ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Supreme Court: ಬೇರೆ ಜಾತಿ, ಧರ್ಮದ ಯುವಕನ ಮದುವೆಯಾದರೆ ಮಗಳಿಗೆ ಆಸ್ತಿಯಲ್ಲಿ ಪಾಲು ಕೊಡಬೇಕಿಲ್ಲ: ಸುಪ್ರೀಂ ಕೋರ್ಟ್‌

ಮಹಿಳೆ ಬೇರೆ ಧರ್ಮದ ಯುವಕನನ್ನು ವಿವಾಹವಾಗಿದ್ದರು. ಹೀಗಾಗಿ, ‌ತಂದೆ ಶ್ರೀಧರನ್ ತನ್ನ ಮಗಳನ್ನು ದೂರವೇ ಇಟ್ಟಿದ್ದರು. ತಮ್ಮ ವಿಲ್​ನಲ್ಲಿ ಕೂಡ ಆಕೆಗೆ ಪಾಲು ಬರೆದಿರಲಿಲ್ಲ. ಇದನ್ನು ವಿರೋಧಿಸಿ, ತನ್ನ ತಂದೆಯ ಆಸ್ತಿಯಲ್ಲಿ ತನಗೂ ಪಾಲು ಬೇಕೆಂದು ಆಕೆ ಕಾನೂನು ಮೊರೆಹೋಗಿದ್ದರು. ವಿಲ್ ಪ್ರಕಾರ ಶೈಲಾ ಅವರಿಗೆ ಅವರ ತಂದೆಯ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಸುಪ್ರೀಂ ಕೋರ್ಟ್

ನವದೆಹಲಿ, ಡಿ.20: ಒಂದು ವೇಳೆ ಮಗಳು ಅಪ್ಪನ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ಮದುವೆಯಾದರೆ (Marriage) ಅಥವಾ ಬೇರೆ ಧರ್ಮದವನನ್ನು ಮದುವೆಯಾದರೆ ಆಕೆಗೆ ಅಪ್ಪನ ಆಸ್ತಿಯಲ್ಲಿ (‌property) ಪಾಲು ಸಿಗಲೇಬೇಕೆಂದಿಲ್ಲ. ಸಮುದಾಯದ ಹೊರಗೆ ಮದುವೆಯಾದರೆ ಅಥವಾ ಮಗಳು ಅಪ್ಪನಿಗೆ ನೋವುಂಟಾಗುವಂತೆ ವರ್ತಿಸಿದರೆ ಆ ತಂದೆ ತನ್ನ ಮಗಳನ್ನು ಆಸ್ತಿಯ ವಿಲ್‌ನಿಂದ (will) ಹೊರಗಿಡಬಹುದು. ಇದರಲ್ಲಿ ಸುಪ್ರೀಂ ಕೋರ್ಟ್ (Supreme Court) ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳುವ ಮೂಲಕ ಮಹತ್ವದ ಆದೇಶ ನೀಡಿದೆ.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಶಾನುದ್ದೀನ್ ಅಮಾನುಲ್ಲಾ ಮತ್ತು ಕೆ. ವಿನೋದ್ ಚಂದ್ರನ್ ನೇತೃತ್ವದ ನ್ಯಾಯ ಪೀಠವು ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯವು ಶೈಲಾ ಜೋಸೆಫ್‌ಗೆ ಅವರ ತಂದೆ ಎನ್.ಎಸ್. ಶ್ರೀಧರನ್ ಅವರ ಆಸ್ತಿಯಲ್ಲಿ ಪಾಲು ನೀಡಬೇಕು ಎಂಬ ತೀರ್ಪನ್ನು ರದ್ದುಗೊಳಿಸಿದೆ. ಆ ಮಹಿಳೆ ಬೇರೆ ಧರ್ಮದ ಯುವಕನನ್ನು ವಿವಾಹವಾಗಿದ್ದರು. ಹೀಗಾಗಿ, ಶ್ರೀಧರನ್ ತನ್ನ ಮಗಳನ್ನು ದೂರವೇ ಇಟ್ಟಿದ್ದರು. ತಮ್ಮ ವಿಲ್​ನಲ್ಲಿ ಕೂಡ ಆಕೆಗೆ ಪಾಲು ಬರೆದಿರಲಿಲ್ಲ.

