಾಮೀಣ್) ಕಾಯ್ದೆ (Viksit Bharat - Guarantee for Rozgar and Ajeevika Mission (Gramin) Act) 2025 ಅಡಿಯಲ್ಲಿ ಪರಿಷ್ಕೃತ ದಿನಗೂಲಿ ದರಗಳನ್ನು ಪ್ರಕಟಿಸಿದೆ. ದೇಶಾದ್ಯಂತ ಈ ಹೊಸ ಕಾಯ್ದೆಯ ಅನುಷ್ಠಾನಕ್ಕೆ ಪೂರಕವಾಗಿ ಜುಲೈ 1ರಿಂದಲೇ ಹೊಸ ವೇತನ ದರಗಳು ಅಧಿಕೃತವಾಗಿ ಜಾರಿಗೆ ಬಂದಿವೆ. ಹೊಸ ವೇತನ ರಚನೆಯ ಪ್ರಕಾರ, ದೇಶದ ಯಾವುದೇ ರಾಜ್ಯದಲ್ಲಿ ಗ್ರಾಮೀಣ ಉದ್ಯೋಗ ಖಾತರಿ ಕಾರ್ಮಿಕರಿಗೆ ದಿನಕ್ಕೆ ಕನಿಷ್ಠ 300 ರುಪಾಯಿಯ ಮಧ್ಯಂತರ ಮೂಲ ವೇತನವನ್ನು ಕಡ್ಡಾಯಗೊಳಿಸಲಾಗಿದೆ. ಗ್ರಾಮೀಣ ಭಾಗದ ಆದಾಯವನ್ನು ಹೆಚ್ಚಿಸುವುದು ಮತ್ತು ರಾಜ್ಯಗಳ ನಡುವಿನ ವೇತನ ತಾರತಮ್ಯವನ್ನು ಕಡಿಮೆ ಮಾಡುವುದು ಈ ಐತಿಹಾಸಿಕ ನಿರ್ಧಾರದ ಮುಖ್ಯ ಉದ್ದೇಶ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಈ ಕುರಿತು ಮಾಹಿತಿ ನೀಡಿ, ʼʼಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸರ್ಕಾರವು ಗ್ರಾಮೀಣ ಕಾರ್ಮಿಕರಿಗೆ ಉದ್ಯೋಗದ ಗ್ಯಾರಂಟಿಯನ್ನು 125 ದಿನಗಳಿಗೆ ವಿಸ್ತರಿಸಿದೆʼʼ ಎಂದು ತಿಳಿಸಿದ್ದಾರೆ. ಈ ಹಿಂದೆ ಅತ್ಯಂತ ಕಡಿಮೆ ಕೂಲಿ ಹೊಂದಿದ್ದ ರಾಜ್ಯಗಳಿಗೆ ಈ ಬಾರಿ ಗರಿಷ್ಠ ವೇತನ ಹೆಚ್ಚಳದ ಲಾಭ ನೀಡಲಾಗಿದ್ದು, ದೇಶಾದ್ಯಂತ ಸರಾಸರಿ ದಿನಗೂಲಿ ದರವು 298.8 ರುಪಾಯಿಯಿಂದ 327.4 ರುಪಾಯಿಗೆ ಏರಿಕೆಯಾಗಿದೆ. ಇದು ಒಟ್ಟಾರೆಯಾಗಿ ಶೇಕಡಾ 10ಕ್ಕಿಂತ ಹೆಚ್ಚಿನ ವೇತನ ಹೆಚ್ಚಳವನ್ನು ದಾಖಲಿಸಿದೆ.
40 ಡಿಗ್ರಿ ಸೆಲ್ಸಿಯಸ್ ಬಿಸಿಲಿಗೆ ಐಸ್‌ಕ್ರೀಂನಂತೆ ಕರಗುವ ಬ್ರಿಟನ್ ರಸ್ತೆಗಳು
ಈ ಹಿಂದೆ ದಿನಕ್ಕೆ ಕೇವಲ 241 ರುಪಾಯಿಕನಿಷ್ಠ ಕೂಲಿ ಪಡೆಯುತ್ತಿದ್ದ ಬಿಹಾರ, ಉತ್ತರ ಪ್ರದೇಶ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳು ಸೇರಿ ಒಟ್ಟು 21 ರಾಜ್ಯಗಳ ಕಾರ್ಮಿಕರಿಗೆ ಈಗ ಕನಿಷ್ಠ 300 ರುಪಾಯಿ ಹೊಸ ಹಂತಕ್ಕೆ ವೇತನವನ್ನು ಹೆಚ್ಚಿಸಲಾಗಿದೆ. ಇದರಲ್ಲಿ ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ರಾಜ್ಯಗಳು ಗರಿಷ್ಠ ಶೇ. 24.5ರಷ್ಟು ವೇತನ ಹೆಚ್ಚಳವನ್ನು ಕಂಡು ಗಮನಸೆಳೆದಿವೆ. ಪರಿಷ್ಕೃತ ದರಗಳ ಅನ್ವಯ ಕರ್ನಾಟಕದ ಗ್ರಾಮೀಣ ಕಾರ್ಮಿಕರ ದಿನಗೂಲಿ 349 ರುಪಾಯಿಗೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ 312 ರುಪಾಯಿ, ಗುಜರಾತ್‌ನಲ್ಲಿ 316 ರುಪಾಯಿ, ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 307 ರುಪಾಯಿ ಹಾಗೂ ತಮಿಳುನಾಡಿನಲ್ಲಿ 336 ರುಪಾಯಿಯಂತೆ ವೇತನ ನಿಗದಿಪಡಿಸಲಾಗಿದೆ.
