ಲಖನೌ, ಜ. 10: ಅಯೋಧ್ಯೆ ಸ್ಥಳೀಯ ಆಡಳಿತವು ರಾಮ ಮಂದಿರದ (Ayodhya Ram Temple) 15 ಕಿ.ಮೀ. ವ್ಯಾಪ್ತಿಯಲ್ಲಿ ಮಾಂಸಾಹಾರಗಳ ವಿತರಣೆಯನ್ನು ನಿಷೇಧಿಸಿದೆ. ಈ ನಿಷೇಧವು ಹೋಟೆಲ್‌ಗಳು ಮತ್ತು ಅಂಗಡಿಗಳಿಗೆ ಮಾತ್ರ ಸೀಮಿತವಾಗಿರದೆ, ಆನ್‌ಲೈನ್ ಆಹಾರ ವಿತರಣಾ ವೇದಿಕೆಗೆ ಅನ್ವಯವಾಗಲಿದೆ. ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಡಳಿತವು ಸ್ಪಷ್ಟವಾಗಿ ಹೇಳಿದೆ.
ಪಂಚಕೋಶಿ ಪರಿಕ್ರಮದ ಅಡಿಯಲ್ಲಿ ಗುರುತಿಸಲಾದ ಪ್ರದೇಶಗಳಲ್ಲಿ ಮಾಂಸಾಹಾರ ಪೂರೈಸುವ ಆನ್‌ಲೈನ್ ಆಹಾರ ವಿತರಣಾ ವೇದಿಕೆಗಳ ಬಗ್ಗೆ ಪದೇ ಪದೆ ದೂರು ಬಂದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಯೋಧ್ಯೆ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಗೆ 2 ವರ್ಷ
ರಾಮ ಮಂದಿರದ ಸುತ್ತಮುತ್ತ ಮಾಂಸಾಹಾರಗಳ ಮಾರಾಟದ ಮೇಲೆ ಈಗಾಗಲೇ ನಿಷೇಧವಿದೆ ಎಂದು ಸಹಾಯಕ ಆಹಾರ ಆಯುಕ್ತ ಮಾಣಿಕ್ ಚಂದ್ರ ಸಿಂಗ್ ಹೇಳಿದ್ದಾರೆ. ಇದರ ಹೊರತಾಗಿಯೂ, ಕೆಲವು ಹೋಟೆಲ್‌ಗಳು, ಅತಿಥಿ ಗೃಹಗಳು ಮತ್ತು ಹೋಂಸ್ಟೇಗಳು ನಿಯಮ ಉಲ್ಲಂಘಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ.
ಹಲವು ಸಂದರ್ಭಗಳಲ್ಲಿ ಮಾಂಸಾಹಾರವನ್ನು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ ಪ್ರವಾಸಿಗರಿಗೆ ನೀಡಲಾಗುತ್ತಿತ್ತು. ಇದು ಭಕ್ತರ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತಿರುವ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ, ಆಡಳಿತವು ಆನ್‌ಲೈನ್ ವಿತರಣೆಯ ಮೂಲಕ ಮಾಂಸಾಹಾರ ಪೂರೈಕೆಯನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಿದೆ.
ಅಯೋಧ್ಯೆ ಮತ್ತು ಫೈಜಾಬಾದ್ ಅನ್ನು ಸಂಪರ್ಕಿಸುವ ಮಾರ್ಗವಾದ 14 ಕಿ.ಮೀ. ರಾಮಪಥದಲ್ಲಿ ಮದ್ಯ ಮತ್ತು ಮಾಂಸ ಮಾರಾಟವನ್ನು ನಿಷೇಧಿಸಲು ಅಯೋಧ್ಯೆ ಮಹಾನಗರ ಪಾಲಿಕೆಯು 2025ರ ಮೇಯಲ್ಲಿ ನಿರ್ಧಾರ ತೆಗೆದುಕೊಂಡಿದ್ದರೂ, ಈ ಒಂಭತ್ತು ತಿಂಗಳಲ್ಲಿ ಮದ್ಯ ಮಾರಾಟದ ಮೇಲಿನ ನಿಷೇಧವನ್ನು ಜಾರಿಗೆ ತರಲಾಗಿಲ್ಲ. ಸುಮಾರು ಎರಡು ಡಜನ್‌ಗೂ ಹೆಚ್ಚು ಮಳಿಗೆಗಳು ಈ ಪ್ರದೇಶದಲ್ಲಿ ಮದ್ಯ ಮಾರಾಟ ಮಾಡುತ್ತಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು, ಫೈಜಾಬಾದ್‌ನ ರೋಸ್ ಸೇರಿದಂತೆ ರಾಮ್ ಪಥ್‌ನಾದ್ಯಂತದ ಮಾಂಸದ ಅಂಗಡಿಗಳನ್ನು ಪಾಲಿಕೆ ಈಗಾಗಲೇ ತೆರವುಗೊಳಿಸಿದೆ ಎಂದು ಹೇಳಿದರು. ಆದರೆ ಮದ್ಯ ಮಾರಾಟ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಡಳಿತದ ಅನುಮತಿ ಅಗತ್ಯವಿದೆ ಎಂದರು.
ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಬೆಂಗಳೂರಿನ ದಾನಿಯಿಂದ 30 ಕೋಟಿ ರೂ. ಮೌಲ್ಯದ ಚಿನ್ನದ ಕಲಾಕೃತಿ ದಾನ
ನಿಷೇಧದ ಹೊರತಾಗಿಯೂ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಪ್ರವಾಸಿಗರಿಗೆ ಮಾಂಸಾಹಾರ ತಲುಪಿಸಲಾಗುತ್ತಿದೆ ಎಂಬ ದೂರುಗಳು ಬಂದಿವೆ ಎಂದು ಸಹಾಯಕ ಆಹಾರ ಆಯುಕ್ತ ಮಾಣಿಕ್ ಚಂದ್ರ ಸಿಂಗ್ ಹೇಳಿದ್ದಾರೆ. ದೂರುಗಳ ಹಿನ್ನೆಲೆಯಲ್ಲಿ ಆನ್‌ಲೈನ್ ಮಾಂಸಾಹಾರ ವಿತರಣೆಗೆ ನಿಷೇಧ ಹೇರಲಾಗಿದೆ. ಈ ಕುರಿತು ಎಲ್ಲ ಹೋಟೆಲ್‌ಗಳು, ಅಂಗಡಿ ಮಾಲೀಕರು ಹಾಗೂ ವಿತರಣಾ ಕಂಪನಿಗಳಿಗೆ ಮಾಹಿತಿ ನೀಡಲಾಗಿದೆ. ನಿಷೇಧ ಪಾಲನೆಯಾಗುತ್ತಿರುವುದನ್ನು ಖಚಿತಪಡಿಸಲು ನಿರಂತರ ನಿಗಾವಹಿಸಲಾಗುವುದು ಎಂದು ಅವರು ಹೇಳಿದರು.