ಮುಂಬೈ, ನ. 26: 18 ವರ್ಷಗಳ ಹಿಂದೆ ಇದೇ ದಿನ ಅಂದರೆ 2008ರ ನವೆಂಬರ್ 26ರಂದು ವಾಣಿಜ್ಯ ನಗರಿ ಮುಂಬೈ ಮೇಲೆ ನಡೆದ ಉಗ್ರರ ದಾಳಿ ನೆನಪು ಈಗಲೂ ಭಾರತೀಯರು ಒಂದುಕ್ಷಣ ಬೆಚ್ಚಿ ಬೀಳುತ್ತಾರೆ (26/11 Mumbai terror attacks). ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ಸುಮಾರು 10 ಉಗ್ರರು ಮುಂಬೈಯ ವಿವಿಧ ಕಡೆಗಳಲ್ಲಿ ನಡೆಸಿದ ದಾಳಿಗಳಲ್ಲಿ 175 ಮಂದಿ ಮೃತಪಟ್ಟು 300ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಪಾಕಿಸ್ತಾನ ಕರಾಚಿಯಿಂದ ಬೋಟ್ ಮೂಲಕ ಅರಬ್ಬಿ ಸಮುದ್ರದ ಮೂಲಕ ಮುಂಬೈಗೆ ನುಗ್ಗಿ ಭಯೋತ್ಪಾದಕರು ನರಮೇಧ ನಡೆಸಿದರು. ಅಂದು ಕಾಮಾ ಆಸ್ಪತ್ರೆಯ ನರ್ಸ್ ಅಂಜಲಿ ಕುಲ್ತೆ ತೋರಿದ ದಿಟ್ಟ ನಡೆ 20 ಗರ್ಭಿಣಿಯರ ಪ್ರಾಣ ಉಳಿಸಿದೆ. ಅವರ ಸಾಹಸಗಾಥೆ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
ಮುಂಬೈ ಕಾಮಾ ಆಸ್ಪತ್ರೆಗೂ ನುಗ್ಗಿದ ಉಗ್ರರು ಮನಬಂದಂತೆ ಗುಂಡು ಹಾರಿಸಿದರು. ಅನಿರೀಕ್ಷಿತ ದಾಳಿಗೆ ಅಲ್ಲಿದ್ದವರೆಲ್ಲ ನಡುಗಿ ಹೋದರೂ ಅಂಜಲಿ ಅಲ್ಲಿದ್ದವರ ಸುರಕ್ಷತೆಯತ್ತ ಗಮನ ಹರಿಸಿದರು. ಅವರು ಗರ್ಭಿಣಿಯರ ಪ್ರಾಣ ಉಳಿಸಿದ್ದು ಹೇಗೆ ಎನ್ನುವ ರೋಚಕ ಸ್ಟೋರಿ ಇಲ್ಲಿದೆ.
ಉಗ್ರರ ದಾಳಿ ನಡುವೆ ರೋಗಿಗಗಳ ಪ್ರಾಣ ಉಳಿಸಿದ ನರ್ಸ್ ಅಂಜಲಿ:
ಘಟನೆ ವಿವರ
ಆಸ್ಪತ್ರೆಯಾದ್ಯಂತ ಗುಂಡಿನ ಮೊರೆತ ಸದ್ದು ಮಾಡಿದಾಗ ಅಂಜಲಿ ಮಾಡಿದ ಮೊದಲ ಕೆಲಸವೇ ತಮ್ಮ ಆರೈಕೆಯಲ್ಲಿದ್ದ 20 ಗರ್ಭಿಣಿಯರನ್ನು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸಿದ್ದು. ಅಂದು ಅವರು ಪ್ರಸವಪೂರ್ವ ವಾರ್ಡ್ನಲ್ಲಿ ನೈಟ್ ಶಿಫ್ಟ್ ಡ್ಯೂಟಿಯಲ್ಲಿದ್ದರು. ʼʼಛತ್ರಪತಿ ಶಿವಾಜಿ ಟರ್ಮಿನಸ್ನಲ್ಲಿ ದಾಳಿ ನಡೆಸಿದ ಉಗ್ರರು ಆಸ್ಪತ್ರೆಯತ್ತ ಮುನ್ನುಗ್ಗುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಯಿತು. ಅದಾಗಿ ಸ್ವಲ್ಪ ಹೊತ್ತಿನಲ್ಲೇ ನಮ್ಮ ಕಟ್ಟಡದ ಸಮೀಪದಲ್ಲೇ ಗುಂಡಿನ ದಾಳಿಯ ಶಬ್ದ ಕೇಳಿಸತೊಡಗಿತುʼʼ ಎಂದು ಅವರು ಅಂದಿನ ಘಟನೆಯನ್ನು ವಿವರಿಸಿದ್ದಾರೆ.
ಮುಂಬೈ ದಾಳಿ ಸಂತ್ರಸ್ತರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಗೌರವ ನಮನ
ಕಿಟಿಕಿಯಿಂದ ನೋಡಿದಾಗ ಅವರಿಗೆ ಶಸ್ತ್ರಧಾರಿ ಉಗ್ರರು ಭದ್ರತಾ ಸಿಬ್ಬಂದಿಗೆ ಶೂಟ್ ಮಾಡಿ ಆಸ್ಪತ್ರೆಯೊಳಗೆ ನುಗ್ಗುತ್ತಿರುವುದು ಕಾಣಿಸಿತು. ಕೂಡಲೇ ಎಚ್ಚೆತ್ತ ಅಂಜಲಿ 20 ಗರ್ಭಿಣಿಯರನ್ನು ವಾರ್ಡ್ನ ಒಳಗಿರುವ ಚಿಕ್ಕ ಅಡುಗೆ ಕೋಣೆಗೆ ಸಾಗಿಸಿದರು. ಬಳಿಕ ಅಲ್ಲಿದ್ದ ಲೈಟ್ಗಳನ್ನು ಆರಿಸಿ ಎಲ್ಲರಿಗೂ ಮೊಬೈಲ್ ಸೈಲೆಂಟ್ ಮೋಡ್ನಲ್ಲಿ ಇರಿಸಲು ಸೂಚಿಸಿದರು. ಜತೆಗೆ ಅವರಿಗೆಲ್ಲ ಧೈರ್ಯ ತುಂಬಿದರು.
