ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೊಳಕು ಶೌಚಾಲಯದ ಫೋಟೋ ಕಳುಹಿಸಿ 1,000 ರೂಪಾಯಿ ಪಡೆಯಿರಿ: NHAI ಅಭಿಯಾನ 2027ರ ಜೂನ್‌ 30ರವರೆಗೆ ವಿಸ್ತರಣೆ

Clean Toilet Picture Challenge: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆರಂಭಿಸಿರುವ ಕ್ಲೀನ್ ಟಾಯ್ಲೆಟ್ ಪಿಕ್ಚರ್ ಚಾಲೆಂಜ್ ಅಭಿಯಾನವನ್ನು 2027ರ ಜೂನ್‌ 30ರವರೆಗೆ ವಿಸ್ತರಿಸಲಾಗಿದೆ. NHAI ವ್ಯಾಪ್ತಿಯ ಟೋಲ್ ಪ್ಲಾಜಾಗಳಲ್ಲಿರುವ ಕೊಳಕು ಶೌಚಾಲಯಗಳ ಫೋಟೊವನ್ನು ‘ರಾಜಮಾರ್ಗಯಾತ್ರಾ’ ಆ್ಯಪ್ ಮೂಲಕ ಸಲ್ಲಿಸಿದರೆ, ಪರಿಶೀಲನೆಯ ಬಳಿಕ 1,000 ರೂಪಾಯಿಯನ್ನು ಸಂಬಂಧಿತ ವಾಹನದ FASTag ಖಾತೆಗೆ ರೀಚಾರ್ಜ್ ಮಾಡಲಾಗುತ್ತದೆ.

ಎಐ ರಚಿತ ಚಿತ್ರ

ನವದೆಹಲಿ, ಸೆ. 2: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಸ್ವಚ್ಛ ಶೌಚಾಲಯ ಫೋಟೊ ಸವಾಲು ಅಭಿಯಾನವನ್ನು ಆರಂಭಿಸಿದ್ದು, ಹೆದ್ದಾರಿಗಳಲ್ಲಿರುವ ಕೊಳಕು ಶೌಚಾಲಯಗಳ ಬಗ್ಗೆ ಸಾರ್ವಜನಿಕರು ದೂರು ನೀಡುವಂತೆ ಪ್ರೋತ್ಸಾಹಿಸುತ್ತಿದೆ. ಕೇಂದ್ರ ಸರ್ಕಾರದ ವಿಶೇಷ ಅಭಿಯಾನ 5.0 ಅಡಿಯಲ್ಲಿ ಕೈಗೊಂಡಿರುವ ಈ ಉಪಕ್ರಮದಡಿ, NHAI ವ್ಯಾಪ್ತಿಯ ಟೋಲ್ ಪ್ಲಾಜಾಗಳಲ್ಲಿರುವ ಕೊಳಕು ಶೌಚಾಲಯಗಳ ಫೋಟೋವನ್ನು ರಾಜಮಾರ್ಗಯಾತ್ರಾ ಆ್ಯಪ್ ಮೂಲಕ ಸಲ್ಲಿಸಿದರೆ, ಪರಿಶೀಲನೆಯ ಬಳಿಕ 1,000 ರೂಪಾಯಿ ಮೊತ್ತವನ್ನು ವಾಹನಕ್ಕೆ ಲಿಂಕ್ ಆಗಿರುವ FASTag ಖಾತೆಗೆ ರೀಚಾರ್ಜ್ ಮಾಡಲಾಗುತ್ತದೆ.

