ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಇ20 ಪೆಟ್ರೋಲ್ ಕುರಿತು ಕೇಂದ್ರದಿಂದ ಅಭಯ: 'ಯಾವುದೇ ಆತಂಕವಿಲ್ಲದೆ ಬಳಸಿ ಎಂದು ಸೂಚನೆ

ಇ20 ಪೆಟ್ರೋಲ್‌ನ ಗುಣಮಟ್ಟದ ಕುರಿತು ಹರಿದಾಡುತ್ತಿರುವ ವದಂತಿಗಳಿಗೆ ಕೇಂದ್ರ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಗ್ರಾಹಕರು ಯಾವುದೇ ಆತಂಕವಿಲ್ಲದೆ ಇ20 ಪೆಟ್ರೋಲ್ ಬಳಸಬಹುದು ಎಂದು ತಿಳಿಸಿದೆ. ದೇಶಾದ್ಯಂತ ನಡೆಸಿದ ಪರೀಕ್ಷೆಗಳಲ್ಲಿ ಇಂಧನದ ಗುಣಮಟ್ಟ ನಿಗದಿತ ಮಾನದಂಡಗಳೊಳಗೇ ಇರುವುದು ದೃಢಪಟ್ಟಿದ್ದು, 100ಕ್ಕೂ ಹೆಚ್ಚು ಮಾದರಿಗಳಲ್ಲಿ ಕ್ಲೋರೈಡ್ ಪ್ರಮಾಣ 1 ಪಿಪಿಎಂಕ್ಕಿಂತ ಕಡಿಮೆ ಕಂಡುಬಂದಿದೆ ಎಂದು ಸಚಿವಾಲಯ ತಿಳಿಸಿದೆ.

ಇ20

ನವದೆಹಲಿ, ಆಗಸ್ಟ್ 8: ಇ20 (E20) ಇಂಧನದ ಗುಣಮಟ್ಟದ ಕುರಿತು ಹಬ್ಬಿರುವ ವದಂತಿಗಳ ನಡುವೆಯೇ, ಕೇಂದ್ರ ತೈಲ ಮತ್ತು ನೈಸರ್ಗಿಕ ಅನಿಲ ಸಚಿವಾಲಯ (Ministry of Petroleum and Natural Gas)ವು ಶನಿವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಗ್ರಾಹಕರು ಯಾವುದೇ ಆತಂಕವಿಲ್ಲದೆ ಇ20 ಪೆಟ್ರೋಲ್ ಬಳಸಬಹುದು ಎಂದು ತಿಳಿಸಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ (OMC) ಜಾಲದ ಮೂಲಕ ಪೂರೈಸಲಾಗುವ ಇಂಧನವು ನಿಗದಿತ ಗುಣಮಟ್ಟದ ಮಾನದಂಡಗಳಿಗೆ ಬದ್ಧವಾಗಿದೆ ಹಾಗೂ ಪ್ರತಿಯೊಂದು ಹಂತದಲ್ಲೂ ಕಟ್ಟುನಿಟ್ಟಿನ ಗುಣಮಟ್ಟ ಪರಿಶೀಲನೆಗೆ ಒಳಪಡುತ್ತಿದೆ ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಸಚಿವಾಲಯದ ಹೇಳಿಕೆಯ ಮುಖ್ಯಾಂಶಗಳು:

ಸಹಜ ಮಿತಿಯಲ್ಲಿದೆ ಗುಣಮಟ್ಟ: ಇ20 ಪೆಟ್ರೋಲ್‌ನಲ್ಲಿ ತೇವಾಂಶ ಮತ್ತು ಕ್ಲೋರೈಡ್ ಅಂಶ ಹೆಚ್ಚಾಗಿದೆ ಎಂಬ ವರದಿಗಳ ಹಿನ್ನೆಲೆಯಲ್ಲಿ, ತೈಲ ಕಂಪನಿಗಳು ದೇಶಾದ್ಯಂತ ವ್ಯಾಪಕ ತಪಾಸಣೆ ನಡೆಸಿವೆ. ವಿಜ್ಞಾನ ಆಧಾರಿತ ಪರೀಕ್ಷೆಗಳಿಂದ ಇಂಧನದ ಗುಣಮಟ್ಟವು ನಿಯಮಿತ ಮಿತಿಯಲ್ಲೇ ಇರುವುದು ದೃಢಪಟ್ಟಿದ್ದು, ಇಂಧನ ಕಲುಷಿತಗೊಂಡಿದೆ ಎಂಬ ಆತಂಕಕ್ಕೆ ಯಾವುದೇ ಆಧಾರವಿಲ್ಲ ಎಂದು ಸಚಿವಾಲಯ ಹೇಳಿದೆ.

