ನವದೆಹಲಿ, ಫೆ. 24: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು (Union Cabinet) ಕೇರಳವನ್ನು ಕೇರಳಂ (Keralam) ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಸಂಪುಟದ ಅನುಮೋದನೆಯ ನಂತರ ರಾಷ್ಟ್ರಪತಿ ಕೇರಳ (ಹೆಸರು ಬದಲಾವಣೆ) ಮಸೂದೆ 2026 ಎಂಬ ಮಸೂದೆಯನ್ನು ಭಾರತದ ಸಂವಿಧಾನದ 3ನೇ ವಿಧಿಯ ನಿಬಂಧನೆಯಡಿ ತನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಕೇರಳ ರಾಜ್ಯ ಶಾಸಕಾಂಗ ಸಭೆಗೆ ಉಲ್ಲೇಖಿಸಲಿದ್ದಾರೆ.
ಕೇರಳ ರಾಜ್ಯ ಶಾಸಕಾಂಗ ಸಭೆಯ ಅಭಿಪ್ರಾಯಗಳನ್ನು ಸ್ವೀಕರಿಸಿದ ನಂತರ, ಭಾರತ ಸರ್ಕಾರವು ಮುಂದಿನ ಕ್ರಮ ಕೈಗೊಳ್ಳುತ್ತದೆ. ಕೇರಳದ ಹೆಸರನ್ನು ಕೇರಳಂ ಎಂದು ಬದಲಾಯಿಸಲು 2026ರ ಕೇರಳ (ಹೆಸರು ಬದಲಾವಣೆ) ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ರಾಷ್ಟ್ರಪತಿಯ ಶಿಫಾರಸನ್ನು ಪಡೆಯಲಾಗುತ್ತದೆ.
ಕೇರಳಂ ಆಗಿ ಬದಲಾದ ಕೇರಳ:
ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಹೆಸರು ಬದಲಾವಣೆಯಾಗಿದ್ದು, ಭಾರತೀಯ ಚುನಾವಣಾ ಆಯೋಗ (ECI) ದಿನಾಂಕಗಳನ್ನು ಇನ್ನೂ ಘೋಷಿಸಿಲ್ಲ.
`ದಿ ಕೇರಳ ಸ್ಟೋರಿ 2' ಸಿನಿಮಾವನ್ನು ವೀಕ್ಷಿಸಲಿರುವ ಹೈಕೋರ್ಟ್ ನ್ಯಾಯಾಧೀಶರು
2023 ಮತ್ತು 2024ರಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೇಶದ ಸಂವಿಧಾನದ ಎಂಟನೇ ವೇಳಾಪಟ್ಟಿಯಲ್ಲಿ ಸೇರಿಸಲಾದ ಎಲ್ಲ ಭಾಷೆಗಳಲ್ಲಿ ಕೇರಳ ಬದಲು ಕೇರಳಂ ಎಂದು ಹೆಸರನ್ನು ಬದಲಾಯಿಸುವ ನಿರ್ಣಯವನ್ನು ಮಂಡಿಸಿದ್ದರು. ಮೊದಲ ನಿರ್ಣಯವನ್ನು ಪರಿಶೀಲಿಸಿದ ನಂತರ, ಕೇಂದ್ರ ಗೃಹ ಸಚಿವಾಲಯವು ಕೆಲವು ತಾಂತ್ರಿಕ ಬದಲಾವಣೆಗಳನ್ನು ಸೂಚಿಸಿದ ನಂತರ, ವಿಧಾನಸಭೆಯು ಈ ನಿರ್ಣಯವನ್ನು ಎರಡು ಬಾರಿ ಅಂಗೀಕರಿಸಿತು.