ಪ್ರಯಾಣಿಕರು ರಾಜಮಾರ್ಗಯಾತ್ರಾ ಆ್ಯಪ್‌ನ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಂಡು, NHAI ನಿರ್ವಹಿಸುವ ಟೋಲ್ ಪ್ಲಾಜಾದಲ್ಲಿರುವ ಕೊಳಕು ಶೌಚಾಲಯದ ಸ್ಪಷ್ಟ, ಜಿಯೋ-ಟ್ಯಾಗ್ ಹಾಗೂ ಸಮಯದ ಮುದ್ರೆಯಿರುವ ಫೋಟೊವನ್ನು ರಾಜಮಾರ್ಗಯಾತ್ರಾ ಆ್ಯಪ್ ಮೂಲಕ ಸಲ್ಲಿಸಬೇಕು. ಜತೆಗೆ ಹೆಸರು, ಸ್ಥಳ, ವಾಹನ ನೋಂದಣಿ ಸಂಖ್ಯೆ (VRN) ಹಾಗೂ ಮೊಬೈಲ್ ಸಂಖ್ಯೆಯ ವಿವರಗಳನ್ನು ನೀಡಬೇಕು.

ಕ್ಲೀನ್ ಟಾಯ್ಲೆಟ್ ಪಿಕ್ಚರ್ ಚಾಲೆಂಜ್ ಅಭಿಯಾನದ ವಿವರ ಇಲ್ಲಿದೆ:



ವರದಿ ಪರಿಶೀಲನೆಗೆ ಒಳಪಟ್ಟ ಬಳಿಕ ಅರ್ಹವಾಗಿದ್ದರೆ 1,000 ರೂಪಾಯಿ ಅನ್ನು ಸಂಬಂಧಿತ ವಾಹನದ FASTagಗೆ ಜಮಾ ಮಾಡಲಾಗುತ್ತದೆ. ಈ ಬಹುಮಾನವನ್ನು ನಗದು ರೂಪದಲ್ಲಿ ಪಡೆಯಲು ಸಾಧ್ಯವಿಲ್ಲ ಹಾಗೂ ವರ್ಗಾವಣೆ ಮಾಡಲಾಗುವುದಿಲ್ಲ.

ಮಾಜಿ ಶಾಸಕನ ದರ್ಪ; ಸ್ಕೂಟರ್ ಸವಾರನ ಹೆಲ್ಮೆಟ್ ಕಿತ್ತು ನೆಲಕ್ಕೆ ಎಸೆದ ರಾಜ್‌ಕುಮಾರ್ ಪಾಟೀಲ್

ಬಹುಮಾನ ಪಡೆಯಲು ನಿಯಮಗಳು

ಈ ಅಭಿಯಾನವು NHAI ನಿರ್ಮಿಸಿರುವ, ನಿರ್ವಹಿಸುವ ಅಥವಾ ನಿರ್ವಹಣೆಯಲ್ಲಿರುವ ಶೌಚಾಲಯಗಳಿಗೆ ಮಾತ್ರ ಅನ್ವಯಿಸುತ್ತದೆ. ಢಾಬಾ, ಪೆಟ್ರೋಲ್ ಬಂಕ್‌ ಅಥವಾ ಖಾಸಗಿ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿರುವ ಶೌಚಾಲಯಗಳು ಇದರ ವ್ಯಾಪ್ತಿಗೆ ಬರುವುದಿಲ್ಲ.

ಒಂದು ವಾಹನ ನೋಂದಣಿ ಸಂಖ್ಯೆಗೆ ಅಭಿಯಾನದ ಅವಧಿಯಲ್ಲಿ ಒಂದು ಬಹುಮಾನ ಮಾತ್ರ ಲಭ್ಯವಾಗಲಿದೆ. ಒಂದೇ ಶೌಚಾಲಯದ ಬಗ್ಗೆ ಒಂದೇ ದಿನದಲ್ಲಿ ಹಲವರು ದೂರು ನೀಡಿದರೆ, ಆ ದಿನ ಆ್ಯಪ್ ಮೂಲಕ ಸಲ್ಲಿಸಿದ ಮೊದಲ ವರದಿಗೆ ಮಾತ್ರ ಬಹುಮಾನ ದೊರೆಯಲಿದೆ.

