ಡೆಹ್ರಾಡೂನ್, ಜೂ. 21: ಪ್ರಮುಖ ಬೆಳವಣಿಗೆಯೊಂದರಲ್ಲಿ ಸಿಖ್ ತೀವ್ರವಾದಿ ಹೋರಾಟಗಾರರ ಗುಂಪು ನಿಹಾಂಗ್‌ನ (Nihangs) ಸದಸ್ಯರು ಉತ್ತರಾಖಂಡದ ರುದ್ರಪ್ರಯಾಗ್ ಜಿಲ್ಲೆಯ ಗುರುದ್ವಾರದ ಮೇಲೆ ದಾಳಿ ನಡೆಸಿ ವೃದ್ಧ ಭಕ್ತರೊಬ್ಬರನ್ನು ಒತ್ತೆಯಾಳಾಗಿ ಇರಿಸಿದೆ. ಆ ಮೂಲಕ ಜೂನ್ 16ರಂದು ರಾಜ್ಯದ ಕರ್ಣಪ್ರಯಾಗ್‌ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಪಟ್ಟಂತೆ ಬಂಧಿಸಿದ ತಮ್ಮ ಗುಂಪಿನ ನಾಲ್ವರು ಸದಸ್ಯರನ್ನು ಬಿಡುಗಡೆ ಮಾಡುವಂತೆ ಪಟ್ಟು ಹಿಡಿದಿದೆ. ಸದ್ಯ ಪೊಲೀಸರು ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ನಿಹಾಂಗ್ ಗುಂಪಿನೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆ ಈಡೇರದ ಹೊರತು ತಾವು ಹಿಂದೆ ಸರಿಯುವುದಿಲ್ಲ ಎಂದು ನಿಹಾಂಗ್ ಸದಸ್ಯರು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ.
ಒತ್ತೆಯಾಳನ್ನು ಸುರಕ್ಷಿತವಾಗಿ ಬಿಟ್ಟು ಬಿಟ್ಟರೆ ಕೃತ್ಯದಲ್ಲಿ ತೊಡಗಿದವರ ವಿರುದ್ದ ಯಾವುದೇ ಕ್ರಮ ಕೈಗೊಳ್ಳುವುದಿಲ್ಲವೆಂದೂ, ಪಂಜಾಬ್‌ಗೆ ಹಿಂತಿರುಗಲು ಅವಕಾಶ ನೀಡುವುದಾಗಿಯೂ ಪೊಲೀಸರು ಭರವಸೆ ನೀಡಿದ್ದಾರೆ. ಸದ್ಯ ಈ ಬಗ್ಗೆ ನಿಹಾಂಗ್ ಗುಂಪು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದಾಳಿಗೊಳಗಾದ ಗುರುದ್ವಾರವು ಬದರಿನಾಥ ಹೆದ್ದಾರಿಯಲ್ಲಿ ರುದ್ರಪ್ರಯಾಗ ಮತ್ತು ಗೌಚರ್ ನಡುವಿನ ನಾಗರಸು ಪ್ರದೇಶದಲ್ಲಿದೆ.
ನಾಗರಸು ಗುರುದ್ವಾರ ವಶಕ್ಕೆ ಪಡೆದ ನಿಹಾಂಗ್ ಗುಂಪು:
ʼʼಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಹೇಮಕುಂಡ್ ಸಾಹಿಬ್ ತೀರ್ಥಯಾತ್ರೆ ಮಾರ್ಗದಲ್ಲಿರುವ ನಾಗರಸು ಗುರುದ್ವಾರವನ್ನು 7 ನಿಹಾಂಗ್ ಸಿಖ್ಖರು 30 ಗಂಟೆಗಳಿಗೂ ಹೆಚ್ಚು ಕಾಲ ಆಕ್ರಮಿಸಿಕೊಂಡಿದ್ದಾರೆ. ಕರ್ಣಪ್ರಯಾಗದಲ್ಲಿ ಇತ್ತೀಚೆಗೆ ಸಿಖ್ ಯಾತ್ರಿಕರು ಮತ್ತು ಸ್ಥಳೀಯ ನಿವಾಸಿಗಳ ನಡುವಿನ ಘರ್ಷಣೆಗೆ ಸಂಬಂಧಿಸಿ ಬಂಧಿತರಾದವರನ್ನು ಬಿಡುಗಡೆಗೊಳಿಸಲು ವೃದ್ಧ ಭಕ್ತರೊಬ್ಬರನ್ನು ಇನ್ನೂ ಒತ್ತೆಯಾಳಾಗಿ ಇರಿಸಲಾಗಿದೆʼʼ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗುರುದ್ವಾರದಲ್ಲಿನ ಬಿಕ್ಕಟ್ಟು ಸದ್ಯ ಆಡಳಿತಕ್ಕೆ ಪ್ರಮುಖ ಸವಾಲಾಗಿ ಬದಲಾಗಿದೆ. ಅಧಿಕಾರಿಗಳ ಪ್ರಕಾರ, ನಿಹಾಂಗ್ ಸಿಖ್ಖರು ದೇವಾಲಯದ ಛಾವಣಿಯ ಮೇಲೆ ಹತ್ತಿ ಗುರುದ್ವಾರವನ್ನು ಹಿಡಿತಕ್ಕೆ ತೆಗೆದುಕೊಂಡಿದ್ದಾರೆ.
