ನವದೆಹಲಿ, ಮೇ 7: ಪಹಲ್ಗಾಮ್ ಭಯೋತ್ಪಾದಕ (Pahalgam attack) ದಾಳಿಗೆ ಪ್ರತಿಕ್ರಿಯೆಯಾಗಿ ಭಾರತವು ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂದೂರ್ (Operation Sindoor) ಕಾರ್ಯಾಚರಣೆಯನ್ನು ಪ್ರಾರಂಭಿಸಿ ಒಂದು ವರ್ಷ ಕಳೆದರೂ, ಅದರ ಗಾಯಗಳು ಇನ್ನೂ ಮಾಯವಾಗಿಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ಆಪರೇಷನ್ ಸಿಂದೂರ್ ಅಡಿಯಲ್ಲಿ ಭಾರತವು 11 ನಿರ್ಣಾಯಕ ರಕ್ಷಣಾ ಸ್ಥಳಗಳು ಮತ್ತು ಒಂಭತ್ತು ಭಯೋತ್ಪಾದಕ ತಾಣಗಳ ಮೇಲೆ ದಾಳಿ ಮಾಡಿತು. ಒಂದು ವರ್ಷದ ನಂತರ, ಅವುಗಳ ಸ್ಥಿತಿ ಏನಾಗಿದೆ?
ಕನಿಷ್ಠ ಎಂಟು ವಾಯುನೆಲೆಗಳ ಮಧ್ಯಮ ಮತ್ತು ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಉಪಗ್ರಹ ಚಿತ್ರಗಳನ್ನು ವಿಶ್ಲೇಷಿಸಿದಾಗ, ಪಾಕಿಸ್ತಾನವು ದಾಳಿಗೊಳಗಾದ ರಕ್ಷಣಾ ನೆಲೆಗಳ (ಪ್ರಮುಖವಾಗಿ ವಿಮಾನ ನಿಲ್ದಾಣದ ಹ್ಯಾಂಗರ್‌ಗಳು) ಪ್ರತ್ಯೇಕ ಕಟ್ಟಡಗಳನ್ನು ಸರಿಪಡಿಸಲು ಸರಾಸರಿ ಆರರಿಂದ ಏಳು ತಿಂಗಳುಗಳನ್ನು ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ಕೆಲವು ಸೌಲಭ್ಯಗಳನ್ನು ಪುನರ್ನಿರ್ಮಿಸಿ ಸಾಮಾನ್ಯ ಕಾರ್ಯಾಚರಣೆಗೆ ಮರಳಿಸಲಾಗಿದೆ ಎಂದು ತೋರುತ್ತದೆಯಾದರೂ, ಇನ್ನೂ ಹಲವಾರು ನಿರ್ವಹಣೆಯಲ್ಲಿವೆ.
ಕೆಲವು ನೆಲೆಗಳಲ್ಲಿ ರನ್‌ವೇ ಪ್ಯಾಚ್‌ವರ್ಕ್ ಕೂಡ ತಿಂಗಳುಗಳನ್ನು ತೆಗೆದುಕೊಂಡಿತು. ಇತರ ಸ್ಥಳಗಳಲ್ಲಿ ಪುನರ್ನಿರ್ಮಾಣ ಚಟುವಟಿಕೆಗಳು ಸುಮಾರು ಒಂದು ವರ್ಷದ ನಂತರವೂ ಮುಂದುವರೆದವು.
