ನವದೆಹಲಿ, ಏ. 14: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಉತ್ತರ ಪ್ರದೇಶದ ನೋಯ್ಡಾದಲ್ಲಿ (Noida) ಆರಂಭವಾದ ಕಾರ್ಮಿಕರ ಪ್ರತಿಭಟನೆ (Protest) ಸೋಮವಾರ (ಏಪ್ರಿಲ್ 13) ವಿಕೋಪಕ್ಕೆ ತಿರುಗಿದ್ದು, ನಗರದಾದ್ಯಂತ ಭಾರಿ ಸಂಘರ್ಷಕ್ಕೆ ಕಾರಣವಾಗಿದೆ. ಸುಮಾರು 40,000ಕ್ಕೂ ಹೆಚ್ಚು ಕಾರ್ಖಾನೆ ಕಾರ್ಮಿಕರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದು, 80ಕ್ಕೂ ಹೆಚ್ಚು ಕಡೆಗಳಲ್ಲಿ ಹಿಂಸಾಚಾರದ ವರದಿಯಾಗಿದೆ. ಪ್ರತಿಭಟನಾಕಾರರು ವಾಹನಗಳಿಗೆ ಬೆಂಕಿ ಹಚ್ಚಿ, ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು 300ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದು, 100ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಈ ಹಿಂಸಾಚಾರದ ಹಿಂದೆ ಗಂಭೀರ ಪಿತೂರಿ ಇರುವ ಶಂಕೆ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಕಾರ್ಮಿಕ ಸಚಿವ ಅನಿಲ್ ರಾಜಭರ್, ಈ ಪ್ರತಿಭಟನೆಯಲ್ಲಿ ಪಾಕಿಸ್ತಾನದ ನಂಟಿರುವ ಸಾಧ್ಯತೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಮೀರತ್ ಮತ್ತು ನೋಯ್ಡಾದಲ್ಲಿ ಬಂಧಿತರಾದ ನಾಲ್ವರು ಭಯೋತ್ಪಾದಕರು ಪಾಕಿಸ್ತಾನದ ಸಂಪರ್ಕ ಹೊಂದಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಸ್ಥಿರತೆ ಮೂಡಿಸಲು ʼದೇಶ ವಿರೋಧಿ ಶಕ್ತಿಗಳುʼ ಕಾರ್ಮಿಕರನ್ನು ಪ್ರಚೋದಿಸಿರಬಹುದು ಎಂದು ಸಚಿವರು ಅನುಮಾನ ವ್ಯಕ್ತಪಡಿಸಿದ್ದಾರೆ. ನೋಯ್ಡಾ ಪೊಲೀಸ್ ಕಮಿಷನರ್ ಲಕ್ಷ್ಮೀ ಸಿಂಗ್ ಮಾತನಾಡಿ, ಕಾರ್ಮಿಕರು ಶಾಂತಿಯುತವಾಗಿ ಹಿಂದಿರುಗಿದ ನಂತರ ಹೊರಗಿನಿಂದ ಬಂದ ಗುಂಪು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದೆ ಎಂದು ತಿಳಿಸಿದ್ದಾರೆ.
ನೋಯ್ಡಾದಲ್ಲಿನ ಕಾರ್ಮಿಕರ ಪ್ರತಿಭಟನೆ ಬಗ್ಗೆ ಮಾಹಿತಿ:
ಹರಿಯಾಣ ಸರ್ಕಾರವು ತನ್ನ ಕಾರ್ಮಿಕರ ವೇತನವನ್ನು ಶೇ. 35ರಷ್ಟು ಹೆಚ್ಚಳ ಮಾಡಿರುವ ಬೆನ್ನಲ್ಲೇ ಈ ಪ್ರತಿಭಟನೆ ಆರಂಭವಾಗಿದೆ. ನೋಯ್ಡಾದಲ್ಲಿ ಹನ್ನೆರಡು ಗಂಟೆಗಳ ಕಾಲ ಕೆಲಸ ಮಾಡಿದರೂ ಕೇವಲ 11,000ರಿಂದ 15,000 ರುಪಾಯಿ ವೇತನ ನೀಡಲಾಗುತ್ತಿದೆ. ಇದು ಜೀವನ ನಿರ್ವಹಣೆಗೆ ಸಾಕಾಗುತ್ತಿಲ್ಲ ಎಂದು ಕಾರ್ಮಿಕರು ಆರೋಪಿಸಿದ್ದಾರೆ. ತಮಗೂ ಕನಿಷ್ಠ 20,000 ರಿಂದ 25,000 ರುಪಾಯಿ ವೇತನ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಆದರೆ ಉತ್ತರ ಪ್ರದೇಶ ಸರ್ಕಾರವು ಈಗಾಗಲೇ ಏಪ್ರಿಲ್ 1ರಿಂದ ವೇತನ ಪರಿಷ್ಕರಣೆ ಮಾಡಿರುವುದಾಗಿ ತಿಳಿಸಿದೆ.
ಇರಾನ್-ಅಮೆರಿಕ ಕದನ ವಿರಾಮ ಮಾತುಕತೆ ಶೀಘ್ರದಲ್ಲೇ ಪುನರಾರಂಭ?
ಈ ನಡುವೆ ರಾಜಕೀಯ ಆರೋಪ-ಪ್ರತ್ಯಾರೋಪಗಳು ತೀವ್ರಗೊಂಡಿವೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದು, ಅಭಿವೃದ್ಧಿಯನ್ನು ಸಹಿಸದವರು ಪಿತೂರಿ ನಡೆಸುತ್ತಿದ್ದಾರೆ ಎಂದು ದೂರಿದ್ದಾರೆ. ಇದಕ್ಕೆ ವಿರುದ್ಧವಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಬಿಜೆಪಿ ಸರ್ಕಾರವು ಕಾರ್ಮಿಕರ ಹಿತಾಸಕ್ತಿ ಬಲಿಗೊಟ್ಟು ಉದ್ಯಮಿಗಳಿಗೆ ಮಾತ್ರ ಬೆಂಬಲ ನೀಡುತ್ತಿದೆ ಎಂದು ಟೀಕಿಸಿದ್ದಾರೆ. ಸದ್ಯ ನೋಯ್ಡಾದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಕಿಡಿಗೇಡಿಗಳನ್ನು ಗುರುತಿಸುವ ಕೆಲಸ ಮುಂದುವರಿದಿದೆ.