ದಿನಕ್ಕೆ 8 ರಿಂದ 12 ಬಾರಿ ತಪಾಸಣೆ: ಗುಣಮಟ್ಟ ಕಾಪಾಡಲು ತೈಲ ಕಂಪನಿಗಳು ಪ್ರತಿ ಪೆಟ್ರೋಲ್ ಬಂಕ್‌ಗಳಲ್ಲಿ ನೀರು ಮಿಶ್ರಣವಾಗಿದೆಯೇ (Water-ingress) ಮತ್ತು ಸಾಂದ್ರತೆಯ (ಡೆನ್ಸಿಟಿ) ಪರೀಕ್ಷೆಯನ್ನು ಪ್ರತಿದಿನ 8 ರಿಂದ 12 ಬಾರಿ ನಡೆಸುತ್ತಿವೆ.

ಇ20 ಪೆಟ್ರೋಲ್ ಬಳಕೆಗೆ ಎಂಜಿನ್ ಬದಲಾವಣೆ ಬೇಡ; ಕೆಲವು ರಬ್ಬರ್ ಭಾಗಗಳಷ್ಟೇ ಬದಲಿಸಿ: ನಿತಿನ್ ಗಡ್ಕರಿ

ಸಂಚಾರಿ ಪರೀಕ್ಷಾಗಾರಗಳ ನಿಯೋಜನೆ: ವಿವಿಧ ಸ್ಥಳಗಳಲ್ಲಿ ತಕ್ಷಣದ ತಪಾಸಣೆಗಾಗಿ ಸಂಚಾರಿ ಇಂಧನ ಪರೀಕ್ಷಾ ಪ್ರಯೋಗಾಲಯಗಳನ್ನು ನಿಯೋಜಿಸಲಾಗಿದ್ದು, ಸ್ವತಂತ್ರ ಪ್ರಯೋಗಾಲಯಗಳ ಮೂಲಕ ಫಲಿತಾಂಶಗಳನ್ನು ದೃಢೀಕರಿಸಲಾಗುತ್ತಿದೆ.

ಕ್ಲೋರೈಡ್ ಪ್ರಮಾಣ ಕಡಿಮೆ:

ವಿವಿಧೆಡೆಗಳಿಂದ ಸಂಗ್ರಹಿಸಿದ 100ಕ್ಕೂ ಹೆಚ್ಚು ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಕ್ಲೋರೈಡ್ ಪ್ರಮಾಣವು ಅತ್ಯಂತ ಕಡಿಮೆಯಿರುವುದು (1 pm ಗಿಂತ ಕಡಿಮೆ) ಕಂಡುಬಂದಿದೆ. ಇದು ಭಾರತದ ತೈಲ ಸಂಸ್ಕರಣಾ ವ್ಯವಸ್ಥೆಯ ಕಟ್ಟುನಿಟ್ಟಿನ ಗುಣಮಟ್ಟವನ್ನು ತೋರಿಸುತ್ತದೆ. ಇದರ ಜೊತೆಗೆ, ಇಂಧನ ಪೂರೈಕೆ ಸರಪಳಿಯಾದ್ಯಂತ ಅತ್ಯಾಧುನಿಕ ಪರಿಶೀಲನಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಯಾವುದೇ ಹಂತದಲ್ಲೂ ಕಲುಷಿತ ಇಂಧನ ಗ್ರಾಹಕರ ವಾಹನಗಳಿಗೆ ತಲುಪದಂತೆ ಕಾವಲು ಕಾಯಲಾಗುತ್ತಿದ್ದು, ವಾಹನ ಚಾಲಕರು ಅಥವಾ ಸಾರ್ವಜನಿಕರು ಯಾವುದೇ ರೀತಿಯ ಸಾಮಾಜಿಕ ಜಾಲತಾಣಗಳ ವದಂತಿಗಳಿಗೆ ಕಿವಿಗೊಡಬಾರದು ಎಂದು ಸಚಿವಾಲಯ ಕೋರಿದೆ.

ವಾಹನಗಳ ಕಾರ್ಯಕ್ಷಮತೆ ಮತ್ತು ಗ್ರಾಹಕರ ನಂಬಿಕೆಗೆ ಧಕ್ಕೆಯಾಗದಂತೆ ತೈಲ ಕಂಪನಿಗಳು ಉನ್ನತ ಮಟ್ಟದ ಜಾಗರೂಕತೆ ವಹಿಸಿದ್ದು, ಇಂಧನ ಕ್ಷೇತ್ರದಲ್ಲಿ ಭಾರತವು ಮುನ್ನಡೆಯುತ್ತಿರುವ ಈ ಪಯಣದಲ್ಲಿ ಸಾರ್ವಜನಿಕರು ಧೈರ್ಯವಾಗಿ ಇ20 ಪೆಟ್ರೋಲ್ ಬಳಸಬಹುದು ಎಂದು ಕೇಂದ್ರ ಸರ್ಕಾರ ಪುನರುಚ್ಚರಿಸಿದೆ.