ಲಖನೌ, ಸೆ.9: ರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಯುವಕರ ಗುಂಪೊಂದು 47 ವರ್ಷದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದ ಕಾಕದೇವ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆಸ್ಪತ್ರೆಗೆ (Crime News) ದಾಖಲಾಗಿದ್ದ ಗಾಯಾಳು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅಮಿತ್ ಕುಮಾರ್, ಮೃತ ದುರ್ದೈವಿ. ರಸ್ತೆ ಮಧ್ಯದಲ್ಲಿ ಮೂತ್ರ ವಿಸರ್ಜನೆ ಮಾಡಿದ್ದಕ್ಕೆ ಅಮಿತ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಯುವಕರ ಗುಂಪು ಆತನನ್ನು ಸುತ್ತುವರೆದು ಹಲ್ಲೆ ನಡೆಸಿದೆ.
ಆರೋಪಿಗಳು ಕುಮಾರ್ ಅವರ ತಲೆಗೆ ಇಟ್ಟಿಗೆಯಿಂದ ಹಲವು ಬಾರಿ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಕುಮಾರ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಎರಡು ದಿನಗಳ ಕಾಲ ಚಿಕಿತ್ಸೆ ಪಡೆದ ನಂತರ ಅವರು ನಿಧನರಾದರು.
ಇಡೀ ಘಟನೆ ಘಟನಾ ಸ್ಥಳದ ಬಳಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೆಪ್ಟೆಂಬರ್ 5 ರಂದು ತಡರಾತ್ರಿ, ಅಮಿತ್ ಕುಮಾರ್ ಎಂಬ ವ್ಯಕ್ತಿಯನ್ನು ಅವರ ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಿದರು. ಅವರು ಗಂಭೀರ ಗಾಯಗೊಂಡಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಮಿತ್ ಕುಮಾರ್ ಸೆಪ್ಟೆಂಬರ್ 7ರಂದು ಮೃತಪಟ್ಟರು. ಈ ಮಾಹಿತಿ ಪಡೆದ ಪೊಲೀಸರು ತಕ್ಷಣವೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ವಿಚಾರಣೆ ನಡೆಸಿದರು ಎಂದು ಉಪ ಪೊಲೀಸ್ ಆಯುಕ್ತ (ಕೇಂದ್ರ) ಅತುಲ್ ಶ್ರೀವಾಸ್ತವ ಹೇಳಿದ್ದಾರೆ.
ಆಕಸ್ಮಿಕವಾಗಿ ಸಿಡಿದ ಗುಂಡು; ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಪೇದೆ ಠಾಣೆಯಲ್ಲೇ ಬಲಿ
ವಿಚಾರಣೆ ವೇಳೆ ಯುವಕರ ಗುಂಪೊಂದು ಅವರಿಗೆ ಮಾರಣಾಂತಿಕ ಹಲ್ಲೆ ನಡೆಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಕಾಕದೇವ್ ಪೊಲೀಸ್ ಠಾಣೆಯಲ್ಲಿ ಸೂಕ್ತ ಕಾನೂನು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣ ಸಂಬಂಧ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲು ಬಲೆ ಬೀಸಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಶ್ರೀವಾಸ್ತವ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ಮಹಿಳೆ ಅನುಮಾನಾಸ್ಪದ ಸಾವು
ಬಾಡಿಗೆ ಮನೆಯಲ್ಲಿ ಮಹಿಳೆಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಚೊಕ್ಕಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಇನಮಿಂಚೇನಹಳ್ಳಿ ಗ್ರಾಮದ ಚೈತ್ರಾ ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಮೂಲದ ಶಬ್ಬೀರ್ ಎಂಬ ವ್ಯಕ್ತಿಯ ವಿರುದ್ಧ ಕುಟುಂಬಸ್ಥರು ಹಲ್ಲೆ ಹಾಗೂ ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ.
ಚೈತ್ರಾ ಅವರು ಕಳೆದ 7-8 ವರ್ಷಗಳಿಂದ ಪತಿಯಿಂದ ದೂರವಾಗಿ ವಾಸಿಸುತ್ತಿದ್ದು, ಇಬ್ಬರು ಮಕ್ಕಳೊಂದಿಗೆ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು ಎನ್ನಲಾಗಿದೆ. ಈ ನಡುವೆ ಶಬ್ಬೀರ್ ಎಂಬಾತನೊಂದಿಗೆ ಪರಿಚಯವಿದ್ದು, ಇಬ್ಬರೂ ಚೊಕ್ಕಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎನ್ನಲಾಗಿದೆ.
ಘಟನೆ ನಡೆದ ಬಳಿಕ ಚೈತ್ರಾ ಅವರನ್ನು ಸ್ಥಳೀಯರ ನೆರವಿನಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಷ್ಟರಲ್ಲಿ ಶಬ್ಬೀರ್ ಸ್ಥಳದಿಂದ ತೆರಳಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೆ, ಮೃತೆಯ ಮೊಬೈಲ್ ಫೋನ್ ಕೂಡ ಶಬ್ಬೀರ್ ಬಳಿ ಇದೆ ಎಂದು ಕುಟುಂಬದವರು ತಿಳಿಸಿದ್ದಾರೆ.