"ಭಾರತ ಯಾವುದನ್ನೂ ಕ್ಷಮಿಸದು": ಆಪರೇಷನ್ ಸಿಂದೂರ್ ವಿಜಯೋತ್ಸವದ ವಿಡಿಯೋ ಹಂಚಿಕೊಂಡ ವಾಯುಪಡೆ
ಮಾಧ್ಯಮ ಸಂಸ್ಥೆ ಇಂಡಿಯಾ ಟುಡೇ ಓಪನ್ ಸೋರ್ಸ್ ಇಂಟೆಲಿಜೆನ್ಸ್ (OSINT) ಇತ್ತೀಚೆಗೆ ನಡೆಸಿದ ವಿಶ್ಲೇಷಣೆ ಪ್ರಕಾರ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ (ESA) ಸೆಂಟಿನೆಲ್-2 ನ ಹಳೆಯ ಉಪಗ್ರಹ ಚಿತ್ರಗಳು ಮತ್ತು ಅಮೆರಿಕ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆ ವಾಂಟರ್ (Vantor) ಒದಗಿಸಿದ ಹೈ-ರೆಸಲ್ಯೂಶನ್ ಚಿತ್ರಗಳನ್ನು ಬಳಸಿಕೊಂಡು ಇಂಡಿಯಾ ಟುಡೇ ತಂಡವು ಪಾಕಿಸ್ತಾನದ 8 ಪ್ರಮುಖ ವಾಯುನೆಲೆಗಳ ಮೇಲೆ ನಿಗಾ ಇರಿಸಿದೆ.
ಮುರಿದ್ ಮತ್ತು ಸುಕ್ಕೂರ್‌ನಲ್ಲಿ ಹಾನಿ ಎಷ್ಟು ತೀವ್ರವಾಗಿತ್ತೆಂದರೆ, ದುರಸ್ತಿಗೆ ಮೊದಲು ಹಾನಿಗೊಳಗಾದ ರಚನೆಗಳನ್ನು ಕೆಡವಬೇಕಾಗಿತ್ತು. ಪಿಎಎಫ್ ಬೇಸ್ ಭೋಲಾರಿ ಇನ್ನೂ ಪುನಃಸ್ಥಾಪನೆ ಹಂತದಲ್ಲಿದೆ ಎಂದು ತೋರುತ್ತದೆ.
ಶೋರ್‌ಕೋಟ್‌ನಲ್ಲಿರುವ ಪಿಎಎಫ್ ಬೇಸ್ ರಫೀಕಿ ಕೂಡ ಆಪರೇಷನ್ ಸಿಂದೂರ್ ಸಂದರ್ಭದಲ್ಲಿ ಭಾರತೀಯ ಪಡೆಗಳು ಗುರಿ ಮಾಡಿದ ಮತ್ತೊಂದು ಮಿಲಿಟರಿ ನೆಲೆಯಾಗಿತ್ತು. ಈ ಪ್ರದೇಶದ ಹೈ-ರೆಸಲ್ಯೂಶನ್ (ಉನ್ನತ ಗುಣಮಟ್ಟದ) ಉಪಗ್ರಹ ಚಿತ್ರಗಳು ಲಭ್ಯವಿಲ್ಲದ ಕಾರಣ ಮತ್ತು ಸ್ವತಂತ್ರವಾಗಿ ಪರಿಶೀಲಿಸಬಹುದಾದ ಪುರಾವೆಗಳಿಲ್ಲದ ಕಾರಣ, ದಾಳಿಯ ನಂತರ ಅಲ್ಲಿ ಉಂಟಾದ ಹಾನಿಯ ಸ್ವರೂಪ ಅಥವಾ ವ್ಯಾಪ್ತಿಯನ್ನು ನಿಖರವಾಗಿ ಅಂದಾಜಿಸಲು ಸಾಧ್ಯವಾಗಲಿಲ್ಲ ಎಂದು ಇಂಡಿಯಾಟುಡೇ ವರದಿ ತಿಳಿಸಿದೆ.
