ನವದೆಹಲಿ: ಬಿಜೆಪಿಯ ನೂತನ ಅಧ್ಯಕ್ಷರಾಗಿ ನಿತಿನ್ ನಬಿನ್ (Nitin Nabin) ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿತಿನ್ ನಬಿನ್ ಅವರನ್ನು ಮಂಗಳವಾರ ಪ್ರಧಾನಿ ಮೋದಿ (Narendra Modi) ಅಭಿನಂದಿಸಿದ್ದಾರೆ. ನಾನು ಕಾರ್ಯಕರ್ತ ಮತ್ತು ನಿತಿನ್ ನಬಿನ್ ಈಗ ನನ್ನ ಬಾಸ್ ಎಂದು ಅವರು ಹೇಳಿದರು. ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷದ ಅಧ್ಯಕ್ಷರಾದ ನಿತಿನ್ ನಬಿನ್ ಅವರನ್ನು ನಾನು ಅಭಿನಂದಿಸುತ್ತೇನೆ. ಪಕ್ಷವನ್ನು ಬಲಪಡಿಸುವಲ್ಲಿ ನೀಡಿದ ಕೊಡುಗೆಗಾಗಿ ಹಿಂದಿನ ಎಲ್ಲಾ ಅಧ್ಯಕ್ಷರಿಗೆ ನಾನು ಧನ್ಯವಾದ ಹೇಳುತ್ತೇನೆ" ಎಂದು ಪ್ರಧಾನಿ ಮೋದಿ ಹೇಳಿದರು.
ಮಂಗಳವಾರ ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷರಾಗಿ ಔಪಚಾರಿಕವಾಗಿ ಅಧಿಕಾರ ವಹಿಸಿಕೊಂಡ ನಬಿನ್, ಪಕ್ಷವನ್ನು ಮುನ್ನಡೆಸಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 45 ವರ್ಷದ ನಬಿನ್ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.
ನಿತಿನ್ ನಬಿನ್ ಯಾರು?
ನಿತಿನ್ ನಬಿನ್ ಬಿಹಾರದ ಹಿರಿಯ ಬಿಜೆಪಿ ನಾಯಕರಾಗಿದ್ದು, ಬಲವಾದ ರಾಜಕೀಯ ಹಿನ್ನೆಲೆಯನ್ನು ಹೊಂದಿದ್ದಾರೆ. ನಿತಿನ್ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ ದಿವಂಗತ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರರಾಗಿದ್ದಾರೆ. ತಂದೆಯ ಅಕಾಲಿಕ ಮರಣದ ನಂತರ ಅವರು ಸಕ್ರಿಯ ರಾಜಕೀಯಕ್ಕೆ ಕಾಲಿಟ್ಟರು. ನಿತಿನ್ ನಬಿನ್ ಅವರಿಗೆ ಪ್ರಸ್ತುತ 45 ವರ್ಷ. ಅವರನ್ನು ಡಿಸೆಂಬರ್ 14, 2025 ರಂದು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಐದು ಬಾರಿ ಬಂಕಿಪುರದಿಂದ ಆಯ್ಕೆಯಾಗಿರುವ 45 ವರ್ಷದ ನಿತಿನ್ ನಬಿನ್ ಪ್ರಸ್ತುತ ಬಿಹಾರ ಸರ್ಕಾದಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾರೆ. ಈಗ ಬಿಜೆಪಿ ಅಧ್ಯಕ್ಷರಾಗಿದ್ದಾರೆ.
2020ರ ಜನವರಿಯಲ್ಲಿಯೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವಧಿ ಪೂರ್ಣಗೊಂಡಿತ್ತು. 2024ರ ಲೋಕಸಭಾ ಚುನಾವಣೆಗಳು ಸೇರಿದಂತೆ ನಿರ್ಣಾಯಕ ರಾಜಕೀಯ ಸನ್ನಿವೇಶಗಳನ್ನು ಎದುರಿಸಲು ನಡ್ಡಾ ಅವರ ಅಧಿಕಾರಾವಧಿ ಹಲವು ಬಾರಿ ವಿಸ್ತರಿಸಲಾಗಿತ್ತು. ಇದೀಗ ಅವರ ಉತ್ತರಾಧಿಕಾರಿಯನ್ನು ನೇಮಿಸಲಾಗಿದೆ.