ಸದ್ಯ ಪೊಲೀಸರು, ಜಿಲ್ಲಾಡಳಿತ ಅಧಿಕಾರಿಗಳು ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಬೀಡುಬಿಟ್ಟಿದ್ದಾರೆ. ಅಧಿಕಾರಿಗಳು ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿ ಮಾತುಕತೆಯ ಮೂಲಕ ಪರಿಸ್ಥಿತಿಯನ್ನು ತಿಳಿಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ವಿಷಯದ ಸೂಕ್ಷ್ಮತೆಯನ್ನು ಗಮನದಲ್ಲಿಟ್ಟುಕೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ವದಂತಿ ತಡೆಯಲು ಆಡಳಿತವು ರುದ್ರಪ್ರಯಾಗ ಮತ್ತು ಶ್ರೀನಗರ ಪ್ರದೇಶಗಳಲ್ಲಿ ಇಂಟರ್‌ನೆಟ್ ಸೇವೆಗ ಸ್ಥಗಿತಗೊಳಿಸಿದೆ.
ತೀರ್ಥಯಾತ್ರೆಗೆಂದು ಹೋಗಿ ನಿಗೂಢವಾಗಿ ಕಣ್ಮರೆಯಾಗಿದ್ದ ಸಿಖ್ ಮಹಿಳೆ ಪಾಕ್‌ನಲ್ಲಿ ಪತ್ತೆ... ಇಸ್ಲಾಂಗೆ ಮತಾಂತರ!
ಘಟನೆ ಹಿನ್ನೆಲೆ
ಇತ್ತೀಚೆಗೆ ಕರ್ಣಪ್ರಯಾಗದಲ್ಲಿ ಹೇಮಕುಂಡ್ ಸಾಹಿಬ್‌ನಿಂದ ಹಿಂತಿರುಗುತ್ತಿದ್ದ ನಿಹಾಂಗ್ ಸಿಖ್ ಯಾತ್ರಿಕರು ಮತ್ತು ಸ್ಥಳೀಯ ಯುವಕರ ನಡುವೆ ನಡೆದ ಘರ್ಷಣೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಈ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದರು. ನಂತರ ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಸಿಖ್ ಯುವಕರನ್ನು ಬಂಧಿಸಿದ್ದು, ಸಿಖ್ ಸಮುದಾಯದ ವಿವಿಧ ವರ್ಗಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಯಾರು ಈ ನಿಹಾಂಗ್‌ಗಳು?
ನಿಹಾಂಗ್ ಎಂಬುದು ಸಿಖ್ ತೀವ್ರವಾದಿ ಹೋರಾಟಗಾರರ ಗುಂಪು. ನೀಲಿ ನಿಲುವಂಗಿ, ಉಕ್ಕಿನ ಕೋಟ್ ತೊಡುವ ಇವರು ಸದಾ ತಮ್ಮ ಬಳಿ ಕತ್ತಿ ಇಟ್ಟುಕೊಂಡಿರುತ್ತಾರೆ. ಪೇಟ ಧರಿಸಿರುತ್ತಾರೆ. ನಿಹಾಂಗ್ ಭಾರತದಲ್ಲಿ ಹುಟ್ಟಿಕೊಂಡ ಸಶಸ್ತ್ರ ಸಿಖ್ ಯೋಧರ ಪಡೆ. ಸಿಖ್ ಇತಿಹಾಸದಲ್ಲಿ ಅವರು ಯಾವಾಗಲೂ ಪ್ರಮುಖ ಸ್ಥಾನ ಪಡೆದಿದ್ದು, ಅನೇಕ ಗುರುದ್ವಾರಗಳನ್ನು ರಕ್ಷಿಸಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.