ಅಮೆರಿಕ ಮೂಲದ ಬಾಹ್ಯಾಕಾಶ ತಂತ್ರಜ್ಞಾನ ಸಂಸ್ಥೆ ವ್ಯಾಂಟರ್‌ನಿಂದ ಪಡೆಯಲಾದ ಮತ್ತು ಇಂಡಿಯಾ ಟುಡೇಯ ಓಪನ್-ಸೋರ್ಸ್ ಇಂಟೆಲಿಜೆನ್ಸ್ ತಂಡವು ವಿಶ್ಲೇಷಿಸಿದ ಹೈ-ರೆಸಲ್ಯೂಷನ್ ಉಪಗ್ರಹ ಚಿತ್ರಗಳು, ಬಹಾವಲ್ಪುರ್ ಮತ್ತು ಮುಜಫರಾಬಾದ್‌ನಲ್ಲಿ ದಾಳಿಯಿಂದ ಹಾನಿಗೊಳಗಾದ ಪ್ರದೇಶದಲ್ಲಿ ಹೊಸ ದುರಸ್ತಿ ಕೆಲಸ, ಯಂತ್ರೋಪಕರಣಗಳ ಇರುವಿಕೆಯನ್ನು ತೋರಿಸುತ್ತವೆ.
'ಆಪರೇಷನ್ ಸಿಂದೂರ್'ಗೆ ಒಂದು ವರ್ಷ: ಪಹಲ್ಗಾಮ್ ಹತ್ಯಾಕಾಂಡಕ್ಕೆ ಭಾರತದ ಸೇಡು ಹೇಗಿತ್ತು?
ಪಿಎಎಫ್ ಬೇಸ್ ಭೋಲಾರಿಯಲ್ಲಿ, ವ್ಯಾಂಟರ್ ಚಿತ್ರಣವು ಒಂದು ವರ್ಷದ ನಂತರವೂ ಪುನಃಸ್ಥಾಪನೆ ಕಾರ್ಯವು ಅಪೂರ್ಣವಾಗಿಯೇ ಉಳಿದಿದೆ ಎಂಬುದನ್ನು ತೋರಿಸುತ್ತದೆ. ಕಾರ್ಯಾಚರಣೆಯ ನಂತರದ ಚಿತ್ರಣವು, ತೀವ್ರವಾಗಿ ಹಾನಿಗೊಳಗಾದ ಹ್ಯಾಂಗರ್ ಸಂಕೀರ್ಣವನ್ನು ತೋರಿಸಿದೆ. ಜೂನ್ 2, 2025 ರ ನಂತರದ ಚಿತ್ರಣವು ಟಾರ್ಪಾಲಿನ್‌ನಿಂದ ಆವೃತವಾದ ರಚನೆಯನ್ನು ತೋರಿಸಿದರೆ, ಜನವರಿ 28, 2026 ರ ದಿನಾಂಕದ ಚಿತ್ರಣವು ಹಾನಿಗೊಳಗಾದ ವಿಭಾಗದಿಂದ ಛಾವಣಿಯ ಹಾಳೆಗಳನ್ನು ತೆಗೆದುಹಾಕಲಾಗಿದೆ ಎಂಬುದನ್ನು ತೋರಿಸುತ್ತದೆ.
ಸಿಂಧ್‌ನ ಜಂಶೋರೊ ಜಿಲ್ಲೆಯಲ್ಲಿರುವ ಈ ನೆಲೆಯು ಭಾರತೀಯ ದಾಳಿಯ ಸಮಯದಲ್ಲಿ ಹೆಚ್ಚು ಹಾನಿಗೊಳಗಾದವುಗಳಲ್ಲಿ ಒಂದಾಗಿದೆ. ಇದಲ್ಲದೆ, ಪಂಜಾಬ್‌ನ ಚಕ್ವಾಲ್ ಜಿಲ್ಲೆಯಲ್ಲಿರುವ ಪಿಎಎಫ್ ಬೇಸ್ ಮುರಿದ್‌ನಲ್ಲಿ ಉಪಗ್ರಹ ಚಿತ್ರಣಗಳು ಹೆಚ್ಚು ತೀವ್ರವಾದ ಪರಿಣಾಮವನ್ನು ಸೂಚಿಸುತ್ತವೆ.