ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಒಂದೇ ಹಬ್ಬ, ಹಲವು ಸಂಪ್ರದಾಯ: ದೇಶದ ವಿವಿಧ ರಾಜ್ಯಗಳಲ್ಲಿ ನವರಾತ್ರಿ ಹೇಗೆ ಆಚರಿಸ್ತಾರೆ ಗೊತ್ತಾ?

ಪ್ರತಿ ವರ್ಷ ನವರಾತ್ರಿ ಬಂತೆಂದರೆ ದೇಶದಾದ್ಯಂತ ಸಂಭ್ರಮದ ವಾತಾವರಣ ಮನೆಮಾಡಿರುತ್ತದೆ. ದೇಶದ ಒಂದೊಂದು ರಾಜ್ಯದಲ್ಲಿ ತನ್ನದೇ ಆದ ಸಂಸ್ಕೃತಿ ಪರಂಪರೆ ಮತ್ತು ವಿಶಿಷ್ಟ ಆಚರಣೆಯ ವೈಭವ ಹೊಂದಿರುವ ನವರಾತ್ರಿಯನ್ನು ಒಂಬತ್ತು ದಿನಗಳ ಕಾಲ ವಿಭಿನ್ನವಾಗಿ ಆಚರಿಸಲಾಗುತ್ತದೆ. ವಿಶ್ವಪ್ರಸಿದ್ಧ ಮೈಸೂರು ದಸರಾದಿಂದ ಹಿಡಿದು, ಕೋಲ್ಕತ್ತಾದ ದುರ್ಗಾಪೂಜೆ, ಗುಜರಾತ್‌ನ ಗರ್ಬಾ ನೃತ್ಯ ಹಾಗೂ ಉತ್ತರ ಭಾರತದ ರಾವಣ ದಹನದವರೆಗೆ, ದೇಶದ ನಾನಾ ಭಾಗಗಳಲ್ಲಿ ನವರಾತ್ರಿಯನ್ನು ಹೇಗೆ ಭಿನ್ನವಾಗಿ ಆಚರಿಸಲಾಗುತ್ತದೆ ಎಂಬುದರ ವಿಶೇಷ ಸ್ಟೋರಿ ಇಲ್ಲಿದೆ ನೋಡಿ.

ಸಂಗ್ರಹ ಚಿತ್ರ

ಜ್ಯೋತಿ. ಎಸ್‌

ಬೆಂಗಳೂರು: ಭಾರತವೆಂದರೆ ಹಬ್ಬಗಳ ನಾಡು. ಇಲ್ಲಿ ಪ್ರತಿ ಹಬ್ಬಕ್ಕೂ ತನ್ನದೇ ಆದ ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆ ಹಾಗೂ ಆಚರಣೆಯ ವೈವಿಧ್ಯತೆಯಿದೆ. ಅದರಲ್ಲೂ ನವರಾತ್ರಿ (Navaratri) ಒಂದೇ ಹಬ್ಬವಾದರೂ, ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ನವರಾತ್ರಿಯನ್ನು ಆಚರಿಸುವ ರೀತಿ ಮಾತ್ರ ಸಂಪೂರ್ಣ ಭಿನ್ನ. ಪಶ್ಚಿಮ ಬಂಗಾಳದ ದುರ್ಗಾ ಪೂಜೆಯಿಂದ ಹಿಡಿದು ದಕ್ಷಿಣದ ಮೈಸೂರು ದಸರಾವರೆಗೆ ನಾವರಾತ್ರಿಯನ್ನು ಅತ್ಯಂತ ವಿಭಿನ್ನವಾಗಿ ಹಾಗೂ ವಿಶೇಷವಾಗಿ ಆಚರಿಸುತ್ತಾರೆ. ದೇಶದ ನಾನಾ ಭಾಗಗಳಲ್ಲಿ ನವರಾತ್ರಿಯನ್ನು ಹೇಗೆ ವಿಭಿನ್ನವಾಗಿ ಆಚರಿಸಲಾಗುತ್ತದೆ ಎಂಬುದರ ರೋಚಕ ಮಾಹಿತಿ ಇಲ್ಲಿದೆ.