ಆ್ಯಪ್ ಮೂಲಕ ತೆಗೆದ ಮೂಲ ಹಾಗೂ ಎಡಿಟ್ ಮಾಡದ ಫೋಟೊಗಳನ್ನಷ್ಟೇ ಪರಿಗಣಿಸಲಾಗುತ್ತದೆ. ನಕಲಿ, ಬದಲಾಯಿಸಿದ ಅಥವಾ ಈಗಾಗಲೇ ವರದಿಯಾಗಿರುವ ಫೋಟೋಗಳನ್ನು ತಿರಸ್ಕರಿಸಲಾಗುತ್ತದೆ. ಸಲ್ಲಿಕೆಯಾದ ಚಿತ್ರಗಳನ್ನು ಮೊದಲು AI ಆಧಾರಿತ ತಪಾಸಣೆಗೆ ಒಳಪಡಿಸಿ, ನಂತರ ಹಸ್ತಚಾಲಿತವಾಗಿ ಪರಿಶೀಲಿಸಿದ ಬಳಿಕ ಬಹುಮಾನವನ್ನು ಜಮಾ ಮಾಡಲಾಗುತ್ತದೆ.

ಅಭಿಯಾನ 2027ರ ಜೂನ್‌ 30ರವರೆಗೆ ವಿಸ್ತರಣೆ

ಸ್ವಚ್ಛತೆ, ಸುರಕ್ಷತೆ ಹಾಗೂ ಹೆದ್ದಾರಿ ಸೌಂದರ್ಯೀಕರಣಕ್ಕೆ ಒತ್ತು ನೀಡಿರುವ ಈ ಅಭಿಯಾನವನ್ನು 2027ರ ಜೂನ್‌ 30ರವರೆಗೆ ವಿಸ್ತರಿಸಲಾಗಿದೆ. ಇದರೊಂದಿಗೆ ಗುಂಡಿ ಮುಚ್ಚುವುದು ಮತ್ತು ಹಾನಿಗೊಂಡ ರಸ್ತೆಗಳನ್ನು ದುರಸ್ತಿ ಮಾಡುವುದು, ಟೋಲ್ ಪ್ಲಾಜಾ ಹಾಗೂ ಮೇಲ್ಸೇತುವೆಗಳನ್ನು ಸಾರ್ವಜನಿಕ ಕಲಾಕೃತಿಗಳ ಮೂಲಕ ಸುಂದರಗೊಳಿಸುವುದು, ಶೌಚಾಲಯಗಳ ನಿರ್ವಹಣೆ ಹಾಗೂ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಸುಧಾರಿಸುವುದು, ರಸ್ತೆ ಸುರಕ್ಷತೆಗೆ ಸ್ಪಷ್ಟ ಸೂಚನಾ ಫಲಕಗಳನ್ನು ಅಳವಡಿಸುವುದು ಮತ್ತು ಹೆದ್ದಾರಿಯ ರೈಟ್ ಆಫ್ ವೇಯಲ್ಲಿನ ಅತಿಕ್ರಮಣಗಳನ್ನು ತೆರವುಗೊಳಿಸುವಂತಹ ಕ್ರಮಗಳಿಗೂ NHAI ಒತ್ತು ನೀಡುತ್ತಿದೆ.

ಈ ಉಪಕ್ರಮದ ಮೂಲಕ ಹೆದ್ದಾರಿ ಬಳಕೆದಾರರನ್ನೇ ಸ್ವಚ್ಛತೆ ಮೇಲ್ವಿಚಾರಣೆಯ ಭಾಗವನ್ನಾಗಿ ಮಾಡಲು NHAI ಮುಂದಾಗಿದೆ. ಸಾರ್ವಜನಿಕರ ಸಕ್ರಿಯ ಸಹಭಾಗಿತ್ವದಿಂದ ಹೆದ್ದಾರಿಗಳಲ್ಲಿನ ಶೌಚಾಲಯಗಳ ನಿರ್ವಹಣೆ ಸುಧಾರಿಸುವುದರ ಜತೆಗೆ, ಸ್ವಚ್ಛತೆ ಮತ್ತು ಸಾರ್ವಜನಿಕ ಹೊಣೆಗಾರಿಕೆಯ ಸಂಸ್ಕೃತಿ ಬೆಳೆಸುವ ಉದ್ದೇಶವನ್ನು ಅಭಿಯಾನ ಹೊಂದಿದೆ.