ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಸಾಮ್ರಾಟ್ ಚೌಧರಿ ಬಿಹಾರದ ಮುಂದಿನ ಸಿಎಂ?: ನಿತೀಶ್ ಕುಮಾರ್ ರಾಜೀನಾಮೆ ಸಾಧ್ಯತೆ

ಬಿಹಾರದಲ್ಲಿ ದೀರ್ಘಕಾಲ ಪ್ರಭಾವ ಹೊಂದಿದ್ದ ನಿತೀಶ್ ಕುಮಾರ್ ಅವರ ಆಡಳಿತ ಅಂತ್ಯಗೊಳ್ಳುವ ಸೂಚನೆಗಳು ಸ್ಪಷ್ಟವಾಗುತ್ತಿವೆ. ಅವರು ದೆಹಲಿಗೆ ತೆರಳಿರುವುದು ಮತ್ತು ಏಪ್ರಿಲ್ 14ರಂದು ಎನ್‌ಡಿಎ ಸಭೆಯ ನಂತರ ರಾಜೀನಾಮೆ ನೀಡುವ ಸಾಧ್ಯತೆ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಹೆಸರು ಮುಂಚೂಣಿಯಲ್ಲಿದೆ. ಈ ಬೆಳವಣಿಗೆಯನ್ನು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ತೀವ್ರವಾಗಿ ಟೀಕಿಸಿದ್ದು, ಬಿಜೆಪಿ ಒತ್ತಡದ ಆರೋಪ ಮಾಡಿದ್ದಾರೆ. ನಿತೀಶ್ ಕುಮಾರ್ ಅವರ ದೆಹಲಿ ರಾಜಕೀಯ ಪ್ರವೇಶದಿಂದ ಬಿಹಾರದಲ್ಲಿ ಹೊಸ ರಾಜಕೀಯ ಸಮೀಕರಣಗಳು ಮೂಡುವ ಸಾಧ್ಯತೆ ಹೆಚ್ಚಾಗಿದೆ.

ನಿತೀಶ್ ಕುಮಾರ್ - ಸಾಮ್ರಾಟ್ ಚೌಧರಿ

ಪಟನಾ: ಬಿಹಾರ (Bihar) ರಾಜಕಾರಣದಲ್ಲಿ ದಶಕಗಳ ಕಾಲ ಪ್ರಾಬಲ್ಯ ಹೊಂದಿದ್ದ ಜೆಡಿಯು ಸುಪ್ರೀಮೋ ನಿತೀಶ್ ಕುಮಾರ್ (Nithish Kumar) ಅವರ ಸುದೀರ್ಘ ಆಡಳಿತ ಅಂತ್ಯಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಶುಕ್ರವಾರ ರಾಜ್ಯಸಭಾ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲು ನಿತೀಶ್ ಕುಮಾರ್ ದೆಹಲಿ (Delhi)ಗೆ ತೆರಳಿದ್ದು, ಅವರೊಂದಿಗೆ ಸಂಜಯ್ ಝಾ (Sanjay Jha) ಮತ್ತು ವಿಜಯ್ ಕುಮಾರ್ ಚೌಧರಿ (Vijay Kumar Choudhary) ಕೂಡ ತೆರಳಿದ್ದಾರೆ. ಏಪ್ರಿಲ್ 14 ರಂದು ಎನ್‌ಡಿಎ (NDA) ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅದೇ ದಿನ ನಿತೀಶ್ ಕುಮಾರ್ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ ಪ್ರಸ್ತುತ ಉಪಮುಖ್ಯಮಂತ್ರಿಯಾಗಿರುವ ಸಾಮ್ರಾಟ್ ಚೌಧರಿ ಅವರು ಆಯ್ಕೆಯಾಗುವ ಸಾಧ್ಯತೆ ದಟ್ಟವಾಗಿದೆ. ಈ ನಾಯಕತ್ವ ಬದಲಾವಣೆಯ ಕುರಿತು ಚರ್ಚಿಸಲು ಸಾಮ್ರಾಟ್ ಚೌಧರಿ ಈಗಾಗಲೇ ದೆಹಲಿಗೆ ತೆರಳಿ ಬಿಜೆಪಿ ಕೇಂದ್ರ ನಾಯಕರನ್ನು ಭೇಟಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಕಳೆದ ಮಾರ್ಚ್ 17 ರಂದು ರಾಜ್ಯಸಭೆಗೆ ನಡೆದ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಎನ್‌ಡಿಎ ಅಭ್ಯರ್ಥಿಯಾಗಿ ಜಯಗಳಿಸಿದ್ದರು. ಸಂಸತ್ತಿನ ಉಭಯ ಸದನಗಳು ಹಾಗೂ ಬಿಹಾರ ಶಾಸಕಾಂಗದ ಉಭಯ ಸದನಗಳ ಸದಸ್ಯರಾಗಬೇಕೆಂಬ ತಮ್ಮ ಹಳೆಯ ಆಸೆಯನ್ನು ಪೂರೈಸಿಕೊಳ್ಳಲು ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಬಾರಾಮತಿ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಕಾಂಗ್ರೆಸ್; ಸುನೇತ್ರ ಪವಾರ್ ಅವಿರೋಧ ಆಯ್ಕೆ

ಆದರೆ, ಈ ಬೆಳವಣಿಗೆಯನ್ನು ಪ್ರತಿಪಕ್ಷ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಟೀಕಿಸಿದ್ದಾರೆ. "ನಿತೀಶ್ ಕುಮಾರ್ ಅವರು ಸ್ವಯಿಚ್ಛೆಯಿಂದ ದೆಹಲಿಗೆ ಹೋಗುತ್ತಿಲ್ಲ, ಬದಲಾಗಿ ಬಿಜೆಪಿ ಅವರನ್ನು ಬಲವಂತವಾಗಿ ಕಳುಹಿಸುತ್ತಿದೆ. ಜೆಡಿಯು ಪಕ್ಷವನ್ನು ಸಂಪೂರ್ಣವಾಗಿ ಮುಗಿಸಲು ಬಿಜೆಪಿ ಸಂಚು ರೂಪಿಸಿದೆ" ಎಂದು ಅವರು ಆರೋಪಿಸಿದ್ದಾರೆ. ರಾಜಕೀಯ ವಿಶ್ಲೇಷಕರ ಪ್ರಕಾರ, ನಿತೀಶ್ ಕುಮಾರ್ ಅವರು ದೆಹಲಿ ರಾಜಕಾರಣಕ್ಕೆ ಸ್ಥಳಾಂತರಗೊಳ್ಳುವುದರಿಂದ ಬಿಹಾರದಲ್ಲಿ ಅವರ ಪ್ರಾದೇಶಿಕ ಪ್ರಭಾವ ಕುಗ್ಗಲಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಸಮೀಕರಣಗಳು ಸೃಷ್ಟಿಯಾಗಲಿವೆ. 20 ವರ್ಷಗಳ ನಿತೀಶ್ ಯುಗ ಬಿಹಾರದಲ್ಲಿ ಮುಕ್ತಾಯದ ಹಂತಕ್ಕೆ ತಲುಪಿರುವುದು ಈಗ ದೇಶದ ಗಮನ ಸೆಳೆದಿದೆ.