ಭೋಪಾಲ್, ಮೇ 18: ಇತ್ತೀಚೆಗೆ ವರದಕ್ಷಿಣೆ ಪಿಡುಗು ಮತ್ತೆ ತಲೆ ಎತ್ತಿದೆ. ಕೈಯಲ್ಲಿ ಮದರಂಗಿಯ ರಂಗು ಮಾಸುವ ಮುನ್ನವೇ ನವ ವಧುಗಳು ಸಾವಿಗೆ ಶರಣಾಗುತ್ತಿದ್ದಾರೆ. ಪತಿ, ಅತ್ತೆಯ ಮನೆಯವರ ಕಿರುಕುಳಕ್ಕೆ ಜೀವ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ನೋಯ್ಡಾ ಮೂಲದ ಯುವತಿ ತ್ವಿಶಾ ಶರ್ಮಾ ಅವರ ಸಾವು ಇಡೀ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಮದುವೆಯಾಗಿ ಕೇವಲ ಐದು ತಿಂಗಳಿಗೆ ತ್ವಿಶಾ ಶರ್ಮಾ ಮೃತದೇಹವು ಶವಾಗಾರದಲ್ಲಿದೆ. ಅವರ ಪೋಷಕರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ.
ಮಧ್ಯ ಪ್ರದೇಶದ ಭೋಪಾಲ್‌ನ ಸಮರ್ಥ್ ಜತೆ ಕೇವಲ 5 ತಿಂಗಳ ಹಿಂದೆ ತ್ವಿಶಾ ಶರ್ಮಾ ಅವರ ಮದುವೆಯಾಗಿತ್ತು. ಮೇ 12ರಂದು ತ್ವಿಶಾ ಶರ್ಮಾ ಭೋಪಾಲ್‌ನ ಕಟಾರಾ ಹಿಲ್ಸ್‌ನಲ್ಲಿರುವ ಅತ್ತೆಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ತ್ವಿಶಾ ಅವರ ಅತ್ತೆ ಗಿರಿಬಾಲಾ ಭೋಪಾಲ್‌ನಲ್ಲಿ ಸೇವೆ ಸಲ್ಲಿಸಿದ ನಿವೃತ್ತ ನ್ಯಾಯಾಧೀಶರಾಗಿದ್ದು, ಈಗ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾರೆ. ಆದರೆ ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ ಎಂದು ತ್ವಿಶಾ ಅವರ ಪೋಷಕರು ಆರೋಪಿಸುತ್ತಿದ್ದಾರೆ. ಅಲ್ಲದೆ, ಪೋಸ್ಟ್ ಮಾರ್ಟಮ್ ವರದಿಗೂ ಮತ್ತು ವಾಸ್ತವಕ್ಕೂ ತುಂಬಾ ವ್ಯತ್ಯಾಸವಿದೆ, ಇದೊಂದು ಕೊಲೆ ಎಂದು ಆರೋಪಿಸಿದ್ದಾರೆ.
ನಾಯಿಯ ಪಾಲನೆಗೆ ತಿಂಗಳಿಗೆ 15,000 ರೂ. ಖರ್ಚು! ಬೆಂಗಳೂರಿನ ದಂಪತಿ ಶ್ವಾನ ಪ್ರೇಮ
ಇದೀಗ ತ್ವಿಶಾ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಪೋಷಕರಿಗೆ ಕಳುಹಿಸಿದ್ದ ವಾಟ್ಸ್‌ಆ್ಯಪ್ ಸಂದೇಶಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ʼʼಸಮರ್ಥ್ ನನ್ನ ಜತೆ ಸಂದೇಹದಿಂದ ಮಾತಾಡುತ್ತಿದ್ದಾನೆ. ಈ ಹಿಂದೆ ಆಗಿದ್ದ ಗರ್ಭಪಾತವಾಗಿದ್ದು ಯಾರ ಮಗು ಎಂದು ಕ್ರೂರವಾಗಿ ಕೇಳುತ್ತಿದ್ದಾನೆ. ನಾನಿಲ್ಲಿ ಮಾನಸಿಕ ಹಿಂಸೆ ಅನುಭವಿಸುತ್ತಿದ್ದೇನೆʼʼ ಎಂದು ತಾಯಿಗೆ ಮೆಸೇಜ್ ಕಳುಹಿಸಿದ್ದರು.
ಆದರೆ ಮಗಳ ಸಂಸಾರ ಉಳಿಯಲಿ ಎಂಬ ಉದ್ದೇಶದಿಂದ ಅವರ ತಾಯಿ,"ಅಪ್ಪ ಕ್ಷಮೆ ಕೇಳುತ್ತಾರೆ, ನಾವು ಇಬ್ಬರೂ ಅಲ್ಲಿಗೆ ಬರುತ್ತೇವೆʼʼ ಎಂದು ಹೇಳಿದ್ದಾರೆ. ಈ ವಾಟ್ಸ್‌ಆ್ಯಪ್ ಮೆಸೇಜ್ ವೈರಲ್ ಆಗುತ್ತಿದ್ದಂತೆ ಭಾರತೀಯ ಮದುವೆ, ಸಂಪ್ರದಾಯ, ಕಟ್ಟು ಪಾಡುಗಳ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. ʼʼಮಗಳ ಪ್ರಾಣಕ್ಕಿಂತ ಸಮಾಜ ದೊಡ್ಡದಾ? ಮದುವೆ, ಗಂಡನ ಮನೆ ಉಳಿಸಿಕೊಳ್ಳಲು ಹೆಣ್ಣು ಕೊನೆಗೆ ತನ್ನ ಪ್ರಾಣವನ್ನೇ ಕಳೆದುಕೊಳ್ಳಬೇಕಾ? ಮಗಳು ಗಂಡನ ಮನೆಯಲ್ಲಿ ಈ ರೀತಿಯ ಅನುಭವಿಸುತ್ತಿದ್ದಾಳೆ ಎಂದು ತಿಳಿದ ತಕ್ಷಣ ಆಕೆಗೆ ಬುದ್ದಿ ಹೇಳುವ ಬದಲು ಆಕೆಯ ಪ್ರಾಣ ಉಳಿಸಿʼʼ ಎಂದು ಹಲವರು ಪ್ರತಿಕ್ರಿಯೆ ನೀಡಿದ್ದಾರೆ.