ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಂತರ್ ಮಂತರ್ ಪ್ರತಿಭಟನೆ: CJP ನಾಯಕರಾದ ಆಶುತೋಷ್ ರಂಕಾ, ಸೌರವ್ ದಾಸ್ ನ್ಯಾಯಾಂಗ ಬಂಧನ 2 ದಿನ ವಿಸ್ತರಣೆ

CJP Leaders: ದೆಹಲಿಯ ಜಂತರ್ ಮಂತರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಅಕ್ರಮವಾಗಿ ಪ್ರವೇಶಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಜೆಪಿ ನಾಯಕರಾದ ಆಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರ ನ್ಯಾಯಾಂಗ ಬಂಧನವನ್ನು ಮತ್ತೆ ಎರಡು ದಿನ ವಿಸ್ತರಿಸಲಾಗಿದೆ. ಅಕ್ಟೋಬರ್ 13ರಂದು ವಶಕ್ಕೆ ಪಡೆದಿದ್ದ ಇಬ್ಬರನ್ನು ಅಕ್ಟೋಬರ್ 14ರಂದು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ವಿಚಾರಣೆ ವಿಳಂಬವಾಗುತ್ತಿದೆ ಎಂದು CJP ಆರೋಪಿಸಿದ್ದು, ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳದ ಪಟ್ಟಿಯಿಂದ ತೆಗೆದುಹಾಕಿರುವ ನಿರ್ಧಾರವನ್ನೂ ವಿರೋಧಿಸಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಮತ್ತು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವಿರುದ್ಧದ ಅಭಿಯಾನದ ನಡುವೆಯೇ ಈ ಬೆಳವಣಿಗೆ ನಡೆದಿದೆ.

ಆಶುತೋಷ್ ರಾಂಕಾ, ಸೌರವ್ ದಾಸ್‌

ನವದೆಹಲಿ, ಅ. 19: ದೆಹಲಿಯ ಜಂತರ್ ಮಂತರ್‌ಗೆ ಬೀಗ ಹಾಕಿದ್ದ ಗೇಟ್‌ಗಳನ್ನು ಹತ್ತಿ ಒಳಪ್ರವೇಶಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರಾದ ಆಶುತೋಷ್ ರಂಕಾ (Ashutosh Ranka) ಮತ್ತು ಸೌರವ್ ದಾಸ್ (Saurav Das) ಅವರ ನ್ಯಾಯಾಂಗ ಬಂಧನವನ್ನು ಮತ್ತೆ ಎರಡು ದಿನಗಳ ಕಾಲ ವಿಸ್ತರಿಸಲಾಗಿದೆ.

ಅಕ್ಟೋಬರ್ 13ರಂದು ಇಬ್ಬರನ್ನೂ ವಶಕ್ಕೆ ಪಡೆಯಲಾಗಿತ್ತು. ಬಳಿಕ ಅಕ್ಟೋಬರ್ 14ರಂದು ಐದು ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇಂದು ಮತ್ತೆ ವಿಶೇಷ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ಬಳಿಕ ಬಂಧನದ ಅವಧಿಯನ್ನು ಎರಡು ದಿನ ವಿಸ್ತರಿಸಲಾಗಿದೆ. ಇಬ್ಬರನ್ನೂ ಬಳಿಕ ತಿಹಾರ್ ಜೈಲಿಗೆ ಕರೆದೊಯ್ಯಲಾಗಿದ್ದು, ಬುಧವಾರ ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ.

ವಿಚಾರಣೆ ವಿಳಂಬಕ್ಕೆ ಸಿಜೆಪಿ ಆಕ್ರೋಶ

ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳದ ಪಟ್ಟಿಯಿಂದ ಇತ್ತೀಚೆಗೆ ತೆಗೆದುಹಾಕಲಾಗಿತ್ತು. ಈ ನಿರ್ಧಾರವನ್ನು ವಿರೋಧಿಸುತ್ತಿರುವ ಸಿಜೆಪಿ ನಾಯಕರು, ಬೀಗ ಹಾಕಿದ್ದ ಗೇಟ್‌ಗಳನ್ನು ಹತ್ತಿ ಅಕ್ರಮವಾಗಿ ಒಳಪ್ರವೇಶಿಸಿ ರಾಷ್ಟ್ರಧ್ವಜ ಹಾರಿಸಲು ಹಾಗೂ ಘೋಷಣೆಗಳನ್ನು ಕೂಗಲು ಯತ್ನಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಲಾಗಿತ್ತು.