ಕೇರಳ ಸರ್ಕಾರ ಮಂಡಿಸಿದ ನಿರ್ಣಯಗಳು, ಭಾರತದ ಸಂವಿಧಾನದ 3ನೇ ವಿಧಿಯ ಅಡಿಯಲ್ಲಿ ರಾಜ್ಯದ ಹೆಸರನ್ನು ಕೇರಳದಿಂದ ಕೇರಳಂ ಎಂದು ಬದಲಾಯಿಸುವುದನ್ನು ಉದ್ದೇಶಿಸಿವೆ.
ʼʼನಮ್ಮ ರಾಜ್ಯದ ಹೆಸರು ಮಲಯಾಳಂ ಭಾಷೆಯಲ್ಲಿ ಕೇರಳಂ ಎಂಬುದಾಗಿದೆ. 1956ರ ನವೆಂಬರ್ 1ರಂದು ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ರಚಿಸಲಾಯಿತು. ಕೇರಳ ಪಿರವಿ ದಿನವೂ ನವೆಂಬರ್ 1ರಂದು ಆಚರಿಸಲಾಗುತ್ತದೆ. ರಾಷ್ಟ್ರೀಯ ಸ್ವಾತಂತ್ರ್ಯ ಹೋರಾಟದ ಕಾಲದಿಂದಲೇ ಮಲಯಾಳಂ ಮಾತನಾಡುವ ಜನರಿಗಾಗಿ ಏಕೀಕೃತ ಕೇರಳ ರಚನೆಗೆ ಬಲವಾದ ಬೇಡಿಕೆ ಇತ್ತು. ಆದರೆ ಸಂವಿಧಾನದ ಪ್ರಥಮ ಅನುಸೂಚಿಯಲ್ಲಿ ನಮ್ಮ ರಾಜ್ಯದ ಹೆಸರು ಕೇರಳ ಎಂದು ದಾಖಲಿಸಲಾಗಿದೆ. 'ಕೇರಳಂ' ಎಂಬ ಹೆಸರನ್ನು ಮಾರ್ಪಡಿಸಲು ಸಂವಿಧಾನದ 3ನೇ ವಿಧಿಯ ಪ್ರಕಾರ ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಈ ಸಭೆಯು ಸರ್ವಾನುಮತದಿಂದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತದೆʼʼ ಎಂದು ನಿರ್ಣಯದಲ್ಲಿ ಹೇಳಲಾಗಿದೆ.
2016ರಲ್ಲಿ ಗುರಗಾಂವ್ ಅನ್ನು ಗುರುಗ್ರಾಮ್ ಎಂದು ಮರುನಾಮಕರಣ ಮಾಡಿದಾಗ, ಕೇಂದ್ರ ಸರ್ಕಾರವು ಕೇರಳವನ್ನು ಕೇರಳಂ, ಅಹಮದಾಬಾದ್ ಅನ್ನು ಅಮರಾವತಿ, ಹೈದರಾಬಾದ್ ಅನ್ನು ಭಾಗ್ಯನಗರ ಮತ್ತು ಔರಂಗಾಬಾದ್ ಅನ್ನು ಸಂಭಾಜಿನಗರ ಎಂದು ಮರುನಾಮಕರಣ ಮಾಡಬೇಕೆಂದು ಆರ್‌ಎಸ್‌ಎಸ್ ಸಲಹೆ ನೀಡಿತ್ತು. ಮಹಾಭಾರತದ ಗುರುಗಳಾದ ಗುರು ದ್ರೋಣಾಚಾರ್ಯರಿಗೆ ಗೌರವಾರ್ಥವಾಗಿ ಗುರಗಾಂವ್ ಅನ್ನು ಗುರುಗ್ರಾಮ್ ಎಂದು ಬದಲಾಯಿಸಲಾಯಿತು. ಹಿಂದೂ ಪುರಾಣಗಳ ಪ್ರಕಾರ, ದ್ರೋಣಾಚಾರ್ಯರಿಗೆ ತಮ್ಮ ಶಿಷ್ಯರು ಗುರುದಕ್ಷಿಣೆಯಾಗಿ ನೀಡಿದ ಭೂಮಿ ಎಂಬ ನಂಬಿಕೆ ಇದೆ.