ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

'ವಂದೇ ಮಾತರಂ' ಹಾಡದೇ ಇದ್ದರೆ ಶಿಕ್ಷೆಯಿಲ್ಲ: ಸುಪ್ರೀಂ ಕೋರ್ಟಿನಿಂದ ಮಹತ್ವದ ತೀರ್ಪು

Vande Mataram song: ಶಾಲೆಗಳಲ್ಲಿ ವಂದೇ ಮಾತರಂ ಹಾಡನ್ನು ಗೌರವಯುತವಾಗಿ ಹಾಡಬೇಕು. ಹಾಗಂತ ಇದನ್ನು ಹಾಡಲು ನಿರಾಕರಿಸುವ ಮಕ್ಕಳಿಗೆ ಯಾವುದೇ ಕಾರಣಕ್ಕೂ ಶಿಕ್ಷೆ ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವ ಕಾನೂನನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಂಗ್ರಹ ಚಿತ್ರ

ನವದೆಹಲಿ: ಅಂತಃಕರಣ ಒಪ್ಪದ ಕಾರಣದಿಂದ ವಂದೇ ಮಾತರಂ (Vande Mataram) ಹಾಡು ಹಾಡಲು ನಿರಾಕರಿಸುವ ಶಾಲಾ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಹಾಡಿಸುವಂತಿಲ್ಲ. ವಂದೇ ಮಾತರಂ ಹಾಡದ ಕಾರಣಕ್ಕೆ ಯಾವುದೇ ಮಕ್ಕಳಿಗೆ ಶಿಕ್ಷೆಯನ್ನು ಕೂಡ ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ (Supreme Court) ಹೇಳಿದೆ. ವಂದೇ ಮಾತರಂನ (Vande Mataram song) ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವ ಕಾನೂನನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ವಂದೇ ಮಾತರಂ ಹಾಡಲು ನಿರಾಕರಿಸುವ, ವಿರೋಧ ವ್ಯಕ್ತಪಡಿಸುವವರನ್ನು ಶಿಕ್ಷಿಸಬಾರದು ಎಂದು ತಿಳಿಸಿದೆ.

ಈ ಕುರಿತು ಕೇಂದ್ರ ಸರ್ಕಾರಕ್ಕೆ ಸೂಚನೆಯನ್ನು ನೀಡಿದ ನ್ಯಾಯಾಲಯ, 1986ರ ತೀರ್ಪನ್ನು ಗಮನದಲ್ಲಿಟ್ಟುಕೊಂಡು ಈ ಆದೇಶ ನೀಡಿರುವುದಾಗಿ ಹೇಳಿದೆ. 1986ರ ತೀರ್ಪಿನ ಪ್ರಕರಣದಲ್ಲಿ ಅಂತಃಸಾಕ್ಷಿಯ ಕಾರಣದಿಂದ ರಾಷ್ಟ್ರಗೀತೆಯನ್ನು ಹಾಡಲು ಗೌರವಯುತವಾಗಿ ನಿರಾಕರಿಸಿದ ಶಾಲಾ ಮಕ್ಕಳ ಹಕ್ಕನ್ನು ರಕ್ಷಿಸಲಾಗಿತ್ತು ಎಂದು ತಿಳಿಸಿದೆ.

ಏಷ್ಯನ್ ಗೇಮ್ಸ್; ಸ್ಕೀಟ್ ಶೂಟಿಂಗ್‌ನಲ್ಲಿ ಭಾರತಕ್ಕೆ ಕಂಚಿನ ಪದಕ

ಕರ್ನಾಟಕ ಸಂಗೀತ ಗಾಯಕ ಟಿ.ಎಂ. ಕೃಷ್ಣ ಅವರು ಸಲ್ಲಿಸಿದ ವಂದೇ ಮಾತರಂನ ಎಲ್ಲಾ ಆರು ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವ ಕಾನೂನನ್ನು ಪ್ರಶ್ನಿಸಿ ಸಲ್ಲಿರುವ ಅರ್ಜಿಯ ಕುರಿತು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ನ್ಯಾಯ ಪೀಠವು ವಿಚಾರಣೆ ನಡೆಸುತ್ತಿತ್ತು.