ವಿವಿಧ ರಾಜ್ಯಗಳ ದಿನಗೂಲಿಯ ವಿವರ:
ವಿಬಿ ಜಿ ರಾಮ್ ಜಿಯ ದಿನಗೂಲಿಯ ವಿವರ
| ರಾಜ್ಯ | ದಿನಗೂಲಿ (ರುಪಾಯಿಗಳಲ್ಲಿ) |
|---|---|
| ಕರ್ನಾಟಕ | 349 |
| ಮಹಾರಾಷ್ಟ್ರ | 312 |
| ಆಂಧ್ರ ಪ್ರದೇಶ | 307 |
| ಅರುಣಾಚಲ ಪ್ರದೇಶ | 300 |
| ಅಸ್ಸಾಂ | 300 |
| ಬಿಹಾರ | 300 |
| ಛತ್ತೀಸ್‌ಗಢ | 300 |
| ಗೋವಾ | 406 |
| ಗುಜರಾತ್ | 316 |
| ಹರಿಯಾಣ | 409 |
| ಹಿಮಾಚಲ ಪ್ರದೇಶ | 328 |
| ಜಮ್ಮು ಮತ್ತು ಕಾಶ್ಮೀರ | 329 |
| ಜಾರ್ಖಂಡ್ | 300 |
| ಕೇರಳಂ | 401 |
| ಲಡಾಖ್ | 300 |
| ಮಧ್ಯ ಪ್ರದೇಶ | 300 |
| ಮಣಿಪುರ | 300 |
| ಮೇಘಾಲಯ | 300 |
| ಮಿಝೋರಾಂ | 300 |
| ನಾಗಾಲ್ಯಾಂಡ್ | 300 |
| ಒಡಿಶಾ | 300 |
| ಪಂಜಾಬ್ | 336 |
| ರಾಜಸ್ಥಾನ | 308 |
| ಸಿಕ್ಕಿಂ | 450 |
| ತಮಿಳುನಾಡು | 336 |
| ತೆಲಂಗಾಣ | 307 |
| ತ್ರಿಪುರಾ | 300 |
| ಉತ್ತರ ಪ್ರದೇಶ | 300 |
| ಉತ್ತರಾಖಂಡ | 300 |
| ಪಶ್ಚಿಮ ಬಂಗಾಳ | 300 |
| ಅಂಡಾಮಾನ್ ಮತ್ತು ನಿಕೋಬಾರ್ | 300 |
| ದಾದ್ರಾ ಮತ್ತು ನಗರ್ ಹವೇಲಿ | 300 |
| ಲಕ್ಷದ್ವೀಪ | 300 |
| ಪುದುಚೇರಿ | 300 |
ಈಗಾಗಲೇ ಹೆಚ್ಚಿನ ವೇತನ ದರಗಳನ್ನು ಹೊಂದಿದ್ದ ಕೆಲವು ರಾಜ್ಯಗಳ ಕೂಲಿಯನ್ನು ಮತ್ತಷ್ಟು ಹೆಚ್ಚಿಸಲಾಗಿದ್ದು, ಹರಿಯಾಣ (409 ರುಪಾಯಿ), ಗೋವಾ (406 ರುಪಾಯಿ), ಕೇರಳಂ (401 ರುಪಾಯಿ) ಮತ್ತು ಸಿಕ್ಕಿಂನಲ್ಲಿ (450 ರುಪಾಯಿ) ಇದೀಗ 400 ರುಪಾಯಿ ಗಡಿಯನ್ನು ದಾಟಿ ದೇಶದಲ್ಲೇ ಅತಿ ಹೆಚ್ಚು ದಿನಗೂಲಿ ನೀಡುವ ಪ್ರದೇಶಗಳಾಗಿ ಹೊರಹೊಮ್ಮಿವೆ. ಪಾರದರ್ಶಕ ವಾರ್ಷಿಕ ಸೂಚ್ಯಂಕ ಮತ್ತು ತಾರತಮ್ಯ ರಹಿತ ಸೂತ್ರದ ಆಧಾರದ ಮೇಲೆ ಈ ವೇತನವನ್ನು ಲೆಕ್ಕಹಾಕಲಾಗಿದ್ದು, ಈ ಮಹತ್ವದ ಪರಿಷ್ಕರಣೆಯು ಗ್ರಾಮೀಣ ಭಾರತದ ಜನರ ಖರೀದಿ ಸಾಮರ್ಥ್ಯವನ್ನು ಹೆಚ್ಚಿಸುವ ಮೂಲಕ ಒಳಗೊಳ್ಳುವ ಅಭಿವೃದ್ಧಿಗೆ ಭಾರಿ ವೇಗ ನೀಡಲಿದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.