ದೆಹಲಿ, ಏ. 5: ರಾಷ್ಟ್ರೀಯ ಹೆದ್ದಾರಿಗಳ (National Highway) ಟೋಲ್ ಪ್ಲಾಜಾಗಳಲ್ಲಿ (Toll Plaza) ನಗದು ಚಿಲ್ಲರೆಗಾಗಿ ಪರದಾಡುವ ದಿನಗಳಿಗೆ ಈಗ ಅಧಿಕೃತವಾಗಿ ತೆರೆ ಬೀಳಲಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (Union Ministry of Road Transport and Highways) ಸೂಚನೆಯಂತೆ, ಏಪ್ರಿಲ್ 10ರಿಂದ ಯಾವುದೇ ರಾಷ್ಟ್ರೀಯ ಹೆದ್ದಾರಿ ಟೋಲ್ ಬೂತ್‌ಗಳಲ್ಲಿ ನಗದನ್ನು ಸ್ವೀಕರಿಸಲಾಗುವುದಿಲ್ಲ. ಇನ್ನು ಮುಂದೆ ಫಾಸ್ಟ್‌ಟ್ಯಾಗ್ (FASTag) ಅಥವಾ ಯುಪಿಐ (UPI) ಮಾತ್ರ ಪಾವತಿಯ ಮಾರ್ಗವಾಗಲಿದೆ.
ದೆಹಲಿ-ಮೀರತ್ ಎಕ್ಸ್‌ಪ್ರೆಸ್‌ವೇ ಮತ್ತು ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಂತಹ ಪ್ರಮುಖ ಮಾರ್ಗಗಳಲ್ಲಿ ಕಂಡುಬರುವ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದು ಈ ಡಿಜಿಟಲ್ ಕ್ರಾಂತಿಯ ಮುಖ್ಯ ಉದ್ದೇಶ. ಒಂದು ವೇಳೆ ನಿಮ್ಮ ವಾಹನದಲ್ಲಿ ಫಾಸ್ಟ್‌ಟ್ಯಾಗ್ ಇಲ್ಲದಿದ್ದರೆ, ಯುಪಿಐ ಮೂಲಕ ಹಣ ಪಾವತಿಸಬಹುದು. ಆದರೆ ಇದಕ್ಕಾಗಿ ಸಾಮಾನ್ಯ ಟೋಲ್ ದರಕ್ಕಿಂತ 1.25 ಪಟ್ಟು ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಡಿಜಿಟಲ್ ಪಾವತಿಗೆ ನಿರಾಕರಿಸುವವರಿಗೆ ರಸ್ತೆ ಪ್ರವೇಶವನ್ನು ನಿರಾಕರಿಸುವ ಅಧಿಕಾರ ಹೆದ್ದಾರಿ ಪ್ರಾಧಿಕಾರಕ್ಕಿದೆ. ಅಲ್ಲದೆ, ಪಾವತಿಸದ ಟೋಲ್ ಮೊತ್ತಕ್ಕೆ ನೋಟಿಸ್ ಜಾರಿ ಮಾಡಲಾಗುತ್ತದೆ ಮತ್ತು ಮೂರು ದಿನಗಳಲ್ಲಿ ಬಾಕಿ ತೀರಿಸದಿದ್ದರೆ ದಂಡವು ದ್ವಿಗುಣಗೊಳ್ಳಲಿದೆ.
ಐಡಿ ಕಾರ್ಡ್ ಹಾವಳಿಗೆ ಬ್ರೇಕ್
ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಐಡಿ ಕಾರ್ಡ್ ಹಾವಳಿಗೆ ಬ್ರೇಕ್ ಹಾಕಿರುವುದು. ಈ ಹಿಂದೆ ಸರ್ಕಾರಿ ಅಧಿಕಾರಿಗಳು ಮತ್ತು ರಕ್ಷಣಾ ಸಿಬ್ಬಂದಿ ತಮ್ಮ ವೈಯಕ್ತಿಕ ವಾಹನಗಳಲ್ಲಿ ಪ್ರಯಾಣಿಸುವಾಗ ಗುರುತಿನ ಚೀಟಿ ತೋರಿಸಿ ಟೋಲ್‌ನಿಂದ ವಿನಾಯಿತಿ ಪಡೆಯುತ್ತಿದ್ದರು. ಇನ್ನು ಮುಂದೆ ಇಂತಹ ವಿನಾಯಿತಿಗಳಿಗೆ ಎಕ್ಸೆಂಪ್ಟೆಡ್ ಫಾಸ್ಟ್‌ಟ್ಯಾಗ್ ಕಡ್ಡಾಯವಾಗಿದ್ದು, ವೈಯಕ್ತಿಕ ಗುರುತಿನ ಚೀಟಿಗಳು ಮಾನ್ಯವಾಗುವುದಿಲ್ಲ. ವಿನಾಯಿತಿಯು ಕಚೇರಿ ಅಥವಾ ಹುದ್ದೆಗೆ ಸಂಬಂಧಿಸಿದ್ದೇ ಹೊರತು ವ್ಯಕ್ತಿಗಲ್ಲ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ʼಧುರಂಧರ್ʼ ಚಿತ್ರದ ಡೈಲಾಗ್ ಮೂಲಕ ಆಪ್ ವಿರುದ್ಧ ರಾಘವ್ ಚಡ್ಡಾ ಆಕ್ರೋಶ
ವಾರ್ಷಿಕ ಪಾಸ್
ಪದೇ ಪದೆ ಪ್ರಯಾಣಿಸುವವರಿಗಾಗಿ 3,075 ರೂಪಾಯಿಯ ವಾರ್ಷಿಕ ಪಾಸ್ ಸೌಲಭ್ಯವಿದ್ದು, ಇದು ರಾಷ್ಟ್ರೀಯ ಹೆದ್ದಾರಿ ಜಾಲದಾದ್ಯಂತ ಅನಿಯಮಿತ ಪ್ರಯಾಣಕ್ಕೆ ಅವಕಾಶ ನೀಡುತ್ತದೆ. ಭವಿಷ್ಯದಲ್ಲಿ ತಡೆರಹಿತ (Barrier-free) ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಈ ಹೊಸ ನಿಯಮಗಳು ಭದ್ರ ಬುನಾದಿಯಾಗಲಿವೆ. ಕ್ಯಾಮೆರಾಗಳು ಚಲಿಸುವ ವಾಹನಗಳನ್ನೇ ಗುರುತಿಸಿ ಹಣ ಕಡಿತಗೊಳಿಸುವ ತಂತ್ರಜ್ಞಾನ ಶೀಘ್ರದಲ್ಲೇ ಬರಲಿದೆ. ಒಟ್ಟಾರೆಯಾಗಿ, ಏಪ್ರಿಲ್ 10ರ ನಂತರ ಹೆದ್ದಾರಿಯಲ್ಲಿ ನಗದು ಕೇವಲ ಕಾಗದದಂತಾಗಲಿದ್ದು, ಡಿಜಿಟಲ್ ಪಾವತಿ ಅನಿವಾರ್ಯವಾಗಲಿದೆ.