ತಮ್ಮ ಅರ್ಜಿಯಲ್ಲಿ ಕೃಷ್ಣ ಅವರು ವಂದೇ ಮಾತರಂನ ಕೊನೆಯ ನಾಲ್ಕು ಚರಣಗಳು ದೇಶದ ಜಾತ್ಯತೀತ ಸ್ವರೂಪವನ್ನು ಉಲ್ಲಂಘಿಸುತ್ತವೆ ಎಂದು ವಾದಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ನ್ಯಾಯಪೀಠ 'ಬಿಜೋ ಇಮ್ಯಾನುಯೆಲ್ ವರ್ಸಸ್ ಕೇರಳ ರಾಜ್ಯ' ಪ್ರಕರಣದ ಕುರಿತು ಉಲ್ಲೇಖಿಸಿ 1986ರ ಸುಪ್ರೀಂ ಕೋರ್ಟ್ ತೀರ್ಪಿನ ತತ್ತ್ವಗಳು ಈ ತಿದ್ದುಪಡಿ ಮಾಡಿದ ಕಾನೂನಿಗೂ ಅನ್ವಯವಾಗಬೇಕು ಎಂದು ತಿಳಿಸಿದೆ.

ಇಲ್ಲಿ ರಾಷ್ಟ್ರಗೀತೆ ಯಾವುದು ಎಂಬುದು ವಿವಾದದ ವಿಷಯವಲ್ಲ. ರಾಷ್ಟ್ರಗೀತೆ ಯಾವುದು ಎರಡು ಅಥವಾ ನಾಲ್ಕು ಚರಣಗಳೇ ಎಂಬುದನ್ನು ನಿರ್ಧರಿಸುವುದು ಪ್ರಜಾಪ್ರಭುತ್ವ ಸರ್ಕಾರದ ಕೆಲಸ. ಆದರೆ ಸಂವಿಧಾನದ 25 ಮತ್ತು 26ನೇ ವಿಧಿ ಧಾರ್ಮಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಭಾವಿಸುವ ಯಾರನ್ನೇ ಆಗಲಿ ಅವರನ್ನು ಶಿಕ್ಷೆಗೆ ಒಳಪಡಿಸುವಂತಿಲ್ಲ ಎಂದು ನ್ಯಾಯಮೂರ್ತಿ ಬಾಗ್ಚಿ ತಿಳಿಸಿದರು.

ಕೃಷ್ಣ ಅವರು ತಮ್ಮ ಅರ್ಜಿಯಲ್ಲಿ 'ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯಿದೆ 1971ರ 2026ರ ತಿದ್ದುಪಡಿ ಸೆಕ್ಷನ್ 3 ಹಾಗೂ 2026ರ ಜನವರಿ 28 ಮತ್ತು ಜುಲೈ 9ರಂದು ಗೃಹ ಸಚಿವಾಲಯ ಹೊರಡಿಸಿದ ಆದೇಶಗಳನ್ನು ಪ್ರಶ್ನಿಸಿದ್ದಾರೆ. ತಿದ್ದುಪಡಿಗೊಂಡ ಸೆಕ್ಷನ್ 3ರ ಪ್ರಕಾರ ರಾಷ್ಟ್ರಗೀತೆ ಅಥವಾ ರಾಷ್ಟ್ರಗೀತೆಯನ್ನು ಹಾಡುವುದನ್ನು ಉದ್ದೇಶಪೂರ್ವಕವಾಗಿ ತಡೆಯುವ ಅಥವಾ ಅಂತಹ ಗಾಯನದಲ್ಲಿ ತೊಡಗಿರುವವರಿಗೆ ಅಡ್ಡಿಪಡಿಸುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶವಿದೆ.

ಕೆಎಎಸ್, ಪಿಡಿಒ, ಎಫ್‌ʼಡಿಎ ಪರೀಕ್ಷೆಗಳಿಗೆ ಆನ್‌ʼಲೈನ್ ಮೂಲಕ ಉಚಿತ ತರಬೇತಿ

ಕೃಷ್ಣ ಅವರ ಪರವಾಗಿ ಹಿರಿಯ ವಕೀಲ ಎಸ್. ಮುರಳಿಧರ್ ಅವರು ವಾದ ಮಂಡಿಸಿದರು. ನ್ಯಾಯಾಲಯದ ಕಲಾಪದ ವೇಳೆ ಮುರಳಿಧರ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ನಡುವೆ ಅಹಿತಕರ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ನ್ಯಾಯಪೀಠ ಮಧ್ಯ ಪ್ರವೇಶ ಮಾಡಲಿಲ್ಲ. ಅಲ್ಲದೇ ಅವರ ಆ ಹೇಳಿಕೆಗಳನ್ನು ತಾವು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ತಿಳಿಸಿದೆ.

ವಿದ್ಯಾ ಇರ್ವತ್ತೂರು

View all posts by this author