ಕರ್ನಾಟಕದ ನಾಡಹಬ್ಬ ‘ಮೈಸೂರು ದಸರಾ’

ಕರ್ನಾಟಕದಲ್ಲಿ ನವರಾತ್ರಿಯನ್ನು ನಾಡಹಬ್ಬವಾಗಿ ಅತ್ಯಂತ ಶ್ರದ್ಧೆ ಹಾಗೂ ರಾಜವೈಭವದಿಂದ ಆಚರಿಸಲಾಗುತ್ತದೆ. ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಆರಂಭವಾಗುವ ಈ ಹಬ್ಬವು ವಿಜಯದಶಮಿಯಂದು ನಡೆಯುವ ವಿಶ್ವಪ್ರಸಿದ್ಧ 'ಜಂಬೂಸವಾರಿ ಯೊಂದಿಗೆ ಮುಕ್ತಾಯಗೊಳ್ಳುತ್ತದೆ. ಚಿನ್ನದ ಅಂಬಾರಿಯಲ್ಲಿ ತಾಯಿ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನು ಆನೆಯ ಮೇಲೆ ಮೆರವಣಿಗೆ ಮಾಡುವುದು ಇಲ್ಲಿನ ಪ್ರಮುಖ ಆಕರ್ಷಣೆ.

ದಸರಾ ದಿನಗಳಲ್ಲಿ ಮೈಸೂರು ನೋಡುವುದೇ ಚಂದ, ಅರಮನೆಯನ್ನು ಹಾಗೂ ಇಡೀ ಮೈಸೂರನ್ನು ಲಕ್ಷಕ್ಕೂ ಹೆಚ್ಚು ವಿದ್ಯುತ್ ದೀಪಗಳಿಂದ ಶೃಂಗರಿಸಲಾಗುತ್ತದೆ. ಇದನ್ನು ನೋಡಲೆಂದೇ ದೇಶದ ವಿವಿಧ ಭಾಗಗಳಿಂದ ಸಾವಿರಾರು ಜನರು ಬರುತ್ತಾರೆ. ಇದರೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ದಸರಾ ವಸ್ತುಪ್ರದರ್ಶನ ಹಾಗೂ ಮಡಿಕೇರಿಯ ದಸರಾ ಕರಗ ಉತ್ಸವ, ಮನೆಗಳಲ್ಲಿ ಬೊಂಬೆಗಳನ್ನು ಕುರಿಸುವುದು ಮತ್ತು ಕರಾವಳಿಯ ದಸರಾದ ಹುಲಿವೇಷ ನೃತ್ಯಗಳು ಕರ್ನಾಟಕದ ದಸರಾ ಮೆರುಗನ್ನು ಹೆಚ್ಚಿಸುತ್ತವೆ.

ಪಶ್ಚಿಮ ಬಂಗಾಳದ ದುರ್ಗಾಪೂಜೆ

ಪಶ್ಚಿಮ ಬಂಗಾಳದಲ್ಲಿ ನವರಾತ್ರಿಯನ್ನು 'ದುರ್ಗಾ ಪೂಜಾ' ಆಗಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಕೆಡುಕಿನ ಮೇಲೆ ವಿಜಯದ ಸಂಕೇತವಾಗಿ ಅತ್ಯಂತ ಶ್ರದ್ಧೆ ಹಾಗೂ ಭಕ್ತಿಯಿಂದ ಆಚರಿಸಲಾಗುತ್ತದೆ. ಕೋಲ್ಕತ್ತಾ ನಗರದಾದ್ಯಂತ ಕಲಾತ್ಮಕವಾದ, ಬೃಹತ್ ಹಾಗೂ ವೈವಿಧ್ಯಮಯ ಥೀಮ್ ಆಧಾರಿತ ಮಂಟಪಗಳನ್ನು ನಿರ್ಮಿಸಿ ದುರ್ಗಾದೇವಿಯ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗುತ್ತದೆ. ವಿಜಯದಶಮಿಯಂದು ಮಹಿಳೆಯರು ಪರಸ್ಪರ ಸಿಂಧೂರ ಹಚ್ಚಕೊಳ್ಳುವ ಮೂಲಕ ಸಿಂಧೂರ್ ಖೇಲಾ ಆಚರಣೆಯನ್ನು ಮಾಡುತ್ತಾರೆ. ಬಳಿಕ ದೇವಿಯ ಮೂರ್ತಿಯನ್ನು ವಿಸರ್ಜಿಸಲಾಗುತ್ತದೆ.

