ಶ್ರೀನಗರ, ನ. 16: ದೆಹಲಿ ಕೆಂಪು ಕೋಟೆ ಬಳಿ ನವೆಂಬರ್ 10ರಂದು ನಡೆದ ಬಾಂಬ್ ಸ್ಫೋಟ ಪ್ರಕರಣದ (Red Fort Blast) ತನಿಖೆಯಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency) ಭಾನುವಾರ (ನವೆಂಬರ್ 16) ಆತ್ಮಹತ್ಯಾ ಬಾಂಬರ್ ಡಾ. ಉಮರ್ ಉನ್ ನಬಿಗೆ (ಡಾ. ಉಮರ್ ಮೊಹಮ್ಮದ್) ಸಹಾಯ ಮಾಡಿದ ಕಾಶ್ಮೀರದ ವ್ಯಕ್ತಿಯನ್ನು ಬಂಧಿಸಿದೆ. ಬಂಧಿತನನ್ನು ಅಮೀರ್ ರಶೀದ್ ಅಲಿ ಎಂದು ಗುರುತಿಸಲಾಗಿದೆ. ಭಯೋತ್ಪಾದಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಪ್ಯಾಂಪೋರ್‌ನ ಸಂಬೂರ ನಿವಾಸಿ ಅಮೀರ್ ರಶೀದ್ ಅಲಿಯನ್ನು ದೆಹಲಿಯಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸ್ಫೋಟಗೊಂಡ ಹ್ಯುಂಡೈ ಐ20 ಕಾರು ಈತನ ಹೆಸರಿನಲ್ಲಿ ನೋಂದಣಿಯಾಗಿತ್ತು ಎನ್ನುವ ವಿಚಾರ ತನಿಖೆ ವೇಳೆ ಬೆಳಕಿಗೆ ಬಂದ ಬೆನ್ನಲ್ಲೇ ಬಂಧಿಸಲಾಗಿದೆ.
ಉಮರ್‌ಗೆ ನೆರವಾಗಲು ಅಮೀರ್ ರಶೀದ್ ಕಾಶ್ಮೀರದಿಂದ ದೆಹಲಿಗೆ ತೆರಳಿದ್ದ. ಸ್ಫೋಟಕಗಳನ್ನು ಸಾಗಿಸಲು ಅನುಕೂಲವಾಗುವಂತಹ ಕಾರು ಖರೀದಿಸಲು ಆತ ಉಮರ್‌ನೊಂದಿಗೆ ದೆಹಲಿಯಾದ್ಯಂತ ಓಡಾಡಿದ್ದ.
ಅಮೀರ್ ರಶೀದ್ ಅಲಿ ಬಂಧನದ ಕುರಿತಾದ ಎನ್‌ಐಎ ಪ್ರಕಟಣೆ:
ಎನ್‌ಐಎ ಹೇಳಿದ್ದೇನು?
ʼʼನವೆಂಬರ್ 10ರಂದು ಕೆಂಪು ಕೋಟೆ ಬಳಿ ಮಾರಕ ದಾಳಿ ನಡೆಸಲು ಅಮೀರ್ ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ಜನರಲ್ ಮೆಡಿಸಿನ್ ಸಹಾಯಕ ಪ್ರಾಧ್ಯಾಪಕ ಉಮರ್ ಉನ್ ನಬಿ ಜತೆ ಸಕ್ರಿಯವಾಗಿ ಸಂಚು ರೂಪಿಸಿದ್ದʼʼ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಈಗಾಗಲೇ ವಿಧಿ ವಿಜ್ಞಾನ ಪರೀಕ್ಷೆಯಲ್ಲಿ ಬಾಂಬ್ ಸ್ಫೋಟದಲ್ಲಿ ಹತನಾಗಿದ್ದು ಡಾ. ಉಮರ್ ಎನ್ನುವುದು ದೃಢಪಟ್ಟಿದೆ. ಸ್ಫೋಟದ ನಂತರ ಉಮರ್‌ನ ಕಾಲು ಸ್ಟೀರಿಂಗ್ ವ್ಹೀಲ್ ಮತ್ತು ಆಕ್ಸಿಲರೇಟರ್ ನಡುವೆ ಸಿಲುಕಿಕೊಂಡಿರುವುದು ಕಂಡುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ಉಮರ್‌ಗೆ ಸೇರಿದ ಮತ್ತೊಂದು ಕಾರನ್ನು ಕೂಡ ವಶಪಡಿಸಿಕೊಳ್ಳಲಾಗಿದ್ದು, ಅದರ ಪರಿಶೀಲನೆಯನ್ನೂ ನಡೆಸಲಾಗುತ್ತಿದೆ. ಈಗಾಗಲೇ ಎನ್‌ಐಎ ಬಾಂಬ್ ಸ್ಫೋಟದಲ್ಲಿ ಗಾಯಗೊಂಡವರು ಸೇರಿದಂತೆ 73 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯ ಜತೆ ದೆಹಲಿ, ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ಉತ್ತರ ಪ್ರದೇಶ ಪೊಲೀಸರು ಕೈಜೋಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Delhi blast: ದೆಹಲಿಯಲ್ಲಿ ಕಾರು ಸ್ಫೋಟಿಸಿದ ಕಿರಾತಕನ ಕಾಶ್ಮೀರದ ಮನೆ ಧ್ವಂಸ
ಉಗ್ರರಿಗೆ ಕಠಿಣ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ
ಈಗಾಗಲೇ ಕೇಂದ್ರ ಸರ್ಕಾರ ಉಗ್ರರ ಈ ಕೃತ್ಯವನ್ನು ಬಲವಾಗಿ ಖಂಡಿಸಿದ್ದು, ಕಠಿಣ ಕ್ರಮದ ಎಚ್ಚರಿಕೆ ನೀಡಿದೆ. ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯನ್ನು ಪುನರುಚ್ಚರಿಸಿದೆ. ಅದರ ಭಾಗವಾಗಿ ಈಗಾಗಲೇ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿದ್ದ ಉಮರ್‌ನ ಮನೆಯನ್ನು ಕೆಡವಲಾಗಿದೆ. ಇದಕ್ಕೂ ಮೊದಲು, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂಚಿನಲ್ಲಿ ಭಾಗಿಯಾಗಿರುವವರ ವಿರುದ್ಧವೂ ಈ ಧ್ವಂಸ ಕ್ರಮ ಕೈಗೊಳ್ಳಲಾಗಿತ್ತು.
ಅಂದು ಏನಾಗಿತ್ತು?
ನವೆಂಬರ್ 10ರ ಸಂಜೆ ನಡೆದ ಸ್ಫೋಟದಲ್ಲಿ 13 ಜನರು ಸಾವನ್ನಪ್ಪಿದ್ದರು ಮತ್ತು 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯದ ವೈದ್ಯ ಉಮರ್, ಕೆಂಪು ಕೋಟೆ ಬಳಿಯ ನೇತಾಜಿ ಸುಭಾಷ್ ಮಾರ್ಗದಲ್ಲಿರುವ ಟ್ರಾಫಿಕ್ ಸಿಗ್ನಲ್ ಬಳಿ ತಾನು ಚಲಾಯಿಸುತ್ತಿದ್ದ ಹುಂಡೈ ಐ20 ಕಾರನ್ನು ಅದರಲ್ಲಿದ್ದ ಭಾರಿ ಸ್ಫೋಟಕ ಸಾಮಗ್ರಿಯ ಮೂಲಕ ಬ್ಲಾಸ್ಟ್ ಮಾಡಿದ್ದ.