ಇದನ್ನು ವಿರೋಧಿಸಿ, ತನ್ನ ತಂದೆಯ ಆಸ್ತಿಯಲ್ಲಿ ತನಗೂ ಪಾಲು ಬೇಕೆಂದು ಆಕೆ ಕಾನೂನು ಮೊರೆಹೋಗಿದ್ದರು. ಕೆಳ ನ್ಯಾಯಾಲಯಗಳು ಆ ವಿಲ್ ಬಗ್ಗೆ ಅನುಮಾನಗಳನ್ನು ವ್ಯಕ್ತಪಡಿಸಿದ್ದವು. ಶೈಲಾ ಅವರಿಗೆ ಅವರ ತಂದೆಯ ಆಸ್ತಿಯಲ್ಲಿ ಅವರ ಇತರ 8 ಸಹೋದರರೊಂದಿಗೆ ಸಮಾನ ಪಾಲು ನೀಡಬೇಕೆಂದು ತೀರ್ಪು ನೀಡಿತ್ತು. ಆದರೆ, ಸುಪ್ರೀಂ ಕೋರ್ಟ್ ಕೆಳ ನ್ಯಾಯಾಲಯದ ಈ ತೀರ್ಪನ್ನು ರದ್ದುಗೊಳಿಸಿದೆ. ವಿಲ್ ಪ್ರಕಾರ ಶೈಲಾ ಅವರಿಗೆ ಅವರ ತಂದೆಯ ಆಸ್ತಿಯಲ್ಲಿ ಯಾವುದೇ ಹಕ್ಕಿಲ್ಲ ಎಂದು ತೀರ್ಪು ನೀಡಿದೆ.

ಆಸ್ತಿ ಮಾಲಿಕರಿಗೆ ಸಿಹಿ ಸುದ್ದಿ; ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡಲು ಆದೇಶ

“ಇದು ಆಕೆಯ ತಂದೆ ಸ್ವಇಚ್ಛೆಯಿಂದ ಬರೆದಿರುವ ವಿಲ್. ಇದರಲ್ಲಿ ಯಾವುದೇ ಹಸ್ತಕ್ಷೇಪ ಸಾಧ್ಯವಿಲ್ಲ. ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದುಗೊಳಿಸಲಾಗಿದೆ. ಶೈಲಾ ತನ್ನ ತಂದೆಯ ಆಸ್ತಿಗಳ ಮೇಲೆ ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ. ಎಲ್ಲ ಆಸ್ತಿಯನ್ನೂ ಆಕೆಯ ತಂದೆಯ ಇಚ್ಛೆಯ ಪ್ರಕಾರವೇ ಆಕೆಯ ಇತರ ಸಹೋದರರಿಗೆ ಉಯಿಲು (ವಿಲ್) ಮೂಲಕ ನೀಡಲಾಗಿದೆ” ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಲಿಂಗ ಸಮಾನತೆಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಆ ಪ್ರಕಾರ ಹೇಳುವುದಾದರೆ ಮಹಿಳೆಗೂ ಆಸ್ತಿಯಲ್ಲಿ ಸಮಾನ ಹಕ್ಕಿದೆ. ಆದರೆ, ಈ ಪ್ರಕರಣದಲ್ಲಿ ವಿಲ್ ಬರೆದ ವ್ಯಕ್ತಿಯ ಇಚ್ಛೆ ಮುಖ್ಯವಾಗಿದೆ. ಅವರೇನಾದರೂ ವಿಲ್ ಬರೆಯದೇ ಇದ್ದಿದ್ದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೂ ಪಾಲು ಇರುತ್ತಿತ್ತು. ಆದರೆ, ಅವರು ಮಗಳಿಗೆ ಆಸ್ತಿ ಸಿಗಬಾರದು ಎಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ವಿಲ್ ಬರೆದಿರುವುದರಿಂದ ಮತ್ತು ಇದು ಅವರ ಕೊನೆಯ ವಿಲ್ ಆಗಿರುವುದರಿಂದ ಅವರ ನಿರ್ಧಾರವೇ ಅಂತಿಮವಾಗಿರುತ್ತದೆ. ಕಾನೂನು ಇದರಲ್ಲಿ ಮಧ್ಯಪ್ರವೇಶಿಸುವುದಿಲ್ಲ” ಎಂದು ನ್ಯಾಯಪೀಠವು ಸ್ಪಷ್ಟಪಡಿಸಿದೆ.

ಹರೀಶ್‌ ಕೇರ

View all posts by this author