ಗುಜರಾತ್‌ನ ಗರ್ಬಾ ಮತ್ತು ದಾಂಡಿಯಾ ವೈಭವ

ಗುಜರಾತ್‌ನಲ್ಲಿ ನವರಾತ್ರಿ ಎಂದರೆ ನೃತ್ಯ ಮತ್ತು ಬಣ್ಣಗಳ ಸಂಭ್ರಮ. ನವರಾತ್ರಿಯ ಒಂಬತ್ತು ದಿನಗಳ ಕಾಲ ಜನಪ್ರಿಯ ಜಾನಪದ ನೃತ್ಯಗಳಾದ 'ಗರ್ಬಾ' ಮತ್ತು 'ದಾಂಡಿಯಾವನ್ನು ಆಯೋಜಿಸಲಾಗುತ್ತದೆ. ಜನರು ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು, ದೇವಿಯ ಸುತ್ತ ವೃತ್ತಾಕಾರದಲ್ಲಿ ಸುತ್ತುತ್ತಾ ರಾತ್ರಿ ಇಡೀ ನೃತ್ಯ ಮಾಡುತ್ತಾ ಆರಾಧಿಸುತ್ತಾರೆ. ಸಣ್ಣ ಹುಡುಗಿಯರಿಗೆ ಉಡುಗೊರೆಯಾಗಿ ಹಣ ಅಥವಾ ಬಟ್ಟೆಗಳನ್ನು ನೀಡಿ, ಹಬ್ಬವನ್ನು ಮುಕ್ತಾಯಗೊಳಿಸುತ್ತಾರೆ.

ಹಿಮಾಚಲ ಪ್ರದೇಶದಲ್ಲಿ ʼʼಕುಲ್ಲು ದಸರಾʼʼ

ಹಿಮಾಚಲ ಪ್ರದೇಶದ ಕುಲ್ಲು ಕಣಿವೆಯಲ್ಲಿ ನಡೆಯುವ ಕುಲ್ಲು ದಸರಾ, ದಸರಾ ದಿನದಿಂದಲೇ ಪ್ರಾರಂಭವಾಗಿ ಒಂದು ವಾರಗಳ ಕಾಲ ಮುಂದುವರಿಯುತ್ತದೆ. ವಿಜಯದಶಮಿಯ ದಿನದಂದು ಸುತ್ತಮುತ್ತಲಿನ ನೂರಾರು ಹಳ್ಳಿಗಳ ಗ್ರಾಮ ದೇವತೆಗಳ ಮೂರ್ತಿಗಳನ್ನು ಮೆರವಣಿಗೆಯ ಮೂಲಕ ಧಾಲ್ಪುರ್ ಮೈದಾನಕ್ಕೆ ತರಲಾಗುತ್ತದೆ. ಇಲ್ಲಿನ ಮುಖ್ಯ ಆರಾಧ್ಯ ದೈವ ರಘುನಾಥ್ ಅಂದರೆ ಶ್ರೀರಾಮಜಿ ರಥಯಾತ್ರೆ ಅತ್ಯಂತ ಪ್ರಸಿದ್ಧ ಪಡೆದಿದೆ.

ತಮಿಳುನಾಡು ಮತ್ತು ಆಂಧ್ರಪ್ರದೇಶದ ʼʼಬೊಮ್ಮೈ ಕೊಲುʼʼ

ದಕ್ಷಿಣ ಭಾರತದ ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ನವರಾತ್ರಿಯಂದು ಬೊಮ್ಮೈ ಕೊಲು ಆಚರಣೆ ವಿಶೇಷವಾಗಿದೆ. ಮನೆಗಳಲ್ಲಿ ಚಂದ ಚಂದದ ದೇವರು, ದೇವತೆಗಳು ಹಾಗೂ ಜಾನಪದ ಪಾತ್ರಗಳ ಮಣ್ಣಿನ ಗೊಂಬೆಗಳನ್ನು ಶೃಂಗರಿಸಿ ಜೋಡಿಸಲಾಗುತ್ತದೆ. ನೆರೆಹೊರೆಯವರು ಹಾಗೂ ಸಂಬಂಧಿಕರನ್ನು ಮನೆಗೆ ಕರೆದು, ದೇವಿಯ ಹಾಡುಗಳನ್ನು ಹಾಡಿ, ಪ್ರಸಾದ ನೀಡಿ ಗೌರವಿಸಲಾಗುತ್ತದೆ.