ಮಂದಿರ್ ಮಾರ್ಗ ಪೊಲೀಸ್ ಠಾಣೆಯಲ್ಲಿ ನಡೆದ ವಿಚಾರಣೆಯ ಸಂದರ್ಭದಲ್ಲಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ಪ್ರಕ್ರಿಯೆ ವಿಳಂಬ ಮಾಡುತ್ತಿದ್ದಾರೆ ಎಂದು ಸಿಜೆಪಿ ಆರೋಪಿಸಿದೆ. ನಾಯಕರ ಬಿಡುಗಡೆ ತಡೆಯಲು ಅಧಿಕಾರಿಗಳು ತಂತ್ರ ರೂಪಿಸುತ್ತಿದ್ದಾರೆ ಎಂಬುದು ಪಕ್ಷದ ವಾದ.

ಸಿಜೆಪಿ ನಾಯಕಿ ರತ್ನಾ ಸಿಂಗ್ ಮಾತನಾಡಿ, “ಇಲ್ಲಿನ ಸಂಪೂರ್ಣ ವಾತಾವರಣ ಆತಂಕಕಾರಿಯಾಗಿದೆ. SDM ನ್ಯಾಯಾಲಯಗಳು ರಾಜಿ ಮಾಡಿಕೊಂಡಂತೆ ವರ್ತಿಸುತ್ತಿರುವುದರಿಂದ ಅವುಗಳನ್ನು ರದ್ದುಗೊಳಿಸಬೇಕು. ಜಾಮೀನುದಾರರ ಪರಿಶೀಲನೆ ನಡೆಯುತ್ತಿದೆ ಎಂಬ ಕಾರಣಕ್ಕೆ ಮಾತ್ರ ವ್ಯಕ್ತಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲು ಸಾಧ್ಯವಿಲ್ಲ ಎಂದು ವಕೀಲರು ಕಾನೂನಿನ ಅಂಶಗಳನ್ನು ವಿವರಿಸಿದ್ದಾರೆ. ಯಾವುದೇ ಬೆದರಿಕೆ ಅಥವಾ ಆತಂಕದ ಪರಿಸ್ಥಿತಿ ಇಲ್ಲದಿದ್ದರೂ ಇಬ್ಬರನ್ನು ಮತ್ತೆ ಎರಡು ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ” ಎಂದು ಆರೋಪಿಸಿದ್ದಾರೆ.

ವಿಚಾರಣೆಯ ವೇಳೆ ಪ್ರಚೋದನಕಾರಿ ಹೇಳಿಕೆಗಳಷ್ಟೇ ಕೇಳಿಬಂದವು. SDM ಕೂಡ ಮೂರು ಗಂಟೆಗಳ ಕಾಲ ಕಾಯಬೇಕಾಯಿತು ಎಂದು ರತ್ನಾ ಸಿಂಗ್ ದೂರಿದ್ದಾರೆ. ವಿಚಾರಣೆ ಮಧ್ಯಾಹ್ನ ನಡೆಯಬೇಕಿದ್ದರೂ ಹಲವು ಗಂಟೆಗಳ ಕಾಲ ವಿಳಂಬವಾಯಿತು ಎಂದು ಅವರು ಈ ಹಿಂದೆ ದೆಹಲಿ ಪೊಲೀಸರ ವಿರುದ್ಧ ಆರೋಪಿಸಿದ್ದರು.

ಧ್ವನಿಗಳನ್ನು ಹತ್ತಿಕ್ಕಲು ವ್ಯವಸ್ಥೆಯ ದುರ್ಬಳಕೆ

"ಇಡೀ ವ್ಯವಸ್ಥೆಯನ್ನು ನಮ್ಮನ್ನು ಹತ್ತಿಕ್ಕಲು ಬಳಸಲಾಗುತ್ತಿದೆ ಎಂದು ನನಗನಿಸುತ್ತದೆ. ಆದರೆ ಇದರಲ್ಲಿ ಅವರು ಯಶಸ್ವಿಯಾಗುವುದಿಲ್ಲ. ದೇಶದ ಯುವಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. ಅಧಿಕಾರವನ್ನು ಹೇಗೆ ಬಳಸಲಾಗುತ್ತಿದೆ ಮತ್ತು ಕಾನೂನನ್ನು ಹೇಗೆ ದುರುಪಯೋಗಪಡಿಸಿಕೊಂಡು ಧ್ವನಿಗಳನ್ನು ಹತ್ತಿಕ್ಕಲಾಗುತ್ತಿದೆ ಎಂಬುದನ್ನು ಅವರು ನೋಡುತ್ತಿದ್ದಾರೆ” ಎಂದು ರತ್ನಾ ಸಿಂಗ್ ಹೇಳಿದ್ದಾರೆ.

ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿ, “ಆಶು ಮತ್ತು ಸೌರವ್ ಮಾಡಿದ ಮೊದಲ ಅಪರಾಧ ಜಂತರ್ ಮಂತರ್‌ನಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದು. ಎರಡನೇ ಅಪರಾಧ ತಮ್ಮ ನಿಲುವಿನಿಂದ ಹಿಂದೆ ಸರಿಯದಿರುವುದು. ಐದು ದಿನಗಳ ಜೈಲು ವಾಸದ ಬಳಿಕವೂ ಅವರು ನಗುತ್ತಲೇ ನ್ಯಾಯಾಲಯಕ್ಕೆ ಬಂದಿದ್ದಾರೆ. ಅವರ ಆತ್ಮಸ್ಥೈರ್ಯ ಕುಗ್ಗಿಲ್ಲ” ಎಂದು ಹೇಳಿದ್ದಾರೆ.

ಚುನಾವಣಾ ಆಯೋಗದ ವಿರುದ್ಧದ ಅಭಿಯಾನ

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ವಿರುದ್ಧ ಸಿಜೆಪಿ ನಡೆಸುತ್ತಿರುವ ಅಭಿಯಾನದ ನಡುವೆಯೇ ಈ ಬಂಧನಗಳು ನಡೆದಿವೆ. ಎಸ್ಐಆರ್ ಪ್ರಕ್ರಿಯೆಯು ಮತದಾರರ ಹಕ್ಕುಗಳಿಗೆ ಧಕ್ಕೆ ಉಂಟುಮಾಡಬಹುದು ಎಂದು ಸಿಜೆಪಿ ಆರೋಪಿಸಿದೆ. ಜಂತರ್ ಮಂತರ್ ಅನ್ನು ಅಧಿಕೃತ ಪ್ರತಿಭಟನಾ ಸ್ಥಳದ ಪಟ್ಟಿಯಿಂದ ತೆಗೆದುಹಾಕಿರುವ ನಿರ್ಧಾರವನ್ನೂ ಪಕ್ಷ ವಿರೋಧಿಸುತ್ತಿದೆ.

ಶನಿವಾರ (ಅಕ್ಟೋಬರ್‌ 17) ಹಿರಿಯ ವಕೀಲ ಕಪಿಲ್ ಸಿಬಲ್ ಅವರೊಂದಿಗೆ ಸಮಾಲೋಚನೆ ನಡೆಸಿರುವುದಾಗಿ ತಿಳಿಸಿದ್ದ ಸಿಜೆಪಿ, ಭಾನುವಾರದೊಳಗೆ ಆಶುತೋಷ್ ರಂಕಾ ಮತ್ತು ಸೌರವ್ ದಾಸ್ ಅವರನ್ನು ಬಿಡುಗಡೆ ಮಾಡದಿದ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿತ್ತು.

“ಆಶು ಮತ್ತು ಸೌರವ್ ಅವರನ್ನು ಬಿಡುಗಡೆ ಮಾಡದಿದ್ದರೆ, ಅವರನ್ನು ಅಕ್ರಮ ಬಂಧನದಲ್ಲಿಡಲು ಉದ್ದೇಶಪೂರ್ವಕವಾಗಿ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಅಪರಾಧ ಎಸಗದ ಮತ್ತು ಯಾವುದೇ ಅಪರಾಧದ ಆರೋಪವನ್ನೂ ಎದುರಿಸದವರನ್ನು ಬಂಧನದಲ್ಲಿಡಲು ವಿಳಂಬ ತಂತ್ರಗಳನ್ನು ಬಳಸುವುದನ್ನು ಸಹಿಸುವುದಿಲ್ಲ. ಇದಕ್ಕೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಪಕ್ಷ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ತಿಳಿಸಿದೆ.