ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಿಹಾರ ರಾಜಕೀಯಕ್ಕೆ ಮತ್ತೊಂದು ತಲೆಮಾರು ಎಂಟ್ರಿ; ಸಚಿವರಾಗಿ ನಾಳೆ ನಿತೀಶ್ ಕುಮಾರ್ ಪುತ್ರ ನಿಶಾಂತ್ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ

Nitish Kumar's son Nishant to take oath: ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ ನಾಳೆ (ಮೇ 7) ಬಿಹಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸಿಎಂ ಸಾಮ್ರಾಟ್ ಚೌಧರಿ ಅವರ ನೇತೃತ್ವದ ಹೊಸ ಸರ್ಕಾರದಲ್ಲಿ ಈ ಪ್ರಮಾಣ ವಚನ ನಡೆಯಲಿದೆ. ಸಾಮ್ರಾಟ್ ಚೌಧರಿ ಏಪ್ರಿಲ್ 15ರಂದು ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.

ನಿತೀಶ್ ಕುಮಾರ್ ಅವರ ಪುತ್ರ ನಿಶಾಂತ್ ಕುಮಾರ್ (ಸಂಗ್ರಹ ಚಿತ್ರ)

ಪಟನಾ, ಮೇ 6: ಬಿಹಾರದ ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ (Nitish Kumar) ಅವರ ಪುತ್ರ ನಿಶಾಂತ್ ಕುಮಾರ್ (Nishant Kumar) ಗುರುವಾರ (ಮೇ 7) ಬಿಹಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾರ್ಚ್‌ನಲ್ಲಿ ಜೆಡಿಯುಗೆ ಸೇರ್ಪಡೆಯಾದ ನಂತರ, ಹೊಸ ಸಚಿವ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಬಹುದಾದ 27 ಮಂದಿಯಲ್ಲಿ ಇವರು ಒಬ್ಬರಾಗಿದ್ದಾರೆ ಎಂದು ವರದಿ ಹೇಳಿದೆ.

ಸಿಎಂ ಸಾಮ್ರಾಟ್ ಚೌಧರಿ ಅವರ ನೇತೃತ್ವದ ಹೊಸ ಸರ್ಕಾರದಲ್ಲಿ ಈ ಪ್ರಮಾಣ ವಚನ ನಡೆಯಲಿದೆ. ಸಾಮ್ರಾಟ್ ಚೌಧರಿ ಏಪ್ರಿಲ್ 15ರಂದು ಬಿಹಾರದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ನಿತೀಶ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯಸಭೆಗೆ ತೆರಳಿದ ನಂತರ ಬಿಹಾರ ರಾಜಕೀಯದಲ್ಲಿ ದಿಢೀರ್‌ ಬೆಳವನಿಗೆ ನಡೆಯಿತು. ಇದೀಗ ನೂತನ ಮುಖ್ಯಮಂತ್ರಿ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸುತ್ತಿದ್ದಾರೆ.

ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿರುವ 27 ಸಚಿವರಲ್ಲಿ ನಿಶಾಂತ್ ಕುಮಾರ್ ಸೇರಿ 12 ಮಂದಿ ಜೆಡಿಯು ಪಕ್ಷದವರಿದ್ದಾರೆ. ಬಿಹಾರ ಸಚಿವ ಸಂಪುಟಕ್ಕೆ ನಿಶಾಂತ್ ಕುಮಾರ್ ಸೇರ್ಪಡೆ ರಾಜಕೀಯವಾಗಿ ಮಹತ್ವದ್ದಾಗಿದ್ದು, ಪಕ್ಷದೊಳಗಿನ ಪೀಳಿಗೆಯ ಬದಲಾವಣೆಯ ಸೂಚನೆಯಾಗಿದೆ.

ವಿಶ್ವಾಸ ಮತ ಗೆದ್ದ ಬಿಹಾರ ಸಿಎಂ ಸಾಮ್ರಾಟ್ ಚೌಧರಿ; ನಿತೀಶ್ ಕುಮಾರ್ ಹೆಜ್ಜೆಗಳನ್ನು ಅನುಸರಿಸುವುದಾಗಿ ಪ್ರತಿಜ್ಞೆ

ಜೆಡಿಯುವಿನಿಂದ ಯಾರಿಗೆಲ್ಲ ಮನ್ನಣೆ?