ಉತ್ತರ ಭಾರತ ʼʼರಾಮಲೀಲಾ ಮತ್ತು ರಾವಣ ದಹನʼʼ

ಉತ್ತರ ಭಾರತದಲ್ಲಿ ನವರಾತ್ರಿಯನ್ನು ಅತ್ಯಂತ ವಿಶೇಷವಾಗಿ ಆಚರಿಸುತ್ತಾರೆ. ನವರಾತ್ರಿಯ ಕೊನೆಯ ದಿನಗಳಲ್ಲಿ ರಾಮಲೀಲಾ ನಾಟಕಗಳು ಮಾಡುವ ಮೂಲಕ ರಾಮಾಯಣದ ಕಥೆಯನ್ನು ಜನರಿಗೆ ಪ್ರದರ್ಶನ ಮಾಡುತ್ತಾರೆ. ವಿಜಯದಶಮಿಯ ರಾತ್ರಿ ಶ್ರೀರಾಮನು ರಾವಣನನ್ನು ಸಂಹಾರ ಮಾಡಿದ ಸಂಕೇತವಾಗಿ ರಾವಣ, ಕುಂಭಕರ್ಣ ಮತ್ತು ಮೇಘನಾದರ ಪ್ರತಿಮೆಗಳಿಗೆ, ಬೆಂಕಿ ಹಚ್ಚುವ ಮೂಲಕ ರಾವಣ ದಹನ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಮಾಡುತ್ತಾರೆ.

ಛತ್ತೀಸ್‌ಗಢದ ʼʼಬಸ್ತಾರ್ ದಸರಾʼʼ

ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಆಚರಿಸಲಾಗುವ ದಸರಾ ವಿಶ್ವದಲ್ಲೇ ಅತ್ಯಂತ ದೀರ್ಘಾವಧಿಯ ಸುಮಾರು 75 ದಿನಗಳು ಕಾಲ ನಡೆಯುವ ಹಬ್ಬವಾಗಿದೆ. ಇಲ್ಲಿ ರಾವಣ ದಹನ ನಡೆಯುವುದಿಲ್ಲ. ಬದಲಿಗೆ ಸ್ಥಳೀಯ ಬುಡಕಟ್ಟು ದೇವತೆಯಾದ ದಂತೇಶ್ವರಿ ದೇವಿಯನ್ನು ಆರಾಧಿಸಲಾಗುತ್ತದೆ. ಬುಡಕಟ್ಟು ಸಂಸ್ಕೃತಿ ಮತ್ತು ವಿಶಿಷ್ಟ ಆಚರಣೆಗಳಿಗೆ ಈ ಹಬ್ಬ ಸಾಕ್ಷಿಯಾಗಿದೆ. ಹೀಗೆ ದೇಶದ ಗಡಿಯುದ್ದಕ್ಕೂ ಭಾಷೆ, ಸಂಸ್ಕೃತಿ ಹಾಗೂ ಆಚರಣೆಗಳು ವಿಭಿನ್ನವಾಗಿದ್ದರೂ, 'ಕೆಡುಕಿನ ಮೇಲೆ ಒಳಿತಿನ ವಿಜಯ' ಮತ್ತು 'ಮಾತೃಶಕ್ತಿಯ ಆರಾಧನೆ' ಎಂಬ ಒಂದೇ ಭಾವನೆ ಭಾರತೀಯರನ್ನು ನವರಾತ್ರಿಯ ಈ ಪವಿತ್ರ ದಿನಗಳಲ್ಲಿ ಒಂದಾಗಿಸುತ್ತದೆ.

Vishakha Bhat Heggar

View all posts by this author