ದಾಳಿ ಮಧ್ಯೆಯೇ ಪ್ರಸವ
ಈ ಪರಿಸ್ಥಿತಿ ಇನ್ನೂ ಕಠಿಣ ಎನಿಸಿದ್ದು ಈ ವೇಳೆ ಗರ್ಭಿಣಿಯೊಬ್ಬರಿಗೆ ಪ್ರಸವ ವೇದನೆ ಕಾಣಿಸಿಕೊಂಡಾಗ. ʼʼಹೈ ರಿಸ್ಕ್ ಸ್ಥಿತಿಯಲ್ಲಿದ್ದ ಗರ್ಭಿಣಿಯೊಬ್ಬರಿಗೆ ಇದೇ ವೇಳೆ ಹೈಪರ್ಟೆನ್ಶನ್ ಕಾಣಿಸಿಕೊಂಡಿತು. ವೈದ್ಯರಿಗೆ ಅನುಪಸ್ಥಿತಿಯಲ್ಲಿ ಅವರನ್ನು ಲೇಬರ್ ರೂಂಗೆ ಸುರಕ್ಷಿತವಾಗಿ ಕರೆದೊಯ್ದೆʼʼ ಎಂದು ನೆನಪಿಸಿಕೊಂಡಿದ್ದಾರೆ. ಅದೃಷ್ಟವಶಾತ್ ಅವರು ಆರೋಗ್ಯಪೂರ್ಣ ಮಗುವಿಗೆ ಜನ್ಮ ನೀಡಿದರು. ಬಳಿಕ ಆ ಮಗುವಿಗೆ ಗೋಲಿ ಎಂದು ಹೆಸರಿಡಲಾಯಿತು.
ಕಾಮಾ ಆಸ್ಪತ್ರೆಯನ್ನು ಗಂಟೆಗಳ ಕಾಲ ಉಗ್ರರು ಮುತ್ತಿಗೆ ಹಾಕಿದರು. ಈ ವೇಳೆ ಹಲವು ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಹತರಾದರೂ ಅಂಜಲಿ ಮತ್ತು ಅವರ ಸುಪರ್ದಿಯಲ್ಲಿದ್ದ ಗರ್ಭಿಣಿಯರು ಸುರಕ್ಷಿತರಾಗಿದ್ದರು.
ದಾಳಿ ನಡೆದು ಹಲವು ವರ್ಷಗಳ ನಂತರ ಅಂದರೆ 2022ರ ಡಿಸೆಂಬರ್ನಲ್ಲಿ ಅಂಜಲಿ ಕುಲ್ತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು. ಆ ಮುತ್ತಿಗೆಯ ಸಂದರ್ಭದಲ್ಲಿ ತಮ್ಮ ಉಸ್ತುವಾರಿಯಲ್ಲಿದ್ದವರನ್ನು ರಕ್ಷಿಸಿದ್ದು ಹೇಗೆ ಎನ್ನುವುದನ್ನು ವಿವರಿಸಿದರು.
ಮುಂಬೈ ದಾಳಿ ಪ್ರಕರಣಕ್ಕೆ ಹೊಸ ತಿರುವು: ಪಾಕ್ ಮೂಲದ 6 ಆರೋಪಿಗಳ ವಿರುದ್ಧ ವಿಚಾರಣೆ ಆರಂಭ
ತೆರೆಮೇಲೆ ಅಂಜಲಿ ಕಥೆ
ಅಂಜಲಿಯ ಈ ಸಾಹಸಗಾಥೆ ಬಾಲಿವುಡ್ ಚಿತ್ರವಾಗಿ ತೆರೆ ಮೇಲೆ ಬಂದಿದೆ. ಈ ವರ್ಷ ಜೂನ್ನಲ್ಲಿ ತೆರೆಕಂಡ ಕಂಗನಾ ರಾಣಾವತ್ ಅಭಿನಯದ ʼಭಾರತ ಭಾಗ್ಯ ವಿಧಾತʼ ಸಿನಿಮಾಕ್ಕೆ ಅಂಜಲಿಯೇ ಸ್ಫೂರ್ತಿ ಎನ್ನಲಾಗಿದೆ. ಭಾರತ ಇತಿಹಾಸದಲ್ಲಿ ಕಪ್ಪು ಅಧ್ಯಾಯವೆಂದೇ ಕರೆಯಲ್ಪಡುವ 26/11 ಮುಂಬೈ ದಾಳಿ ವೇಳೆ ಅಂಜಲಿ ಅವರಂತಹವರು ತೋರಿದ ದಿಟ್ಟ ನಡೆಯನ್ನು ಈಗಲೂ ಜನ ನೆನಪಿಸಿಕೊಳ್ಳುತ್ತಿದ್ದಾರೆ.
ದೇಶದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್ಸೈಟ್ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.