ಜೆಡಿಯುನಿಂದ ಶ್ರವಣ್ ಕುಮಾರ್, ಅಶೋಕ್ ಚೌಧರಿ, ಲೇಶಿ ಸಿಂಗ್, ಮದನ್ ಸಾಹ್ನಿ, ಜಮಾ ಖಾನ್, ಸುನೀಲ್ ಕುಮಾರ್, ಶೀಲಾ ಮಂಡಲ್, ರತ್ನೇಶ್ ಸದಾ, ಬುಲೋ ಮಂಡಲ್, ಭಗವಾನ್ ಸಿಂಗ್ ಕುಶ್ವಾಹ, ದಾಮೋದರ್ ರಾವತ್ ಮತ್ತು ನಿಶಾಂತ್ ಕುಮಾರ್ ಸೇರಿ ಹಲವು ಹಿರಿಯ ನಾಯಕರು ವಿಸ್ತೃತ ಸಚಿವ ಸಂಪುಟದ ಭಾಗವಾಗುವ ಸಾಧ್ಯತೆಯಿದೆ. ಬಿಜೇಂದ್ರ ಪ್ರಸಾದ್ ಯಾದವ್ ಮತ್ತು ವಿಜಯ್ ಚೌಧರಿ ಈಗಾಗಲೇ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮೂಲಗಳ ಪ್ರಕಾರ, ಸಚಿವ ಸಂಪುಟದಲ್ಲಿ ಎನ್‌ಡಿಎ ಮೈತ್ರಿ ಪಕ್ಷಗಳ ನಡುವೆ ಸಮತೋಲನದ ಅಧಿಕಾರ ಹಂಚಿಕೆ ಸೂತ್ರವನ್ನು ಅನುಸರಿಸುವ ಸಾಧ್ಯತೆ ಇದೆ. ಅತಿದೊಡ್ಡ ಪಕ್ಷವಾದ ಬಿಜೆಪಿಗೆ ಸುಮಾರು 12 ಸಚಿವ ಸ್ಥಾನಗಳು ಸಿಗಬಹುದು. ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮೂರು ಸ್ಥಾನಗಳನ್ನು ಪಡೆಯಬಹುದು. ಹಿಂದೂಸ್ತಾನಿ ಅವಾಮ್ ಮೋರ್ಚಾ ಮತ್ತು ರಾಷ್ಟ್ರೀಯ ಲೋಕ ಜನತಾ ದಳದಂತಹ ಸಣ್ಣ ಮಿತ್ರಪಕ್ಷಗಳು ತಲಾ ಒಂದು ಸ್ಥಾನವನ್ನು ಪಡೆಯಬಹುದು.

ಬಿಜೆಪಿಯಿಂದ ವಿಜಯ್ ಕುಮಾರ್ ಸಿನ್ಹಾ, ಮಂಗಲ್ ಪಾಂಡೆ, ದಿಲೀಪ್ ಜೈಸ್ವಾಲ್, ಶ್ರೇಯಸಿ ಸಿಂಗ್, ಅರುಣ್ ಶಂಕರ್ ಪ್ರಸಾದ್, ಲಖೀಂದ್ರ ಪಾಸ್ವಾನ್, ರಾಮ್ ಕೃಪಾಲ್ ಯಾದವ್ ಮತ್ತಿತರರು ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಮಿತ್ರಪಕ್ಷಗಳಾದ ಎಲ್‌ಜೆಪಿ (ಆರ್‌ವಿ)ಯಲ್ಲಿ ಸಂಜಯ್ ಕುಮಾರ್ ಮತ್ತು ಸಂಜಯ್ ಕುಮಾರ್ ಸಿಂಗ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ಜಿತನ್ ರಾಮ್ ಮಾಂಝಿ ನೇತೃತ್ವದ ಎಚ್‌ಎಎಂನಲ್ಲಿ ಆರ್‌ಎಲ್‌ಜೆಡಿಯ ಸಂತೋಷ್ ಸುಮನ್ ಮತ್ತು ದೀಪಕ್ ಪ್ರಕಾಶ್ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎನ್ನಲಾಗಿದೆ.

ಪ್ರಮಾಣ ವಚನ ಸಮಾರಂಭವು ಪಟನಾದ ಗಾಂಧಿ ಮೈದಾನದಲ್ಲಿ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಗುರುವಾರ (ಮೇ 7) ಬೆಳಗ್ಗೆ 11:30ರ ಸುಮಾರಿಗೆ ನಗರಕ್ಕೆ ಆಗಮಿಸಲಿದ್ದಾರೆ. ಗೃಹ ಸಚಿವ ಅಮಿತ್ ಶಾ ಈಗಾಗಲೇ ಪಟನಾ ತಲುಪಿದ್ದು, ಬಿಜೆಪಿಯ ಸಚಿವರ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ. ಕೇಂದ್ರ ಸಚಿವರಾದ ರಾಜನಾಥ್ ಸಿಂಗ್ ಮತ್ತು ಜೆ.ಪಿ. ನಡ್ಡಾ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.